2013 ಕ್ಕೆ ಮೆಟ್ರೋ ರೈಲು ಸಿದ್ಧ: ಸಿಎಂ

ಸಂಪಿಗೆ ರಸ್ತೆಯ ಮಂತ್ರಿ ಸಂಕೀರ್ಣದಲ್ಲಿ ಖಾಸಗಿ ಸಹಭಾಗಿತ್ವದ 'ನಮ್ಮ ಮೆಟ್ರೋದ ಸಂಪಿಗೆ ರಸ್ತೆ' ಹಾಗೂ ಮೆಟ್ರೋ ರೈಲು ನಿಲ್ದಾಣ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಿ ಗುರುವಾರ ಸಿಎಂ ಮಾತನಾಡುತ್ತಿದ್ದರು.
ಮುಂಬರುವ ಡಿಸೆಂಬರ್ ವೇಳೆಗೆ ಭೈಯ್ಯಪ್ಪನ ಹಳ್ಳಿಯಿಂದ ಚಿನ್ನಸ್ವಾಮಿ ಕ್ರೀಡಾಂಗಣದವರೆಗಿನ ಏಳು ಕಿ.ಮೀಗಳ ಮೆಟ್ರೋ ಸಂಚಾರ ಆರಂಭಗೊಳ್ಳಲಿದೆ. ನಂತರ ಮೆಜೆಸ್ಟಿಕ್ ಹಾಗೂ ಹೆಸರಘಟ್ಟ ಮೆಟ್ರೋ ರೈಲು ಸಂಚರಿಸಲಿದೆ. ಮಂತ್ರಿ ಸಂಕೀರ್ಣದ ಬಳಿ 80 ಸಾವಿರ ಚದರಡಿಯ ಮೆಟ್ರೊ ರೈಲು ನಿಲ್ದಾಣ 20 ತಿಂಗಳೊಳಗೆ ಪೂರ್ಣಗೊಳ್ಳಲಿದೆ. ಮಂತ್ರಿ ಸಹಭಾಗಿತ್ವದಲ್ಲಿ ನಿರ್ಮಾಣವಾಗಲಿರುವ ನಿಲ್ದಾಣದ ಬಳಿ 8 ಲಕ್ಷ ಚದರಡಿಯ ವಾಣಿಜ್ಯ ಸಂಕೀರ್ಣ ನಿರ್ಮಾಣವಾಗಲಿದೆ. ಎರಡು ಸ್ತರದ ವಾಹನ ನಿಲುಗಡೆ ವ್ಯವಸ್ಥೆ ಕಲ್ಪಿಸಲಾಗುವುದು ಏಕಕಾಲಕ್ಕೆ ಸುಮಾರು 20 ಸಾವಿರ ಕಾರುಗಳ ನಿಲುಗಡೆ ಸಾಧ್ಯ ಎಂದು ಯಡಿಯೂರಪ್ಪ ಹೇಳಿದರು.
ಹಿಂದಿನ ಸರ್ಕಾರಕ್ಕೆ ಹೋಲಿಸಿದರೆ ಮೆಟ್ರೋ ಕಾಮಗಾರಿಯ ಪ್ರಗತಿ ನಮ್ಮ ಸರ್ಕಾರದಲ್ಲಿ ಶೇ. 25ರಷ್ಟು ತೀವ್ರಗತಿಯಲ್ಲಿ ಸಾಗಿದೆ. ಮೂಲಭೂತ ಸೌಕರ್ಯಗಳು ಉದ್ದೇಶಿತ ಕಾಲಮಿತಿಯಲ್ಲಿ ಪೂರ್ಣಗೊಂಡರೆ ಯೋಜನಾವೆಚ್ಚವೂ ಕಡಿಮೆಯಾಗುತ್ತದೆ. ಜನರಿಗೂ ಅನುಕೂಲ ಎಂದು ಸಿಎಂ ಅಭಿಪ್ರಾಯಪಟ್ಟರು.
ಸಂಪಿಗೆ ಮೆಟ್ರೋ ನಿಲ್ದಾಣ ಖಾಸಗಿ ಹಾಗೂ ಸಾರ್ವಜನಿಕ ಪಾಲುದಾರಿಕೆಯಲ್ಲಿ ನಿರ್ಮಾಣಗೊಳ್ಳುವ ಮೊದಲ ನಿಲ್ದಾಣ ಎನಿಸಲಿದ್ದು, 24 ಎಕರೆ ವಿಸ್ತೀರ್ಣದ ಭೂಮಿ ಬಿಎಂಆರ್ ಸಿಎಲ್ ಸೇರಿರುತ್ತದೆ ಹಾಗೂ 35 ಕೋಟಿ ರು. ವೆಚ್ಚದಲ್ಲಿ ನಿಲ್ದಾಣವನ್ನು ಮಂತ್ರಿ ಡೆವಲಪರ್ ಸಂಸ್ಥೆ ಮಾಡಲಿದೆ. ಬರುವ ಆದಾಯವನ್ನು ಶೇಕಡಾವಾರು ಒಪ್ಪಂದದಂತೆ ಹಂಚಲಾಗುವುದು ಎಂದು ಬಿಎಂ ಆರ್ ಸಿ ಎಲ್ ನ ವ್ಯವಸ್ಥಾಪಕ ನಿರ್ದೇಶಕ ಶ್ರೀಶೈಲಂ ತಿಳಿದರು.
ಬೆಂಗಳೂರಿಗೆ ಯೋಜನೆಗಳ ಮಹಾಪೂರ: ಮುಂದಿನ ಮೂರು ವರ್ಷಗಳಲ್ಲಿ 18,872 ಕೋಟಿ ರು.ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಮೆಟ್ರೋ ನಂತರ ಮೋನೊ ರೈಲು, ವರ್ತುಲ ರೈಲು ಆರಂಭಿಸುವ ಚಿಂತನೆ ನಡೆದಿದೆ ಎಂದರು. ನಗರದಲ್ಲಿ ಕುಸಿಯುತ್ತಿರುವ ಅಂತರ್ಜಲ ಮಟ್ಟದ ಬಗ್ಗೆ ಆತಂಕ ವ್ಯಕ್ತಪಡಿಸುತ್ತಾ, 200 ಕೋಟಿ ರು ವೆಚ್ಚದಲ್ಲಿ 25 ಕೆರೆಗಳ ಪುನರುಜ್ಜೀವನ ಹಾಗೂ ಅಭಿವೃದ್ಧಿ ಕಾರ್ಯವಾಗಲಿದೆ. ಬಿಡದಿ ಬಳಿ 1400 ಮೆ.ವ್ಯಾ ವಿದ್ಯುತ್ ಉತ್ಪಾದನಾ ಕೇಂದ್ರ ಸ್ಥಾಪಿಸಲಾಗಿದ್ದು, ವಿದ್ಯುತ್ ಸಮಸ್ಯೆ ನಿವಾರಣೆಯಾಗಲಿದೆ ಎಂದರು.











Click it and Unblock the Notifications