ಅಫ್ಜಲ್ ಗುರುಗೆ ನೇಣಿಗೇರಿಸಿಲ್ಲ ಏಕೆಂದರೆ ?

ವಾಡಿಕೆಯಂತೆ ಕಾನೂನು ರೀತಿಯಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾದ ವ್ಯಕ್ತಿಯೊಬ್ಬ ರಾಷ್ಟ್ರಪತಿ ಜೀವದಾನಕ್ಕೆ ಅರ್ಜಿ ಸಲ್ಲಿಸಿದ ನಂತರ ರಾಷ್ಟ್ರಪತಿಗಳು ಅಪರಾಧಿ ಸಲ್ಲಿಸಿದ ಅರ್ಜಿಯನ್ನು ಕೇಂದ್ರ ಸರಕಾರಕ್ಕೆ ಕಳುಹಿಸುತ್ತಾರೆ. ಕೇಂದ್ರ ಸರಕಾರ ಸಂಬಂಧಪಟ್ಟ ರಾಜ್ಯ ಸರಕಾರಕ್ಕೆ ಕಳುಹಿಸುತ್ತದೆ. ಅಂದು ರಾಷ್ಟ್ರಪತಿಯಾಗಿದ್ದ ಎಪಿಜೆ ಅಬ್ದುಲ್ ಕಲಾಂ ಅವರು ಅಂದಿನ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರಕ್ಕೆ ಅರ್ಜಿ ಕಳುಹಿಸಿದ್ದರು. ಕೇಂದ್ರ ಸರಕಾರ ಸಂಬಂಧಪಟ್ಟ ದೆಹಲಿ ರಾಜ್ಯ ಸರಕಾರಕ್ಕೆ ಗುರು ಸಲ್ಲಿಸಿದ್ದ ಜೀವದಾನ ಅರ್ಜಿಯ ಬಗ್ಗೆ ಸರಕಾರದ ಅಭಿಪ್ರಾಯ ಪಡೆದುಕೊಳ್ಳಬೇಕಿತ್ತು.
2006ರಲ್ಲಿ ಅಂದಿನ ಯುಪಿಎ ಸರಕಾರದ ಗೃಹ ಸಚಿವಾಲಯ ದೆಹಲಿ ಸರಕಾರಕ್ಕೆ ನೋಟಿಸ್ ನೀಡಿ ಹೇಳಿಕೆ ನೀಡುವಂತೆ ಸೂಚಿಸಿತ್ತಂತೆ. ಆದರೆ, ದೆಹಲಿ ಸರಕಾರ ಮಾತ್ರ ಗುರುನ ಅರ್ಜಿಯನ್ನು ಮೂಲೆಗೆ ಎಸೆದಿರುವ ಅಂಶ ಬೆಳಕಿಗೆ ಬಂದಿದೆ. ರಾಜ್ಯ ಸರಕಾರದ ಹೇಳಿಕೆ ಬಂದಿಲ್ಲವಾದ್ದರಿಂದ ಗುರು ಶಿಕ್ಷೆ ತಡವಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ. ಆದರೆ, ಈ ಹೇಳಿಕೆಯನ್ನು ಸಂಪೂರ್ಣವಾಗಿ ನಿರಾಕರಿಸಿರುವ ದೆಹಲಿ ಮುಖ್ಯಮಂತ್ರಿ ಶೀಲಾ ದಿಕ್ಷೀತ್, ಅಫ್ಜಲ್ ಗುರುಗೆ ಸಂಬಂಧಿಸಿದಂತೆ ನಮಗೆ ಯಾವ ಪತ್ರವೂ ಬಂದಿಲ್ಲ ಎಂದು ಹೇಳಿದ್ದಾರೆ.
2006ರಲ್ಲೇ ಪತ್ರ ರವಾನಿಸಿದ ಕೇಂದ್ರ ಸರಕಾರ ನಾಲ್ಕು ನಿದ್ದೆ ಮಾಡುತ್ತಾ ಕುಳಿತಿದೆ. ಕೇಂದ್ರದಿಂದ ರಾಜ್ಯ ಸರಕಾರಕ್ಕೆ ಬಂದಿರುವ ಪತ್ರದ ಬಗ್ಗೆ ಮುಖ್ಯಮಂತ್ರಿಗೆ ಗೊತ್ತಿಲ್ಲ ಎಂದು ಹೇಳುತ್ತಿರುವ ಶೀಲಾ ದಿಕ್ಷೀತ್ ಅವರ ಮಾತು ಎಷ್ಟು ಖರೆ ? ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಬಿಜೆಪಿ ವಕ್ತಾರ ರಾಜೀವ ಪ್ರತಾಪ್ ರೂಡಿ, ಈ ಬಗ್ಗೆ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಕೂಡಲೇ ಸ್ಪಷ್ಟೀಕರಣ ನೀಡಬೇಕು ಎಂದು ಆಗ್ರಹಿಸಿದ್ದಾರೆ.












Click it and Unblock the Notifications