ವಿಷಾಹಾರ ಸೇವಿಸಿ ದುರಂತ ಸಾವಿಗೀಡಾದ ಶ್ವಾನಗಳು

ಕೋರಮಂಗಲದಿಂದ ಎಚ್ ಎಸ್ ಆರ್ ಲೇಔಟ್ ಮಾರ್ಗದಲ್ಲಿನ ಶ್ರೀನಿಧಿ ಆಸ್ಪತ್ರೆಯ ಬಳಿ ಬಿಡಿಎ ಸಂಕೀರ್ಣದ ಬಳಿ ಈ ದುರ್ಘಟನೆ ನಡೆದಿದೆ. ಈ ಪ್ರದೇಶದಲ್ಲಿ ಶ್ವಾನಗಳ ಹಾವಳಿ ತೀವ್ರವಾಗಿರುವ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಶ್ವಾನಗಳಿಗೆ ವಿಷ ಪ್ರಾಷಣ ಮಾಡಿಸಿರುವ ಸಾಧ್ಯತೆಗಳಿವೆ. ಐಪಿಸಿ ಸೆಕ್ಷನ್ 429ರ ಅನ್ವಯ ಕೇಸು ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಮಡಿವಾಳ ಪೊಲೀಸ್ ಠಾಣಾಧಿಕಾರಿ ಪುರುಷೋತ್ತಮ್ ಹೇಳಿದ್ದಾರೆ.
ರಾತ್ರಿ ಹೊತ್ತು ಸಾರ್ವಜನಿಕರು ಸಂಚರಿಸಲು ಶ್ವಾನಗಳು ಅಡ್ಡಿಪಡಿಸುತ್ತಿದ್ದ ಹಿನ್ನೆಲೆಯಲ್ಲಿ ಕಿಡಿಗೇಡಿಗಳು ಕೆಬಾಬ್, ಚಿಕನ್ ತುಂಡುಗಳಲ್ಲಿ ವಿಷ ಬೆರೆಸಿ ಶ್ವಾನಗಳಿಗೆ ಉಣಿಸಿದ್ದರಿಂದ ಈ ಘಟನೆ ನಡೆದಿದೆ. ಇದು ಆಕಸ್ಮಿಕವಾಗಿ ನಡೆದಿರುವ ಘಟನೆಯಲ್ಲ. ಬೇಕೆಂದೆ ಈ ಕೃತ್ಯ ಮಾಡಲಾಗಿದೆ ಎಂದು ಬಿಬಿಎಂಪಿ ಜಂಟಿ ನಿರ್ದೇಶಕ( ಪಶು ಸಂಗೋಪನೆ) ಡಾ. ಪರ್ವೇಜ್ ಅಹ್ಮದ್ ಹೇಳಿದ್ದಾರೆ.
ಪ್ರಾಣಿಪ್ರಿಯರು ಘಟನೆ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಶ್ವಾನ ಹಾವಳಿ ನಿಯಂತ್ರಣ ಮಾಡುವಲ್ಲಿ ವಿಫಲವಾಗಿರುವ ಪಾಲಿಕೆಯ ಸಿಬ್ಬಂದಿಯೆ ಈ ಕೃತ್ಯವೆಸಗಿರುವ ಸಾಧ್ಯತೆಗಳಿವೆ ಎಂದು ಆರೋಪಿಸಿದ್ದಾರೆ. ಆದರೆ, ಜಕ್ಕಸಂದ್ರ, ಎಚ್ ಎಸ್ ಆರ್ ಲೇಔಟ್ ಹಾಗೂ ವೆಂಕಟಾಪುರ ನಿವಾಸಿಗಳಿಂದ ಬೀದಿ ನಾಯಿ ಹಾವಳಿ ಕುರಿತಾದ ಒಂದೇ ಒಂದು ದೂರು ಇದುವರೆವಿಗೂ ಬಂದಿಲ್ಲ. ಬಿಬಿಎಂಪಿ ಈವರೆಗೂ 2 ಲಕ್ಷಕ್ಕೂ ಅಧಿಕ ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ಮಾಡಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳುತ್ತಾರೆ.












Click it and Unblock the Notifications