ಭಾರತದಿಂದ ಪಲಾಯನವಾದ ದುಡ್ಡು ಎಷ್ಟು?

Who is going to block the outflow of illegal money?
ಸ್ವಾತಂತ್ರ್ಯಾನಂತರ ತೆರಿಗೆ ವಂಚನೆ, ಅಪರಾಧ ಹಾಗೂ ಭ್ರಷ್ಟಾಚಾರದಿಂದ ಸುಮಾರು 21 ಲಕ್ಷ ಕೋಟಿ ರೂಪಾಯಿಗಳಷ್ಟು ದುಡ್ಡು ಭಾರತದಿಂದ ಪಲಾಯನವಾಗಿದೆ ಎಂದು ವಾಷಿಂಗ್ಟನ್ ಮೂಲದ ಸಂಶೋಧನಾ ಸಂಸ್ಥೆ ಗ್ಲೋಬಲ್ ಫೈನಾನ್ಷಿಯಲ್ ಇಂಟೆಗ್ರಿಟಿ ಹೇಳಿದೆ.

ತನ್ನ ಇತ್ತೀಚಿನ ವರದಿಯಲ್ಲಿ ಈ ವಿಷಯವನ್ನು ತಿಳಿಸಿರುವ ಸಂಸ್ಥೆ 1991ರಿಂದ ದೇಶದಲ್ಲಿ ಆರ್ಥಿಕ ಸುಧಾರಣೆಗಳು ತೀವ್ರಗೊಂಡ ನಂತರ ಆದಾಯ ಸಮರ್ಪಕವಾಗಿ ವಿತರಣೆಯಾಗದೆ ಭಾರೀ ಪ್ರಮಾಣದ ಸಂಪತ್ತು ಹೊರಹರಿದಿದೆ ಎಂದು ಹೇಳಿದೆ. ಕಳೆದ 6 ದಶಕಗಳಲ್ಲಿ ದೇಶದಿಂದ ಹೊರಹೋಗಿರುವ ಸಂಪತ್ತು ಒಟ್ಟು 462 ಬಿಲಿಯನ್ ಡಾಲರ್ ಗಳೆಂದು ಅಂದಾಜಿಸಲಾಗಿದ್ದು, ಪ್ರತೀ ವರ್ಷ ಸುಮಾರು 19 ಬಿಲಿಯನ್ ಡಾಲರ್ ಗಳಷ್ಟು ಹಣ ಹೊರ ಹರಿದಿದೆ.

2002ರಿಂದ 2006ರವರೆಗೆ ವಾರ್ಷಿಕ 23.7 ಬಿಲಿಯನ್ ಡಾಲರ್ ಗಳಷ್ಟು ಹಣ ಹೊರ ಹರಿದಿದ್ದು, ಈ ರೀತಿಯ ಬಂಡವಾಳವನ್ನು ರಫ್ತು ಮಾಡುತ್ತಿರುವ ವಿಶ್ವದ ಅತಿ ದೊಡ್ಡ ದೇಶ ಭಾರತ ಆಗಿದೆ. ಇತ್ತೀಚೆಗೆ ಹರಿವಿನ ಪ್ರಮಾಣದಲ್ಲಿ ಅಲ್ಪ ಕಡಿಮೆ ಆಗಿದ್ದು ವಾರ್ಷಿಕ 16 ಬಿಲಿಯನ್ ಡಾಲರ್ ಗಳಷ್ಟಿದೆ ಎಂದೂ ಅದು ಹೇಳಿದೆ. ದೇಶದ ಆರ್ಥಿಕ ಕಾವಲು ಪಡೆಗಳು ಹಾಗೂ ಏಜೆನ್ಸಿಗಳು ಯಾವ ಮಾರ್ಗದ ಮೂಲಕ ಈ ಹಣ ಹೊರಹೋಗುತ್ತಿದೆ ಎಂದು ಪತ್ತೆ ಹಚ್ಚಲು ವಿಫಲವಾಗಿದ್ದು ತಡೆಯುವಲ್ಲಿಯೂ ಯಶಸ್ವಿಯಾಗಿಲ್ಲ ಎಂದು ವರದಿ ಹೇಳಿದೆ. ವಾರ್ಷಿಕ ಸರಾಸರಿ ಲೆಕ್ಕದಲ್ಲಿ 1948ರಿಂದ 2008ರವರೆಗೆ ದೇಶದಿಂದ ಹೊರಹೋಗಿರುವ ಹಣ ದೇಶದ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಶೇ. 1.5ರಷ್ಟಿದೆ! ಅಥವಾ ದೇಶದ ಒಟ್ಟು ರಫ್ತಿನ ಶೇ. 22.8ರಷ್ಟಿದೆ.

1991ರ ಮೇ ತಿಂಗಳಿನಲ್ಲಿ ಅಂದಿನ ಪ್ರಧಾನ ಮಂತ್ರಿ ಪಿವಿ ನರಸಿಂಹರಾವ್ ನೇತೃತ್ವದ ಸರ್ಕಾರ ಜಾರಿಗೆ ತಂದ ಆರ್ಥಿಕ ಸುಧಾರಣೆಗಳಾದ ಜಾಗತೀಕರಣ, ಉದಾರೀಕರಣ ಹಾಗೂ ಖಾಸಗೀಕರಣಗಳು ದೇಶದ ಆರ್ಥಿಕ ಇತಿಹಾಸದಲ್ಲಿ ಇಂದೂ ಮೈಲಿಗಲ್ಲಾಗಿವೆ. ಈ ಸುಧಾರಣೆಗಳಿಂದ ದೇಶದ ಆರ್ಥಿಕ ಪ್ರಗತಿ, ಜಿಡಿಪಿ ದರದ ತೀವ್ರಗತಿಯ ಏರಿಕೆಗೆ ಕಾರಣವಾಯಿತು. ಆದರೆ 1991ರ ನಂತರ ಸುಧಾರಣೆಗಳಿಂದ ಗಳಿಸಿದ ಆದಾಯ ಸರಿಯಾಗಿ ವಿತರಣೆಯಾಗದೆ ಅಕ್ರಮ ಹಣದ ಹರಿವು ಹೆಚ್ಚಲೂ ಕಾರಣವಾಯಿತು. ದೇಶದ ಬಡತನ ನಿವಾರಣೆಗೆ ಹಾಗೂ ಮೂಲಸೌಕರ್ಯದ ಅಭಿವೃದ್ದಿಗಾಗಿ ಈಗಲೂ ಭಾರೀ ಬಂಡವಾಳದ ಅವಶ್ಯಕತೆ ಇದ್ದು, ದೇಶ ಹಣದ ಕೊರತೆಯನ್ನು ಎದುರಿಸುತ್ತಿದೆ. ಪರಿಸ್ಥಿತಿ ಹೀಗಿದ್ದಾಗಲೂ ಭಾರೀ ಪ್ರಮಾಣದ ಅಕ್ರಮ ಹಣದ ರಫ್ತು ನಡೆದಿರುವುದು ವಿಪರ್ಯಾಸವೇ ಹೌದು.

ದೇಶದ ಆರ್ಥಿಕ ಬೆಳವಣಿಗೆ ತೀವ್ರಗತಿಯಲ್ಲಿ ಮುನ್ನಡೆದಿದ್ದರೂ ಬಂದಿರುವ ಆದಾಯ ದೇಶೀಯ ಸಂಸ್ಥೆಗಳು, ಕಾನೂನು ಹಾಗೂ ಆಡಳಿತದ ಸುಧಾರಣೆಯಲ್ಲಿ ಬಳಕೆಯಾಗಿಲ್ಲ ಎಂದೂ ವರದಿ ಹೇಳಿದೆ. ಅನೇಕ ರೀತಿಯ ಸರಕುಗಳ ನಿಯಂತ್ರಣವನ್ನು ಮುಕ್ತಗೊಳಿಸಿದ್ದರಿಂದ ತೆರಿಗೆ ವಂಚಕರು ಸರಕಿಗೆ ಕಡಿಮೆ ಹಣವನ್ನು ನಮೂದಿಸಿ ಅಕ್ರಮ ಸಂಪತ್ತಿನ ಹರಿವಿಕೆಯನ್ನು ಹೆಚ್ಚಿಸಿದರು ಎನ್ನಲಾಗಿದೆ. ಭಾರತ ಪೂರ್ಣ ಪ್ರಮಾಣದ ಸದಸ್ಯತ್ವವನ್ನು ಪಡೆದಿರುವ ಪ್ಯಾರಿಸ್ ಮೂಲದ ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ ಸಂಸ್ಥೆ ಪ್ರಕಾರ, ಅಕ್ರಮ ಹಣದ ಹರಿವಿನ ತಡೆಗಟ್ಟುವಿಕೆಗೆ ಭಾರತ ಇನ್ನೂ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕಿದ್ದು, ದೇಶದ ಒಳಗೆ ಹಾಗೂ ಹೊರಗೆ ನಡೆದಿರುವ ಅಕ್ರಮ ಚಟುವಟಿಕೆಗಳು, ಭ್ರಷ್ಟಾಚಾರ, ಮಾನವ ಕಳ್ಳಸಾಗಣೆ, ಡ್ರಗ್ ಮಾರಾಟ, ನಕಲಿ ನೋಟುಗಳ ಚಲಾವಣೆಯಿಂದ ಈ ಹರಿವು ಹೆಚ್ಚಿದೆ ಎಂದಿದೆ. ಸಾಮಾನ್ಯವಾಗಿ ಈ ಹಣದ ರಫ್ತುದಾರರು ಅನೇಕ ಬ್ಯಾಂಕ್ ಖಾತೆಗಳನ್ನು ಹೊಂದಿದ್ದು ತಮ್ಮ ನ್ಯಾಯಸಮ್ಮತ ಗಳಿಕೆಯ ಜತೆಗೆ ಈ ಕಳ್ಳ ಹಣವನ್ನು ಸೇರಿಸುವದರಿಂದ ಹರಿವು ಹೆಚ್ಚಿದೆ ಎಂದಿದೆ.

ಈ ಹಣದ ಅಕ್ರಮ ಹರಿವಿನಿಂದ ದೇಶದಲ್ಲಿ ಬಡ ಹಾಗೂ ಶ್ರೀಮಂತ ವರ್ಗದ ನಡುವಿನ ಅಂತರ ದಿನೇ ದಿನೇ ಹೆಚ್ಚುತ್ತಿದ್ದು ಬಡತನ ಹೆಚ್ಚುತ್ತಿದೆ. ದೇಶದ ಖಾಸಗಿ ರಂಗವು ವಿದೇಶೀ ಬ್ಯಾಂಕ್ ಗಳಲ್ಲಿನ ಠೇವಣಿಯನ್ನು ಹೆಚ್ಚಿಸಿದ್ದು, 1995ರಲ್ಲಿ ವಿದೇಶೀ ಠೇವಣಿ ಪ್ರಮಾಣ ಶೇ. 36.4ರಷ್ಟಿದ್ದರೆ 2009ರಲ್ಲಿ ಇದು ಶೇ. 54.2ಕ್ಕೆ ತಲುಪಿದೆ. ಅಂದಾಜಿನ ಪ್ರಕಾರ, ದೇಶದ ಹೊರಗಿರುವ ಸಂಪತ್ತು 640 ಬಿಲಿಯನ್ ಡಾಲರ್ ಗಳನ್ನೂ ಮೀರಿದೆ. ಈಗಾಗಲೇ ಸ್ವಿಸ್ ಬ್ಯಾಂಕುಗಳಲ್ಲಿ ಭಾರತೀಯ ಮೂಲದ ತೆರಿಗೆ ವಂಚಕರು ಹೊಂದಿರುವ ಅಕ್ರಮ ಸಂಪತ್ತನ್ನು ದೇಶದೊಳಗೆ ತರಲು ಪ್ರಯತ್ನ ನಡೆದಿದ್ದು, ಇದು ಯಶಸ್ವಿಯಾದರೆ ದೇಶ ಸುಭಿಕ್ಷವಾಗಲಿದೆ ಎಂದು ತಜ್ಞರು ಹೇಳುತ್ತಾರೆ. ಅಷ್ಟಕ್ಕೂ ನಲ್ಲಿಯ ನೀರಿನಂತೆ ಸೋರಿ ಹೋಗುತ್ತಿರುವ ಈ ದುಡ್ಡು ಯಾರಪ್ಪಂದು?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+