ಯಡಿಯೂರಪ್ಪಗೆ ಮುಂದುವರಿದ ಮಠಾಧಿಪತಿಗಳ ಬೆಂಬಲ

ರಾಜ್ಯದ ರಾಜಕೀಯ ಬಿಕ್ಕಟ್ಟಿನಿಂದಾಗಿ ಉದ್ಭವಿಸಿರುವ ಪರಿಸ್ಥಿತಿಯ ಬಗ್ಗೆ ಇಂದು ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಬೆಕ್ಕಿನ ಕಲ್ಮಠದ ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಸ್ವಾಮಿ ಮಾತನಾಡಿ, ಪ್ರಸ್ತುತ ಯಡಿಯೂರಪ್ಪರವರನ್ನು ಅಧಿಕಾರದಿಂದ ಕೆಳಗಿಳಿಸುವ ಒತ್ತಡ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಈ ಸುದ್ದಿಗೋಷ್ಠಿಯನ್ನು ಕರೆಯಲಾಗಿದೆ. ಇಲ್ಲಿ ವ್ಯಕ್ತಿ, ಪಕ್ಷ, ಜಾತಿಗಿಂತ ನಾಡು, ನುಡಿ, ಜನ ಕಲ್ಯಾಣವೇ ಮುಖ್ಯವಾಗಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿನಿಂದಲೂ ಹಲವು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ಪತನವಾದರೆ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನೆಡೆ ಉಂಟಾಗುತ್ತದೆ. ಹೀಗಾಗಿ ಯಡಿಯೂರಪ್ಪರವರ ಅಭಿವೃದ್ಧಿ ಕಾರ್ಯವೈಖರಿಯನ್ನು ನೋಡಿ ನೈತಿಕವಾಗಿ ಅವರಿಗೆ ಬೆಂಬಲ ಸೂಚಿಸುತ್ತಿದ್ದೇವೆ ಎಂದರು.
ಸರ್ಕಾರ ಸುಭದ್ರವಾಗಿದ್ದರೆ ನಾಡಿನಲ್ಲೂ ಅಭಿವೃದ್ಧಿ ಕಾರ್ಯ ಮುಂದುವರೆಯುತ್ತದೆ. ಸರ್ಕಾರಕ್ಕೆ ಆಪತ್ತು ಬಂದೊದಗಿದರೆ ಅಭಿವೃದ್ಧಿ ಕಾರ್ಯ ಕುಂಠಿತಗೊಳ್ಳುತ್ತದೆ. ಮತ್ತೆ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಲು ಸಾಕಷ್ಟು ಶ್ರಮಪಡಬೇಕಾಗುತ್ತದೆ. ಈ ರೀತಿ ಪದೇ ಪದೇ ಸರ್ಕಾರ ಪತನವಾಗುತ್ತಾ ಹೋದರೆ ಜನರಲ್ಲಿ ರಾಜಕೀಯ ವ್ಯವಸ್ಥೆಯ ಬಗ್ಗೆ ಅವಿಶ್ವಾಸ ಹುಟ್ಟುತ್ತದೆ ಎಂದು ವಿಷಾದ ವ್ಯಕ್ತಪಡಿಸಿದರು.
ಹಿಂದೆಂದೂ ಕಂಡರಿಯದ ಕಾರ್ಯವನ್ನು ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಕೈಗೆತ್ತಿಕೊಂಡಿದೆ. ಸಾಮಾನ್ಯ ಬಡಜನರಿಂದ ಹಿಡಿದು ಎಲ್ಲಾ ವರ್ಗದ ಜನರ ಸರ್ವಾಭಿವೃದ್ಧಿಗೆ ಶ್ರಮಿಸುತ್ತಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ. ಗ್ರಾಮೀಣ ಪ್ರದೇಶದ ಜನರು ಸರ್ಕಾರದ ಕಾರ್ಯಕ್ರಮವನ್ನು ಮೆಚ್ಚಿಕೊಂಡಿದ್ದಾರೆ. ಈ ಹಂತದಲ್ಲಿ ಅಧಿಕಾರ ಬದಲಾವಣೆಯಾದರೆ ನಾಡಿನ ಅಭಿವೃದ್ಧಿಗೆ ಹಿನ್ನೆಡೆಯಾಗುತ್ತದೆ. ಇದು ನಾಡಿನ ಜನರ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ನುಡಿದರು.
ಆರೋಪಗಳ ತನಿಖೆ ಮಾಡಲು ಮುಖ್ಯಮಂತ್ರಿಗಳು ಒಪ್ಪಿದ್ದಾರೆ. ತನಿಖೆಯಿಂದ ಆರೋಪ ಸಾಬೀತಾದರೆ ಯಾವ ಕ್ರಮ ಬೇಕಾದರೂ ತೆಗೆದುಕೊಳ್ಳಲಿ. ಸದ್ಯಕ್ಕೆ ಯಡಿಯೂರಪ್ಪರವರನ್ನು ಪೂರ್ಣವಾಗಿ ಆಡಳಿತ ನಡೆಸಲು ಅವಕಾಶ ಮಾಡಿಕೊಡುವ ಮೂಲಕ ಅಭಿವೃದ್ಧಿ ಕಾರ್ಯ ಸುಸೂತ್ರವಾಗಿ ನಡೆಯಲು ಎಲ್ಲರೂ ಬೆಂಬಲ ನೀಡಬೇಕೆಂದು ಹೇಳಿದರು. ಬಾಳೆಹೊನ್ನೂರಿನ ರಂಭಾಪುರಿ ಸ್ವಾಮೀಜಿ, ಬಸವಪೀಠದ ದಯಾನಂದ ಸ್ವಾಮೀಜಿ, ಜ್ಞಾನಪ್ರಭು ಸಿದ್ದರಾಮ ಸ್ವಾಮೀಜಿ ಮುಂತಾದವರು ಈಗಾಗಲೆ ಯಡಿಯೂರಪ್ಪನವರ ಪರವಾಗಿ ದನಿ ಎತ್ತಿದ್ದಾರೆ.
ಗೋಷ್ಠಿಯಲ್ಲಿ ಶಿರಾಳಕೊಪ್ಪ ವಿರಕ್ತ ಮಠದ ಸಿದ್ದೇಶ್ವರ ಸ್ವಾಮೀಜಿ, ಶಿಕಾರಿಪುರ ವಿರಕ್ತ ಮಠದ ಚನ್ನಬಸವ ಸ್ವಾಮೀಜಿ, ಜಡೆ ಸಂಸ್ಥಾನ ಮಠದ ಮಹಂತ ಸ್ವಾಮೀಜಿ, ವೃಷಬೇಂದ್ರ ದೇಶಿಕೇಂದ್ರ ಸ್ವಾಮೀಜಿ. ಬಿಳಕಿ ಮಠದ ರಾಚೋಟೇಶ್ವರ ಸ್ವಾಮೀಜಿ, ಶಿವಮೂರ್ತಿ ಮುರುಘಾರಾಜೇಂದ್ರ ಸ್ವಾಮಿ, ವೀರಭದ್ರೇಶ್ವರ ಶಿವಾಚಾರ್ಯ ಸ್ವಾಮೀಜಿ, ಸಾರೋರು ರೇಣುಕಾಚಾರ್ಯ ಸ್ವಾಮೀಜಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.












Click it and Unblock the Notifications