ಅಮೆರಿಕಾದಲ್ಲಿ ಅರಮನೆ ಮಾರಾಟಕ್ಕಿದೆ

A beautiful mansion up for sale
ಕ್ಯಾಲಿಫೋರ್ನಿಯಾ,ಏ.27: ದುಬಾರಿ ಅಮೆರಿಕಾದ ಅತ್ಯಂತ ದುಬಾರಿ ರಿಯಲ್ ಎಸ್ಟೇಟ್ ಪ್ರದೇಶಗಳಲ್ಲಿ ಬೆವರ್ಲಿ ಹಿಲ್ಸ್ ಒಂದು. ಈ ಬೆಟ್ಟದ ತಪ್ಪಲಿನಲ್ಲಿ ಸುಂದರವಾದ ಒಂದು ಮನೆ ಮಾರಾಟಕ್ಕಿದೆ. ಸಾರಿ, ಇದು ಮನೆ ಅಲ್ಲ, ಅರಮನೆ ಅಂತನೇ ಹೇಳಬಹುದು. ಇಂದ್ರಪ್ರಸ್ಥ ಅನಲೂಬಹುದು. ಖರೀದಿಸಲು ಆಸಕ್ತಿ ಉಳ್ಳವರು ಅರಮನೆಯ ಒಡತಿ ಕ್ಯಾಂಡಿ ಸ್ಪೆಲ್ಲಿಂಗ್ ಅವರನ್ನು ಈ ಕೂಡಲೇ ಸಂಪರ್ಕಿಸಬಹುದು.

ಮನೆಯ ಬೆಲೆ ಸುಮಾರು ಒಂದು ನೂರು ದಶಲಕ್ಷ ಡಾಲರುಗಳೆಂದು ನಿಗದಿಯಾಗಿದೆ. ಮಾತುಕತೆಗೆ ಕುಳಿತುಕೊಂಡರೆ ಸ್ವಲ್ಪ ಕಡಿಮೆ ಮಾಡಿದರೂ ಮಾಡಬಹುದು. ಇಷ್ಟು ಬೆಲೆ ಬಾಳುವ ಮನೆಗಳು ಅಮೆರಿಕಾದಲ್ಲಿ ಹೆಚ್ಚಿಲ್ಲ. ಅಮೆರಿಕಾದಲ್ಲಿ ಇರುವ ಇಂಥ ಐದು ಮನೆಗಳಲ್ಲಿ ಇದೂ ಒಂದು ಮನೆಯಾಗಿದ್ದು ಇವತ್ತು ರಿಯಲ್ ಎಸ್ಟೇಟು ಏಜೆಂಟುಗಳ ಫಾರ್ ಸೇಲ್ ಡೆಸ್ಕಿಗೆ ಬಂದಿದೆ.

ಹಾಲಿವುಡ್ಡಿನ ನಿರ್ಮಾಪಕ ದಿವಂಗತ ಅರೋನ್ ಸ್ಪೆಲ್ಲಿಂಗ್ ಅವರ ಹೆಂಡತಿ ಕ್ಯಾಂಡಿ ಸ್ಪೆಲ್ಲಿಂಗ್ ಈ ಮನೆಯ ಮಾಲಕಿ. ಇಷ್ಟು ದೊಡ್ಡ ಮನೆಯ ಅಗತ್ಯ ಅವರಿಗೆ ಈಗ ಇಲ್ಲವಂತೆ. ಅದಕ್ಕೋಸ್ಕರ ಮನೆ ಮಾರಾಟಕ್ಕೆ ಇಟ್ಟಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ.

ಪ್ರಪಂಚದಲ್ಲೇ ಅತ್ಯಂತ ವೈಭೋವೇಪೇತ ಮತ್ತು ದುಬಾರಿ ಮನೆ ಎಂದು ಹೇಳಲಾಗಿರುವ ಈ ಮನೆಯಲ್ಲಿ ಎಷ್ಟು ಕೋಣೆಗಳಿವೆ ಎನ್ನುವುದು ಸ್ವತಃ ಕ್ಯಾಂಡಿ ಅವರಿಗೇ ಗೊತ್ತಿಲ್ಲ. ಸ್ವಲ್ಪ ಹೆಚ್ಚು ಕಡಿಮೆ ಈ ಮನೆಯ ಅಳತೆ 56,500 ಚದರ ಅಡಿಯಿದೆ. ಲೆಕ್ಕಕ್ಕೆ ಸಿಗದಷ್ಟು ಕೋಣೆಗಳು, ಒಂದಿಪ್ಪತ್ತೇಳು ಸ್ನಾನದ ಮನೆಗಳು, ಬೃಹದಾಕಾರದ ಪೇಂಟಿಂಗುಗಳು ಮತ್ತು ಮನೆಯಲ್ಲೇ ದೊಡ್ಡ ಸಿನಿಮಾ ಥಿಯೇಟರ್ ಕೂಡ ಇದೆ. ಈ ಮನೆಯ ಅಂದ ಚೆಂದದ ಮುಂದೆ ಶ್ವೇತಭವನವನ್ನು ನಿವಾಳಿಸಿ ತೆಗೆಯಬೇಕು.

ಮಾರ್ಗರೆಟ್ ಮಿಚೆಲ್ ಬರೆದ ಕಾದಂಬರಿ ಆಧಾರಿತ ಚಿತ್ರ ಗಾನ್ ವಿತ್ ದ ವಿಂಡ್ ನೋಡಿದ್ದರೆ ನೆನಪಿಸಿಕೊಳ್ಳಿ. ಆ ದೊಡ್ಡ ಮನೆ, ಆ ಸ್ಟೇರ್ ಕೇಸು, ಕ್ಲಾರ್ಕ್ ಗೇಬಲ್ ನ ಮುಗುಳು ನಗೆ. ಆ ಚಿತ್ರದಲ್ಲಿದ್ದ ಸ್ಟೇರ್ ಕೇಸ್ ಕೇವಲ ಸ್ಟೂಡಿಯೋ ಸೆಟ್ಟಿಂಗ್. ಅದನ್ನು ನಿಜ ರೂಪಕ್ಕೆ ತಂದದ್ದು ಕ್ಯಾಂಡಿ. ಅದೇ ವಿನ್ಯಾಸ ಹೋಲುವ ಸ್ಟೇರ್ ಕೇಸನ್ನು ನೋಡಲು ಇವರ ಮನೆಗೆ ಬೆವರ್ಲಿ ಬೆಟ್ಟ ಹತ್ತಿ ಹೋಗಬೇಕಾಗುತ್ತದೆ. ಬೆವರ್ಲಿ ಬೆಟ್ಟ ಎಂದರೆ ಬೆಂಗಳೂರಿಗೆ ಸಮೀಪವಿರುವ ನಂದಿಬೆಟ್ಟ ಅಂದುಕೊಳ್ಳಬಹುದು. ಹಾಲಿವುಡ್ ಸ್ಟೂಡಿಯೋ ನಂದೀಶನ ಗುಡಿ. ದೇವನಹಳ್ಳಿ, ಚಿಕ್ಕಬಳ್ಳಾಪುರಗಳನ್ನು ಬೆವರ್ಲಿ ಹಿಲ್ಸ್ ಎಂದುಕೊಳ್ಳಬಹುದು. ಇಲ್ಲಿ ವಾಸವಾಗಿರುವವರು ಹೆಚ್ಚಾಗಿ ಹಾಲಿವುಡ್ ತಾರೆಯರು, ನಿರ್ದೇಶಕರು, ನಿರ್ಮಾಪಕರು ಮತ್ತಿತರ ಸೋಷಿಯಲೈಟುಗಳು, ಅಂದರೆ ಗಣ್ಯಾತಿಗಣ್ಯರು.

ಮನೆಯ ಹೆಸರು ಮೇನರ್. ಈ ಅರಮನೆಯನ್ನು ಕ್ಯಾಂಡಿ ದಂಪತಿಗಳು ಕಟ್ಟಿದ್ದು 1991 ರಲ್ಲಿ. ಒಟ್ಟು ಪ್ರದೇಶ 5 ಎಕರೆ. ಮನೆಗೆ ಛಾವಣಿ ಕಟ್ಟುವಾಗ ಯಾರೋ ತಗಾದೆ ಎತ್ತಿದ್ದರು. ಅದು ಕೇಸ್ ಕೂಡ ಆಗಿತ್ತು. ಈಗ ಕೇಸುಗಳು ಖುಲಾಸಾಗಿ ದಾಖಲೆ ಪತ್ರಗಳು ಶುದ್ಧವಾಗಿರುವುದರಿಂದ ಕೊಳ್ಳುವವರಿಗೆ ತೊಂದರೆ ಏನೂ ಆಗದು. ನೀವು ಏನೇ ಹೇಳಿ, ಮನೆ ಮಾತ್ರ ಚಿನ್ನ, ಚಿನ್ನಾ ಥರ ಇದೆ.

ಅಮೆರಿಕಾದಲ್ಲಿ ಶ್ರೀಮಂತರಾಗಲೀ ಅಥವಾ ಮಧ್ಯಮ ವರ್ಗದವರಾಗಲೀ ಮನೆ ಕಟ್ಟಿದರೆ ಅದರ ಮೇಲೆ ಬ್ಯಾಂಕ್ ಸಾಲ ಇದ್ದೇ ಇರತ್ತೆ. ಆದರೆ, ಕ್ಯಾಂಡಿ ಅವರ ಮನೆಗೆ ಯಾವ ಮಾರ್ಟಗೇಜ್ ಹಂಗೂ ಇಲ್ಲ. ಅವರ ಗಂಡನಿಗೆ ಮಾರ್ಟ್ ಗೇಜ್ ಕಂಡರಾಗುತ್ತಿರಲಿಲ್ಲವಂತೆ. ಇದೇ ವೇಳೆ, ಬೆವರ್ ಲಿ ಹಿಲ್ಸ್ ನಲ್ಲಿ ರೆವಿನ್ಯೂ ಸೈಟು, ಬಿಡಿಎ ಸೈಟುಗಳಿರುವುದಿಲ್ಲ. ಹೀಗಾಗಿ, ಖರೀದಿ ನೊಂದಾವಣೆ ಪ್ರಕ್ರಿಯೆ ಸುಲಲಿತವಾಗಿರತ್ತೆ.

ಮನಸ್ಸು ಮಾಡಿದರೆ ನೀವು ಕೂಡ ಹಾಗೂ ಹೀಗೂ ಮನೆ ಖರೀದಿಸಿ ಬಿಡಬಹುದು. ಅದೇನು ದೊಡ್ಡ ಮಾತಲ್ಲ. ಆದರೆ ಮೇನ್ ಟೇನೆನ್ಸ್ ತುಂಬಾನೇ ಕಷ್ಟ. ಅಷ್ಟು ದೊಡ್ಡ ಮನೆಗೆ ಕಸ ಗುಡಿಸಿ ರಂಗೋಲೆ ಹಾಕುವುದು ಮತ್ತು ಲೈಟ್ ಸ್ವಿಚ್ ಆನ್ ಮಾಡುವುದಕ್ಕೆ 27 ಜನ ನೌಕರರು ಬೇಕಾಗುತ್ತಾರೆ. ಮನೆ ಕಟ್ಟಿದಾಗ ಆಗಿನಕಾಲಕ್ಕೆ ಅಂದರೆ 20 ವರ್ಷಗಳ ಹಿಂದೆ 48 ದಶಲಕ್ಷ ಡಾಲರುಗಳು ಖರ್ಚಾಗಿತ್ತಂತೆ. ಮನೆಗಂದಾಯ (SAS) ಏನಿಲ್ಲಾ ಅಂದರೂ 1.5 ದಶಲಕ್ಷ ಡಾಲರು ಇರತ್ತೆ.

ಮೇನರ್ ಗೆ ವಿಮೆ ಪ್ರೀಮಿಯಂ ತಾಪತ್ರಯ ಕೂಡಾ ಇಲ್ಲ ಎಂದೂ ಕ್ಯಾಂಡಿ ಹೇಳಿಕೊಂಡಿದ್ದಾರೆ. ಕ್ಯಾಲಿಫೋರ್ನಿಯಾದಲ್ಲಿ ಭೂಕಂಪ ಆಗಾಗ ಆಗುತ್ತಲೇ ಇರತ್ತೆ. ಎಷ್ಟೋ ವೇಳೆ ಭೂಮಿ ಕಂಪಿಸಿದರೂ ತಮ್ಮ ಮನೆಗೆ ಒಂದು ಸಣ್ಣ ಕ್ರಾಕ್ ಕೂಡ ಬಂದಿಲ್ಲ ಎಂದು ಕ್ಯಾಂಡಿ ಸ್ಪಷ್ಟಪಡಿಸಿದ್ದಾರೆ. 1994 ರಲ್ಲಿ ಪ್ರಬಲ ಭೂಕಂಪ ಸಂಭವಿಸಿತ್ತು. ಆದರೆ, ಮೇನರ್ ಮಿಸುಕಾಡಲಿಲ್ಲ, ಕ್ಯಾಂಡಿ ಕುಡಿದ ನೀರು ಕೂಡ ಅಲ್ಲಾಡಿರಲಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+