ಸಿಡಿಯಲ್ಲಿ ಆಪರೇಷನ್ ಕಮಲದ ರೋಚಕ ಸಂಭಾಷಣೆ

ಪಕ್ಷ ತ್ಯಜಿಸಿದರೆ 25 ಕೋಟಿ ರೂ., ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ಹಾಗೂ ಮುಂದಿನ ಚುನಾವಣೆಯ ವೆಚ್ಚ ಭರಿಸುವ ಬಗ್ಗೆ ಸುರೇಶ್ ಗೌಡ ಹಾಗೂ ಶ್ರೀನಿವಾಸ್ ನಡುವಿನ ಸಂಭಾಷಣೆ ತುಣುಕು ಹಾಗೂ ದೃಶ್ಯಾವಳಿಗಳನ್ನು ಸಿ.ಡಿ. ಒಳಗೊಂಡಿದೆ. ಈ ವ್ಯವಹಾರವನ್ನು ಗೃಹ ಸಚಿವ ಆರ್.ಅಶೋಕ್ ಸೂಚನೆ ಅನ್ವಯ ಮಾಡುತ್ತಿದ್ದೇನೆ. ಅವರು ಒಕ್ಕಲಿಗ ಸಮುದಾಯದ ಮುಖಂಡರಾಗಿರುವುದರಿಂದ, ನಿನಗೆ ಅನ್ಯಾಯವಾಗುವುದಿಲ್ಲ ಎಂದು ಸುರೇಶ್ ಗೌಡ ಭರವಸೆ ನೀಡುತ್ತಿರುವುದು ಸಿ.ಡಿ.ಯಲ್ಲಿದೆ. ಉಭಯ ಕುಶಲೋಪರಿಯಿಂದ ಆರಂಭವಾಗುವ ಮಾತು ಕತೆ,ವ್ಯಾವಹಾರಿಕ ಹಂತ ತಲುಪಿದಾಗಿನ ಸಂಭಾಷಣೆ ವಿವರ ಇಂತಿದೆ
ಸುರೇಶ್ ಗೌಡ : ಎಷ್ಟು ಕೋಟಿಗೆ ಡೀಲ್ ಮಾಡ್ಲಿ ಹೇಳು...?
ಶ್ರೀನಿವಾಸ್: ನೀನ್ ಹೇಳು ಗುರು. ನಾನು 100 ಕೋಟಿ ಕೇಳ್ತೀನಿ, ಕೊಡ್ತೀಯಾ ?
ಸುರೇಶ್ ಗೌಡ : ಅಷ್ಟೆಲ್ಲ ಆಗೊಲ್ಲ. 15 ಕೋಟಿ ಕೊಡ್ತೇವೆ. ನಿಗಮ -ಮಂಡಳಿ ಚೇರ‍್ಮನ್ ಹಾಗೂ ಎಲೆಕ್ಷೆನ್ ಖರ್ಚು ನೋಡ್ಕೋತೇವೆ.
ಶ್ರೀನಿವಾಸ್: ಏನ್ ಗುರು ? ವರ್ತೂರು ಪ್ರಕಾಶ್‌ಗೆ 50 ಕೋಟಿ ಕೊಟ್ರಂತೆ. 25 ಕೋಟಿ ಕೊಟ್ಟರೆ ಇಲ್ಲೇ ರಾಜೀನಾಮೆ ಬರೆದು ಕೊಡ್ತೀನಿ. ಹೇಗೂ ಸ್ಪೀಕರ್ ನಿಮ್ಮವ್ರೇ ಅಲ್ವಾ...
ಸುರೇಶ್ ಗೌಡ : ಸರಿ ಅಶೋಕ್ ಅವರ ಹತ್ರ ಮಾತಾಡ್ತೇನೆ. ಅಶ್ವತ್ಥ್‌ಗೆ ಆದ ಹಾಗೆ ಆಗೊಲ್ಲ. ಬೆಂಗಳೂರಿಗೆ ಬಂದು ಡೀಲ್ ಮಾಡ್ಕೊಂಡು ಬರೋಣ.
ಶ್ರೀನಿವಾಸ್ : ಇಲ್ಲ ಅಣ್ಣಾ. ಅಮೌಂಟ್ ಎಷ್ಟು ಅಂತ ಡಿಸೈಡ್ ಮಾಡಿ ಇಲ್ಲೇ ಕೊಡು. ಬೆಂಗಳೂರಿಗೆ ಬರೊಲ್ಲ. ನೀನಾರಾ ಕೊಡು, ಅಶೋಕ್ ಆದ್ರು ಕೊಡ್ಲಿ, ಯಡಿಯೂರಪ್ಪ ಆದ್ರೂ ಕೊಡ್ಲಿ. ಆದ್ರೆ ಬೆಂಗಳೂರಿಗೆ ಮಾತ್ರ ಬರಲ್ಲ.
ಸುರೇಶ್ ಗೌಡ : ಯಾಕೆ ?
ಶ್ರೀನಿವಾಸ್: ಗೊತ್ತಿಲ್ಲದ ಕಡೆ ಬಂದು ಯಾಕೆ ತಗ್ಲಾಕ್ಕಳ್ಳಿ. ತುಮಕೂರಿಗೆ ಆದ್ರೆ ಬಾ.
ಸುರೇಶ್ ಗೌಡ : ಸರಿ, 15 ಕೋಟಿಗೆ ಅಡ್ಜೆಸ್ಟ್ ಮಾಡ್ಕೊ.
ಶ್ರೀನಿವಾಸ್: ಇಲ್ಲ ಗುರು. 25 ಆದರೆ ಸೆಟ್ಲ್ ಮಾಡು. ನಮ್ಮನೆಗೆ ಬರೋಕೆ ಇಷ್ಟ ಇಲ್ಲ ಅಂದ್ರೆ ನನ್ನ ನಾದಿನಿ ಮನೆಗೆ ಬಾ.
ಸುರೇಶ್ ಗೌಡ: 15 ಆದ್ರೆ ಈಗಲೇ ಬರ‍್ತೀನಿ. ಇರು, 10 ನಿಮಿಷ ಫೈನಲ್ ಮಾಡಿ ಹೇಳ್ತೀನಿ. ಬಳಿಕ ದೃಶ್ಯಾವಳಿ ಮೂಡುತ್ತದೆ. ಶ್ರೀನಿವಾಸ್ ಅವರ ಮನೆಗೆ
ಬೆಳಗ್ಗೆ ಆಗಮಿಸಿದ ಸುರೇಶ್ ಗೌಡ, ತಮ್ಮ ಮೊಬೈಲ್ ಫೋನ್ ನಿಂದ ಗೃಹ ಸಚಿವ ಆರ್.ಅಶೋಕ್‌ಗೆ ಕರೆ ಮಾಡಿ ಶ್ರೀನಿವಾಸ್ ಜತೆ ಮಾತನಾಡಿಸುತ್ತಾರೆ.
ಈ ಎಲ್ಲ ದೃಶ್ಯಗಳನ್ನು ನಾಲ್ಕು ಕ್ಯಾಮರಾಗಳ ಮೂಲಕ ಸೆರೆ ಹಿಡಿಯಲಾಗಿದೆ. ಸುರೇಶ್ ಗೌಡರನ್ನು ಹಣ ಸಮೇತ ಹಿಡಿಯಲು ನಾನು ಪ್ರಯತ್ನಿಸಿದ್ದೆ. ಆದರೆ, ಮನೆ ಸುತ್ತ ಇದ್ದ ಕಾರ್ಯಕರ್ತರ ಪಡೆಯನ್ನು ಕಂಡು ಹಣವನ್ನು ಮನೆಗೆ ತರಲಿಲ್ಲ ಎಂದು ಶ್ರೀನಿವಾಸ್ ಆಪಾದಿಸಿದರು.
ಗ್ಯಾಲರಿ : ಆಪರೇಷನ್ ಕಮಲ ಸಿಡಿ ಬಿಡುಗಡೆ ಸಮಾರಂಭ
ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7












Click it and Unblock the Notifications