ಸುಂಕವಿಲ್ಲದೆ ವಾಪಸ್ ಬಂದರಪ್ಪ ಈಶ್ವರಪ್ಪ

ಯಡಿಯೂರಪ್ಪನವರ ನಾಯಕತ್ವದ ವಿರುದ್ಧ ತಿರುಗಿಬಿದ್ದಿರುವ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ, ಅನಂತ್ ಕುಮಾರ್, ಜನಾರ್ದನ ರೆಡ್ಡಿ, ಅರವಿಂದ್ ಲಿಂಬಾವಳಿ, ಸಿಟಿ ರವಿ ಮುಂತಾದವರಿಗೆ, ನಾಯಕತ್ವ ಕುರಿತು ಅನಗತ್ಯವಾಗಿ ಗೊಂದಲ ಸೃಷ್ಟಿಸುವುದರ ಬದಲು ಮುಂಬರುವ ಉಪಚುನಾವಣೆಯತ್ತ ಮತ್ತು ಪಕ್ಷ ಬಲಪಡಿಸುವತ್ತ ಗಮನ ಹರಿಸಬೇಕೆಂದು ಸ್ಪಷ್ಟ ಸಂದೇಶ ರವಾನಿಸಿದೆ.
ಎಲ್ ಕೆ ಅಡ್ವಾಣಿ, ನಿತೀನ್ ಗಡ್ಕರಿ, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ವೆಂಕಯ್ಯ ನಾಯ್ಡು, ಮುರಳಿ ಮನೋಹರ ಜೋಶಿ ಮುಂತಾದ ಹಿರಿಯ ನಾಯಕರನ್ನು ಭೇಟಿ ಮಾಡಿರುವ ಭಿನ್ನಮತೀಯರು, ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾಗದಿದ್ದರೆ ಪಕ್ಷಕ್ಕೆ ಉಳಿಗಾಲವಿಲ್ಲ ಎಂದು ದೂರು ನೀಡಿದ್ದಾರೆ.
ಈ ನಿರ್ಧಾರ ಬಂದಿರುವ ಹಿನ್ನೆಲೆಯಲ್ಲಿ ದೆಹಲಿಗೆ ಅಹವಾಲು ತೆಗೆದುಕೊಂಡು ಹೋಗಿದ್ದ ನಾಯಕರು ಹೋದ ದಾರಿಗೆ ಸುಂಕವಿಲ್ಲದೆ ಮರಳಲಿದ್ದಾರೆ. ಇಂದು ಸಂಜೆ ರಾಜ್ಯದ ಉಸ್ತುವಾರಿ ವಹಿಸಿರುವ ಧರ್ಮೇಂದ್ರ ಪ್ರಧಾನ್ ಕುಡ ಬೆಂಗಳೂರಿಗೆ ಆಗಮಿಸುತ್ತಿದ್ದು, ಯಡಿಯೂರಪ್ಪ, ಈಶ್ವರಪ್ಪ ಸೇರಿದಂತೆ ಎಲ್ಲ ಶಾಸಕರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.
ನಾಯಕರ ಭೇಟಿಯ ನಂತರ ಪತ್ರಕರ್ತರನ್ನುದ್ದೇಶಿ ಮಾತನಾಡಿದ ಈಶ್ವರಪ್ಪ, ವರಿಷ್ಠರೆದುರು ನಾಯಕತ್ವ ಬದಲಾವಣೆಯ ಚರ್ಚೆ ಆಗಲೇ ಇಲ್ಲ. ಯಡಿಯೂರಪ್ಪ ವಿರುದ್ಧ ಭೂ ಹಗರಣದ ಆರೋಪ ಹೊರಿಸಲಾಗಿದೆ, ಆದರೆ ಇನ್ನೂ ಸಾಬೀತಾಗಿಲ್ಲ. ಆರೋಪ ಸಾಬೀತಾಗುವವರೆಗೆ ಅಪರಾಧಿ ಎಂದು ಪರಿಗಣಿಸಲಾಗುವುದಿಲ್ಲ. ಆದರೆ, ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಕುರಿತು ವರಿಷ್ಠರ ಗಮನಕ್ಕೆ ತಂದಿದ್ದೇವೆ ಅಷ್ಟೆ ಎಂದರು.
ಯಡಿಯೂರಪ್ಪ ವಿರುದ್ಧ ನಡೆಸಲಾಗುತ್ತಿರುವ ಭೂ ಹಗರಣದ ತನಿಖೆಯನ್ನು ಪೂರೈಸಿ ಮೇ 4ರೊಳಗಾಗಿ ವರದಿ ನೀಡಬೇಕೆಂದು ನ್ಯಾಯಾಲಯ ಲೋಕಾಯುಕ್ತ ಪೊಲೀಸರಿಗೆ ಆದೇಶಿಸಿದೆ. ಚನ್ನಪಟ್ಟಣ, ಜಗಳೂರು, ಬಂಗಾರಪೇಟೆ ಕ್ಷೇತ್ರಗಳಿಗೆ ಏಪ್ರಿಲ್ 9ರಂದು ಉಪಚುನಾವಣೆ ನಡೆಯಲಿದೆ.












Click it and Unblock the Notifications