ಸ್ವಾಮೀಜಿಗಳ ಬೆಂಬಲದಲ್ಲಿ ತಪ್ಪೇನಿದೆ : ರೇಣುಕಾಚಾರ್ಯ

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ರೇಣುಕಾಚಾರ್ಯ, ವೀರಶೈವ ಸಮುದಾಯದ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯುವುದನ್ನು ಸಹಿಸದ ಜೆಡಿಎಸ್, ಎರಡೂವರೆ ವರ್ಷಗಳಿಂದ ನಿರಂತರವಾಗಿ ಕುತಂತ್ರ ನಡೆಸಿಕೊಂಡು ಬಂದಿದೆ. ಪ್ರಸ್ತುತ ಕಾಂಗ್ರೆಸ್ ಜತೆಗೆ ಕೈಜೋಡಿಸಿ, ಅಧಿಕಾರ ಹಿಡಿಯುವ ಜೆಡಿಎಸ್ ನ ಹಗಲು ಕನಸು ನುಚ್ಚುನೂರಾಗಿದೆ ಎಂದರು.
ನೆನಪಿಲ್ಲವೇ? : ಕಾವೇರಿ ನದಿ ನೀರು ಹೋರಾಟ ಸೇರಿದಂತೆ ಅನೇಕ ಸಂದರ್ಭದಲ್ಲಿ ಮಠಾಧೀಶರು ಹೋರಾಟಕ್ಕೆ ಮುಂದಾಗಿದ್ದ ಸಂಗತಿ ಹಿರಿಯ ಮುತ್ಸದ್ಧಿ ಎಂಪಿ ಪ್ರಕಾಶ್ ಅವರಿಗೆ ನೆನಪಿಲ್ಲವೇ? ಚುನಾವಣೆ ವೇಳೆ ರಾತ್ರೋರಾತ್ರಿ ಮುಖದ ಮೇಲೆ ಮುಸುಕು ಹಾಕಿಕೊಂಡು ಮಠಾಧೀಶರನ್ನು ಭೇಟಿ ಮಾಡುವ ಕಾಂಗ್ರೆಸ್ ಮುಖಂಡರ ಬಂಡವಾಳ ಗೊತ್ತಿದೆ. ಮಠಾಧೀಶರ ಬಗ್ಗೆ ಲಘುವಾಗಿ ಮಾತನಾಡುವುದನ್ನು ಬಿಜೆಪಿ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ಎರಡು ದಿನದಲ್ಲಿ ಭಾಗ್ಯಲಕ್ಷ್ಮಿ ಫಲಾನುಭವಿಗಳಿಗೆ ಸೀರೆ ವಿತರಿಸಲು ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗೆ ಆದೇಶಿಸಿದರು. ಜಿಲ್ಲೆಯ ಅಭಿವೃದ್ಧಿಗೆ 100 ಕೋಟಿ ರೂ. ಬಿಡುಗಡೆ ಮಾಡಿಸುವುದಾಗಿ ಸಚಿವ ಸೋಮಣ್ಣ ನೀಡಿದ್ದ ಭರವಸೆಯಂತೆ ಹಣಕ್ಕಾಗಿ ಸಿಎಂ ಮೇಲೆ ಒತ್ತಡ ತರಲಾಗುವುದು ಎಂದು ನುಡಿದರು.
ವಿಶೇಷ ಪೂಜೆ : ಸಿಎಂ ಹುದ್ದೆ ಕಳೆದುಕೊಳ್ಳುವ ಭೀತಿಯಿಂದ ಯಡಿಯೂರಪ್ಪ ಪಾರಾದ ಹಿನ್ನೆಲೆಯಲ್ಲಿ ರೇಣುಕಾ ಚಾರ್ಯ ಸೀತಾರಾಮಾಂಜನೇಯ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.












Click it and Unblock the Notifications