ಪಾರಾಗಲು ದಾರಿಕಾಣದ ಕಳ್ಳ ನೇಣಿಗೆ ಬಿದ್ದ

ಕೊಂಡಿ ಸಡಿಲವಾಗಿದ್ದ ಹಿಂಬಾಗಿಲಿನಿಂದ ಕಳ್ಳ ಮನೆ ಪ್ರವೇಶಿಸಿದ್ದಾನೆ. ಸದ್ದಾಗಿದ್ದರಿಂದ ಮನೆಯ ಮಾಲಿಕ ಭೀಮ್ಶಾ ವಲಕೇರಿ ಅವರಿಗೆ ಎಚ್ಚರವಾಗಿ ಕಳ್ಳನಿದ್ದ ಕೋಣೆಯ ಬಾಗಿಲಿಗೆ ಹೊರಗಿನಿಂದ ಅಗುಳಿ ಹಾಕಿದ್ದಾರೆ. ಗಲಿಬಿಲಿಗೊಳಗಾದ ಕಳ್ಳ ತಪ್ಪಿಸಿಕೊಳ್ಳುವುದು ಅಸಾದ್ಯವೆಂದು ಅರಿತು, ಕೋಣೆಯ ಒಳಗಿನಿಂದ ಚಿಲುಕ ಹಾಕಿಕೊಂಡು ನೇಣಿಗೆ ಶರಣಾಗಿದ್ದಾನೆ.
ಈ ಬಗ್ಗೆ ವಲಕೇರಿ ಅವರು ಅಶೋಕ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮನೆಯ ಹಿಂಬಾಗಿಲು ಅಷ್ಟು ಸುಭದ್ರವಾಗಿರಲಿಲ್ಲ. ಕಳ್ಳ ಅಲ್ಲಿಂದಲೇ ಮನೆ ಪ್ರವೇಶಿಸಿದ್ದಾನೆ. ತಮಗೆ ಕಳ್ಳ ಮನೆ ಪ್ರವೇಶಿಸಿರುವುದು ತಿಳಿದು ಕೋಣೆಯ ಚಿಲುಕ ಹಾಕಿ ನಂತರ ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರಿಗೆ ದೂರವಾಣಿ ಮುಖಾಂತರ ತಿಳಿಸುತ್ತಿದ್ದಂತೆ ಪಾರಾಗುವ ದಾರಿ ಮುಚ್ಚಿದಂತಾಗಿ ನೇಣು ಹಾಕಿಕೊಂಡಿದ್ದಾನೆ.
ಕಳ್ಳನ ಗುರುತು ಇನ್ನೂ ಪೊಲೀಸರಿಗೆ ಸಿಕ್ಕಿಲ್ಲ. ಆತನ ದೇಹವನ್ನು ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಆತನಿಂದ ಐದು ಮೊಬೈಲ್ ಫೋನುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications