ಭೀಕರ ಹತ್ಯೆ ಜಾಡನು ಹಿಡಿದ ತುಂಗಾ ಪೊಲೀಸರು

ಅನುಪಿನಕಟ್ಟೆ ಬಳಿಯ ಕಾಲುವೆ ಬಳಿ ಕಳೆದ ವರ್ಷದ ಮಾರ್ಚ್ 27ರಂದು ಭೀಕರ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿತ್ತು. ಮೃತ ಮಹಿಳೆಯನ್ನು ಮಂಡೆನಕೊಪ್ಪ ನಿವಾಸಿ ಲಚ್ಚ ನಾಯ್ಕನ ಪತ್ನಿ ಶಾಂತಿ ಬಾಯಿ (40) ಎಂದು ತನಿಖೆಯಿಂದ ತಿಳಿದ ಪೊಲೀಸರಿಗೆ ಬೇರೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಪ್ರಕರಣ ದಾಖಲಿಸಿಕೊಂಡ ತುಂಗಾ ನಗರ ಪೊಲೀಸರು ಆರೋಪಿಗಳ ಹುಡುಕಾಟದಲ್ಲಿ ತೊಡಗಿದ್ದರು.
ಹತ್ಯೆ ಹಿಂದಿನ ಕಥೆ: ಲಚ್ಚ ನಾಯ್ಕ ಹಾಗೂ ಶಾಂತಿ ಬಾಯಿ ಮಗಳನ್ನು ಮಂಡೆನಕೊಪ್ಪದ ರಾಮಾ ನಾಯ್ಕ ಎಂಬ ವರನಿಗೆ ಕೊಟ್ಟು ವಿವಾಹ ಮಾಡಲಾಗಿತ್ತು. ಆದರೆ, ಶಾಂತಿ ಬಾಯಿ ಮಗಳು ತಾಯಿ ಹಾಕಿದ ಗೆರೆ ದಾಟುತ್ತಿರಲಿಲ್ಲ. ಹೆಂಡತಿ ಪದೇ ಪದೇ ನಮ್ಮ ಅಮ್ಮನ ಒಂದು ಕೇಳಿ ಎಂದು ಎಲ್ಲದ್ದಕ್ಕೂ ಶಾಂತಿಬಾಯಿಯ ಮೊರೆ ಹೋಗುತ್ತಿದ್ದದ್ದು ರಾಮಾ ನಾಯ್ಕನಿಗೆ ಸರಿ ಕಾಣಲಿಲ್ಲ. ನಮ್ಮ ಸಂಸಾರದಲ್ಲಿ ನಿಮ್ಮ ತಾಯಿಗೇನು ಕೆಲಸ, ನನ್ನ ಮಾತು ಕೇಳು ಎಂದರೂ ಹೆಂಡತಿ ಬಗ್ಗದಿದ್ದಾಗ ರೋಸಿ ಹೋದ ರಾಮಾ ನಾಯ್ಕ, ಅತ್ತೆಯ ಕೊಲೆ ಸುಪಾರಿ ಕೊಟ್ಟೇ ಬಿಟ್ಟ.
2010 ರ ಮಾರ್ಚ್ ತಿಂಗಳಿನಲ್ಲಿ ಶಾಂತಿಬಾಯಿ ಕೊಲೆಗೆ ಮಹೂರ್ತ ಫಿಕ್ಸ್ ಮಾಡಿದ ಚಂದ್ರ ನಾಯ್ಕ ತನ್ನ ಜೊತೆಗೆ ದುಗ್ಗನಾಯ್ಕ ಹಾಗೂ ಮಧುಬಾಯಿ ಎಂಬುವವರನ್ನು ಸೇರಿಸಿಕೊಂಡ. ಶಾಂತಿಬಾಯಿಯನ್ನು ಮಧುಬಾಯಿ ಆಟೋವೊಂದರಲ್ಲಿ ಕೂರಿಸಿಕೊಂಡು ಅನುಪಿನಕಟ್ಟೆ ಗ್ರಾಮದ ಬಳಿ ಕರೆದುಕೊಂಡು ಬರುವುದು, ಕೊಲೆ ಮಾಡಿ ಸಮೀಪದ ಕಾಲುವೆಗೆ ಹೆಣವನ್ನು ಎಸೆದು ಪರಾರಿಯಾಗುವುದು ಇವರ ಪ್ಲ್ಯಾನ್ ಆಗಿತ್ತು. ಕೊನೆಗೆ ಪ್ಲ್ಯಾನ್ ಪ್ರಕಾರವೆ ಎಲ್ಲಾ ನಡೆದು, ಶಾಂತಿಬಾಯಿ ಕೊಲೆ ನಡೆದಿತ್ತು.
ಆರೋಪಿಗಳಾದ ಚಂದ್ರನಾಯ್ಕ, ದುಗ್ಗನಾಯ್ಕ ಹಾಗೂ ಮಧುಬಾಯಿ ಕೇರಳದಲ್ಲಿ ತಲೆ ಮರೆಸಿಕೊಂಡು ಆರಾಮಾವಾಗಿ ಒಂದು ವರ್ಷ ಕಳೆದಿದ್ದರು. ಶಿವಮೊಗ್ಗ ಗ್ರಾಮಾಂತರ ಪೊಲೀಸರು ಡಿವೈಎಸ್ ಪಿ ಶೇಖರಪ್ಪ ಅವರ ನೇತೃತ್ವದಲ್ಲಿ ತುಂಗಾ ನಗರ ಠಾಣೆ ಇನ್ಸ್ ಪೆಕ್ಟರ್ ಸಿದ್ದಲಿಂಗಪ್ಪ ಅವರ ತಂಡ ಕೊಲೆ ಪಾತಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.












Click it and Unblock the Notifications