ಕೂರಣಗೆರೆ ಲಕ್ಷ್ಮಿನರಸಿಂಹ ದೇಗುಲ ವಿಗ್ರಹ ಧ್ವಂಸ

Kuranagere Lakshminarasimha Temple damage
ಚನ್ನಪಟ್ಟಣ, ಡಿ.29: ಚನ್ನಪಟ್ಟಣ ತಾಲ್ಲೂಕಿನ ಇತಿಹಾಸ ಪ್ರಸಿದ್ದ ಕೂರಣಗೆರೆ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯ ಕಿಡಿಗೇಡಿಗಳ ಅಟ್ಟಹಾಸಕ್ಕೆ ಬಲಿಯಾಗಿದ್ದು, ದುಷ್ಕರ್ಮಿಗಳು ದೇವಾಲಯದ ಮುಂಭಾಗದಲ್ಲಿದ್ದ ಶ್ರೀ ಲಕ್ಷ್ಮಿನರಸಿಂಹಸ್ವಾಮಿ ವಿಗ್ರಹ ಮತ್ತು ಗೋಪುರದಲ್ಲಿ ನಿರ್ಮಿಸಲಾಗಿದ್ದ ವಿಗ್ರಹಗಳನ್ನು ಧ್ವಂಸಗೊಳಿಸಿ, ನುಚ್ಚುನೂರು ಮಾಡಿ ಮನಸೋಇಚ್ಚೆ ದೇವಾಲಯದ ಸುತ್ತ ಬಿಸಾಡಿರುವ ಘಟನೆ ಕಳೆದ ಸೋಮವಾರ ರಾತ್ರಿ ನಡೆದಿದೆ.

ಕಿಡಿಗೇಡಿಗಳು ಗೋಪುರದ ಮೇಲ್ಬಾಗದಲ್ಲಿದ್ದ ಕಳಸವನ್ನೂ ಹಾನಿಗೊಳಿಸಿದ್ದು, ನರಸಿಂಹಸ್ವಾಮಿ ವಿಗ್ರಹದ ಅಕ್ಕಪಕ್ಕವಿದ್ದ ಶಂಖ, ಚಕ್ರ ಮತ್ತು ಗೋಪುರದ ಸುತ್ತಲೂ ಇದ್ದ ಗರುಡಪಕ್ಷಿಗಳು, ದಿಕ್ಪಾಲಕರ ವಿಗ್ರಹಗಳನ್ನು ಕಿತ್ತೆಸೆದಿರುವುದೂ ಅಲ್ಲದೆ, ಕಲ್ಲುಗಳಿಂದ ಅವುಗಳನ್ನು ಸಂಪೂರ್ಣವಾಗಿ ಜಜ್ಜಿ ನಾಶಗೊಳಿಸಿದ್ದಾರೆ. ಸೋಮವಾರ(ಡಿ.27) ರಾತ್ರಿ ಈ ದುಷ್ಕೃತ್ಯ ನಡೆದಿದ್ದು, ದುಷ್ಕರ್ಮಿಗಳು ನರಸಿಂಹಸ್ವಾಮಿ ವಿಗ್ರಹದ ಹಲವು ಭಾಗಗಳನ್ನು ವಿರೂಪಗೊಳಿಸಿ, ಸುತ್ತಲಿದ್ದ ವಿಗ್ರಹಗಳನ್ನು ಜಜ್ಜಿ ನಂತರ ಅವುಗಳನ್ನು ಮುಂದಿಟ್ಟುಕೊಂಡು ದಿಂಡುಗಲ್ಲಿನಿಂದ ಕೆಚ್ಚಿ ನಾಶಗೊಳಿಸಿದ್ದಾರೆ.

ದೇವಸ್ಥಾನದ ಮುಂಭಾಗದಲ್ಲಿದ್ದ ಸಣ್ಣ ಗುಡಿಯ ಬಳಿಯೂ ಸಹ ವಿಗ್ರಹವನ್ನು ವಿರೂಪಗೊಳಿಸಲಾಗಿದೆ. ಶ್ರೀ ನರಸಿಂಹಸ್ವಾಮಿ ಮೂಲವಿಗ್ರಹವು ಕೂರಣಗೆರೆ ಗ್ರಾಮದಲ್ಲಿದ್ದು, ದುಷ್ಕರ್ಮಿಗಳು ದೇವಾಲಯದ ಒಳಭಾಗ ಪ್ರವೇಶಿಸಲು ಸಾಧ್ಯವಾಗದೆ ಹೊರಭಾಗದ ಎಲ್ಲಾ ವಿಗ್ರಹಗಳನ್ನು ಭಗ್ನಗೊಳಿಸಿದ್ದಾರೆ.

ಈ ದೇವಾಲಯ ಬೆಟ್ಟದ ಮೇಲೆ ನಿರ್ಮಾಣವಾಗಿದ್ದು, ಕೂರಣಗೆರೆ ಗ್ರಾಮದಿಂದ ಸುಮಾರು 4 ಕಿ.ಮೀ.ಗಳಿಗೂ ಹೆಚ್ಚು ದೂರದಲ್ಲಿದೆ. ಬೆಳಿಗ್ಗೆಯಿಂದ ಸಂಜೆಯವರೆಗೂ ಇಲ್ಲಿ ಪೂಜಾಕಾರ್ಯಗಳು ನಡೆಯುತ್ತಾವಾದರೂ ರಾತ್ರಿ ವೇಳೆ ಇಲ್ಲಿ ಯಾರೂ ಇರುವುದಿಲ್ಲ. ಇದನ್ನೇ ದುರುಪಯೋಗಪಡಿಸಿಕೊಂಡಿರುವ ದುಷ್ಕರ್ಮಿಗಳು ಇದನ್ನರಿತು ಈ ಕೃತ್ಯ ಎಸಗಿದ್ದಾರೆ.

ಮಂಗಳವಾರ ಬೆಳಗ್ಗೆ ದೇವಾಲಯದ ಅರ್ಚಕ ಭಾರದ್ವಾಜ್ ದೇವಾಲಯಕ್ಕೆ ಬಂದಾಗ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ಈ ದೇವಾಲಯದ ವ್ಯಾಪ್ತಿಯಲ್ಲಿ ಆಗಾಗ ಕಳ್ಳತನಗಳು ನಡೆಯುತ್ತಿದ್ದರೂ ಸಹ ಈ ರೀತಿ ವಿಗ್ರಹಗಳನ್ನು ಧ್ವಂಸಗೊಳಿಸಿರುವ ಘಟನೆ ನಡೆದಿರಲಿಲ್ಲ.

ದೇಗುಲದ ಇತಿಹಾಸ : ಈ ದೇವಾಲಯ ಪುರಾತನವಾದ ದೇಗುಲವಾಗಿದ್ದು, ಕಣ್ವ ಮಹರ್ಷಿಗಳಿಂದ ನಿರ್ಮಿತವಾಗಿತ್ತೆಂಬ ಮಾತುಗಳೂ ಸಹ ಇವೆ. ಹಿಂದಿನ ಕಾಲದಿಂದಲೂ ಈ ಭಾಗದ ಭಕ್ತ ಜನರ ನಂಬಿಕೆಗೆ ಶ್ರೀ ನರಸಿಂಹಸ್ವಾಮಿ ದೇವಸ್ಥಾನ ಪಾತ್ರವಾಗಿದ್ದು, ಶಿಥಿಲಾವಸ್ಥೆಯಲ್ಲಿದ್ದ ಈ ದೇವಾಲಯವನ್ನು ಸುಮಾರು 30 ವರ್ಷಗಳ ಹಿಂದೆ ಜೀರ್ಣೋದ್ಧಾರಗೊಳಿಸಿ, ಗೋಪುರ ನಿರ್ಮಾಣ ಮಾಡಲಾಗಿತ್ತು.

ಪ್ರತಿ ಶ್ರಾವಣ ಮಾಸದಲ್ಲಿ ಇಲ್ಲಿ ಬೃಹತ್ ಜಾತ್ರೆ ಸಹ ನಡೆಯುತ್ತಿದ್ದು, ಜಾತ್ರೆಯಲ್ಲಿ ಸುತ್ತಮುತ್ತಲಿನ ಭಕ್ತರಲ್ಲದೆ ಹೊರಜಿಲ್ಲೆಗಳ ಸಾವಿರಾರು ಭಕ್ತಾದಿಗಳು ಭಾಗವಹಿಸಿ ಭಗವಂತನ ಕೃಪೆಗೆ ಪಾತ್ರರಾಗುತ್ತಿದ್ದರು. ಸುದ್ದಿ ತಿಳಿದು ರಾಮನಗರ ಜಿಲ್ಲಾ ಎಸ್ಪಿ ಬಿಸನಳ್ಳಿ, ತಹಸೀಲ್ದಾರ್ ಕೃಷ್ಣಯ್ಯ, ಡಿವೈಎಸ್ಪಿ ಸಿದ್ದಪ್ಪ, ಸಿಪಿಐ ಸುಬ್ರಮಣ್ಯ, ಪಿಎಸೈ ವಸಂತಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳಕ್ಕೆ ಶ್ವಾನದಳ ಮತ್ತು ಬೆರಳಚ್ಚು ತಜ್ಞರನ್ನು ಕರೆಸಿ ಪರಿಶೀಲನೆ ನಡೆಸಲಾಯಿತು.

ಖಂಡನೆ: ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲು ಪೂರ್ವನಿಯೋಜಿತವಾಗಿ ಈ ಕೃತ್ಯ ಎಸಗಲಾಗಿದೆ ಎಂದು ಕೂರಣಗೆರೆ ಗ್ರಾಮ ಪಂಚಾಯಿತಿ ಸದಸ್ಯ ರವಿ ಮತ್ತು ಗ್ರಾಮಸ್ಥರು ಆರೋಪಿಸಿದ್ದಾರೆ. [ಚನ್ನಪಟ್ಟಣ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+