ಭೂಹಗರಣ ತನಿಖೆಗೆ ವಹಿಸಲು ಸಿದ್ಧ : ಯಡಿಯೂರಪ್ಪ

ಮುಖ್ಯಮಂತ್ರಿ ಮಕ್ಕಳು ಕೈಗಾರಿಕೋದ್ಯಮಿಗಳು ಆಗಬಾರದೆ ಎಂದು ಪ್ರಶ್ನಿಸಿರುವ ಅವರು, ಕಾನೂನು ಚೌಕಟ್ಟಿನೊಳಗೆ ಕೈಗಾರಿಕೆ ಹಾಗೂ ಆಸ್ಪತ್ರೆ ಸ್ಥಾಪನೆಗಾಗಿ ಕೆಐಎಡಿಬಿಯು ತಮ್ಮ ಮಕ್ಕಳಿಗೆ ಭೂಮಿ ಮಂಜೂರು ಮಾಡಿದೆ. ಇದರಲ್ಲಿ ಯಾವುದೇ ಅಕ್ರಮ ನಡೆಸಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಸೋಮವಾರ ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಮತ್ತು ಜೆಡಿಎಸ್ ಅಧಿಕಾರಾವಧಿಯಲ್ಲೂ ಹಲವು ಪ್ರಭಾವಿ ರಾಜಕಾರಣಿಗಳು ಕೆಐಎಡಿಬಿಯಿಂದ ಭೂಮಿ ಮಂಜೂರು ಮಾಡಿಸಿಕೊಂಡಿದ್ದಾರೆ. ಅದೇ ಮಾದರಿಯಲ್ಲೇ ತಮ್ಮ ಮಕ್ಕಳೂ ಕೈಗಾರಿಕೆಗಾಗಿ ಭೂಮಿ ಪಡೆದಿದ್ದಾರೆ ಎಂದು ಅವರು ಹೇಳಿದರು. ಫ್ಲೂಯಿಡ್ ಪವರ್ ಟೆಕ್ನಾಲಜೀಸ್ ಕಂಪನಿಯ ಏಳು ಮಂದಿ ಪಾಲುದಾರರಲ್ಲಿ ನನ್ನ ಪುತ್ರ ರಾಘವೇಂದ್ರ ಇದ್ದಾನೆ. ಕಂಪನಿ ಕೋರಿಕೆ ಮೇರೆಗೆ ಜಿಗಣಿ ಕೈಗಾರಿಕೆ ಪ್ರದೇಶದಲ್ಲಿ ಎರಡು ಎಕರೆ ಭೂಮಿ ಮಂಜೂರು ಮಾಡಿಕೊಡಲಾಗಿದೆ.
ಇನ್ನು ಪುತ್ರಿ ಉಮಾದೇವಿ, ನಾನು ಡಿಸಿಎಂ ಆಗುವ ಮುನ್ನವೇ ಬಿಪಿಒ ಕಂಪನಿ ಆರಂಭಿಸಿದ್ದಳು. ಎಂಕಾಂ ಪದವೀಧರೆಯಾಗಿರುವ ಆಕೆ ಬಿಪಿಎಲ್ ಕಂಪನಿ ಯಲ್ಲಿ 12 ವರ್ಷ ಕೆಲಸ ಮಾಡಿದ ಅನುಭವದ ಮೇಲೆ ಸ್ವಂತ ಬಿಸಿನೆಸ್ ಆರಂಭಿಸಿದ್ದಾಳೆ. ಕೆಐಎಡಿಬಿಗೆ ಅರ್ಜಿ ಹಾಕಿಕೊಂಡು, ಹಾರೋಹಳ್ಳಿ ಬಳಿ ಎರಡು ಎಕರೆ ಭೂಮಿ ಮಂಜೂರು ಮಾಡಿಸಿಕೊಂಡಿದ್ದಾಳೆ.
ಇನ್ನು ಶಿವಮೊಗ್ಗದಲ್ಲಿ ನಮ್ಮದೇ ಒಡೆತನದ ಜಮೀನಿನಲ್ಲಿ ಆಸ್ಪತ್ರೆ ಆರಂಭಿಸಿದ್ದೇವೆ. ಇದರ ಪಕ್ಕದಲ್ಲಿ ಇನ್ನೂ ಜಾಗದ ಅಗತ್ಯ ಇದ್ದಿದ್ದರಿಂದ 5.34 ಎಕರೆ ಭೂಮಿಯನ್ನು ಕೆಐಎಡಿಬಿಯಿಂದ ಮಂಜೂರು ಮಾಡಿಸಿಕೊಳ್ಳಲಾಗಿದೆ. ರೈತರಿಂದ ಬಲವಂತವಾಗಿ ಭೂಮಿ ಸ್ವಾಧೀನಪಡಿಸಿಕೊಂಡಿಲ್ಲ ಎಂದು ಸಮಜಾಯಿಷಿ ನೀಡಿದರು.












Click it and Unblock the Notifications