ಶಾಸಕರ ಖರೀದಿ ಕ್ಯಾಸೆಟ್ ಬಿಡುಗಡೆ : ಎಚ್ಡಿಕೆ ಬಾಂಬ್!

ಒಬ್ಬ ಜೆಡಿಎಸ್ ಮತ್ತು ಇಬ್ಬರು ಕಾಂಗ್ರೆಸ್ ಶಾಸಕರು ರಾಜೀನಾಮೆ ಸಲ್ಲಿಸಿದ್ದಾರೆ. ಅವರು ತಾವಾಗಿಯೇ ರಾಜೀನಾಮೆ ಸಲ್ಲಿಸಿದ್ದಾರೆಯೆ? ಅವರನ್ನು ಬಿಜೆಪಿಯಿಂದ ಖರೀದಿಸಲಾಗಿದೆ. ಇದರ ಸಾಕ್ಷಿ ನನ್ನ ಬಳಿಯಿದೆ. ಈ ಅವ್ಯವಹಾರವನ್ನು ಹಣದ ಸಮೇತ ಹಿಡೀಬೇಕು ಅಂತ ಆಸೆಯಿತ್ತು. ಆದರೆ ಅವರಿಗೆ ಮನವರಿಕೆಯಾದ ಕೂಡಲೆ ಹಣವನ್ನೇ ತರಲಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ಯಾರ್ಯಾರು ರಾಜೀನಾಮೆ ಕೊಡುತ್ತಿದ್ದಾರೆಂದು ಮೊದಲೇ ನನಗೆ ಗೊತ್ತಿತ್ತು. ಇಂದು ಕೂಡ ಕಾಂಗ್ರೆಸ್ ನ ಶಾಸಕರೊಬ್ಬರು ನನ್ನ ಬಳಿ ಬಂದು, "ನಾನು ಕಷ್ಟದಲ್ಲಿದ್ದೇನೆ. 25ರಿಂದ 30 ಕೋಟಿ ರು. ಆಮಿಷ ಒಡ್ಡಲಾಗಿದೆ. ಹಣಕಾಸು ತೊಂದರೆಯಿದ್ದರಿಂದ ಅದನ್ನು ತೆಗೆದುಕೊಳ್ಳುತ್ತೇನೆ. ಆದರೆ ಮುಂದೆ ನೀವೇ ನನ್ನ ರಕ್ಷಿಸಬೇಕು" ಎಂದು ಅಲವತ್ತುಕೊಂಡರು ಎಂದು ಎಚ್ಡಿಕೆ ತಿಳಿಸಿದರು.
ಬೋಪಯ್ಯ, ಸಿಎಂ ಅಯೋಗ್ಯರು : ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತಿರುವ ಯಡಿಯೂರಪ್ಪನವರಿಗೆ ಮತ್ತು ವಿಧಾನಸಭೆ ಅಧ್ಯಕ್ಷ ಸ್ಥಾನದಲ್ಲಿ ಕುಳಿತಿರುವ ಬೋಪಯ್ಯ ಅವರಿಗೆ ಮಾನ ಮರ್ಯಾದೆ ಏನಾದರೂ ಇದೆಯಾ? ಇಷ್ಟೆಲ್ಲ ಅವ್ಯವಹಾರ ನಡೆಯುತ್ತಿದ್ದರೂ ನೋಡಿಕೊಂಡು ಹಾಗೆಯೇ ಬೋಪಯ್ಯ ಮೌನವಾಗಿ ನೋಡುತ್ತ ಕುಳಿತಿದ್ದಾರೆ. ವಿಧಾನಸಭೆಯಲ್ಲಿ ಅ.11ರಂದು ಆದ ಗಲಾಟೆಗಾಗಿ ಯಾವನೋ ಒಬ್ಬ ಅಪ್ಪಚ್ಚು ರಂಜನ್ ಎಂಬಾತನನ್ನು ನೇಮಿಸಿದ್ದಾನೆ ಆ ಅಯೋಗ್ಯ ಸಭಾಧ್ಯಕ್ಷ. ಅಧ್ಯಕ್ಷನಾಗಿ ಕೆಲಸ ಮಾಡಲು ಅವರಿಗೆ ಯೋಗ್ಯತೆಯಿದೆಯಾ? ಅಂತ ಕುಮಾರಸ್ವಾಮಿ ಪ್ರಶ್ನಿಸಿದರು.
ಕೇಂದ್ರದಲ್ಲಿರುವ ಕರ್ನಾಟಕದ ಮಂತ್ರಿಗಳ ವಿರುದ್ಧವೂ ವಾಗ್ದಾಳಿ ಆರಂಭಿಸಿದ ಎಚ್ಡಿಕೆ, ಕೇಂದ್ರದಲ್ಲಿ ಕರ್ನಾಟಕದ ಐವರು ಸಚಿವರಿದ್ದಾರೆ. ಕರ್ನಾಟಕದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗುತ್ತಿದ್ದರೂ ನೋಡಿಕೊಂಡು ಸುಮ್ಮನೆ ಕುಳಿತಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7












Click it and Unblock the Notifications