ಗುಜರಾತ್ ಮಾಜಿ ಸಚಿವ ಅಮಿತ್ ಶಾ ಬಂಧನ

ಸಿಬಿಐ ಪೊಲೀಸರು ಬಂಧಸುವ ಭೀತಿಯಿಂದ ಅಮಿತ್ ಶಾ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ನಾಪತ್ತೆಯಾಗಿದ್ದರು. ಆದರೆ, ಇಂದು ಇದ್ದಕ್ಕಿದ್ದಂತೆಯೇ ಪ್ರತ್ಯಕ್ಷರಾದ ಅವರು, ಮಾಧ್ಯಮಗೋಷ್ಠಿ ನಡೆಸಿದರು. ನನ್ನ ವಿರುದ್ಧ ಕಾಂಗ್ರೆಸ್ ಸಂಚು ರೂಪಿಸಿದೆ. ಸಿಬಿಐಯನ್ನು ಸಂಪೂರ್ಣವಾಗಿ ದುರ್ಬಳಿಕೆ ಮಾಡಿಕೊಂಡಿರುವ ಕೇಂದ್ರ ಸರಕಾರ, ಬಿಜೆಪಿ ಬಳಿಸುತ್ತಿದೆ ಎಂದು ಶಾ ಆರೋಪಿಸಿದರು. ಇದೀಗ ನಾನು ಸಿಬಿಐ ಪೊಲೀಸರಿಗೆ ಶರಣಾಗುತ್ತಿದ್ದು, ಪ್ರಕರಣದ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಹೇಳಿದರು.
ಶನಿವಾರ ಅಮಿತ್ ಶಾ ಅವರ ರಾಜೀನಾಮೆ ಪತ್ರ ಸ್ವೀಕರಿಸಿದ್ದ ಮುಖ್ಯಮಂತ್ರಿ ನರೇಂದ್ರ ಮೋದಿ, ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಸಿಬಿಐ ಕಾಂಗ್ರೆಸ್ ಪಕ್ಷದ ಕೈಗೊಂಬೆಯಂತೆ ವರ್ತಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಭಾರತೀಯ ಸಂವಿಧಾನದ ಮೇಲೆ ನಮಗೆ ನಂಬಿಕೆ ಇದೆ. ಇದೇ ಕಾರಣದಿಂದ ಅಮಿತ್ ಶಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಹೇಳಿದ್ದರು.
ಒಂದು ಮಾತಿನಲ್ಲಿ ಹೇಳುವುದಾದರೆ ಅಮಿತ್ ಶಾ ನಿರ್ದೋಷಿ. ನಕಲಿ ಎನ್ ಕೌಂಟರ್ ಪ್ರಕರಣದಲ್ಲಿ ಅವರು ಭಾಗಿಯಾಗಿಲ್ಲ. ಗುಜರಾತ್ ಏಳ್ಗೆ ಸಹಿಸದ ದಿಲ್ಲಿ ಸರಕಾರ ನಮ್ಮ ಮೇಲೆ ಸಿಬಿಐ ಅಸ್ತ್ರ ಬಳಸತೊಡಗಿದೆ ಎಂದು ಮೋದಿ ಆರೋಪಿಸಿದ್ದಾರೆ. ಅಮಿತ್ ಶಾ ಈ ಪ್ರಕರಣದಲ್ಲಿ ಭಾಗಿಯಾಗಿಲ್ಲ. ಅವರು ನಿರಪರಾಧಿಯಾಗಿ ಹೊರಬರುತ್ತಾರೆ ಎಂದು ಅವರು ಮತ್ತೊಮ್ಮೆ ಪುನರುಚ್ಚರಿಸಿದ್ದರು.












Click it and Unblock the Notifications