ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖಾಸಗಿ ಕಂಪನಿ ಹಣದ ದಾಹಕ್ಕೆ ಕಲ್ಲಂಗಡಿ ಬಲಿ

By * ಚಂದ್ರಶೇಖರ್ ಬಿ., ಸವಣೂರ
|
Google Oneindia Kannada News

Watermelon grown in Savanur taluk in Haveri district
ಸವಣೂರ, ಏ. 6 : ವಯಕ್ತಿಕ ಲಾಭಕ್ಕಾಗಿ ರೈತರ ಬದುಕಿನೊಂದಿಗೆ ಚೆಲ್ಲಾಟವಾಡುವ ಬಿತ್ತನೆ ಬೀಜ ಕಂಪನಿಗಳ ಅಟ್ಟಹಾಸ ಈ ವರ್ಷವೂ ಮರುಕಳಿಸಿದ್ದು, ಸವಣೂರ ತಾಲೂಕಿನಲ್ಲಿ ಕಳಪೆ ಗುಣಮಟ್ಟದ ಬಿತ್ತನೆ ಬೀಜಕ್ಕೆ ಕಲ್ಲಂಗಡಿ ಹಣ್ಣಿನ ಬೆಳೆ ಬಲಿಯಾಗಿದೆ. ಪ್ರಾಮಾಣೀಕೃತ ಬೀಜಗಳು ಎಂಬ ಹಣೆಪಟ್ಟಿಯೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡುವ ಖಾಸಗಿ ಕಂಪನಿಗಳು ರೈತರ ಹೊಲಗಳನ್ನೇ ತಮ್ಮ ಪ್ರಯೋಗ ಶಾಲೆಗಳಾಗಿ ಮಾಡಿಕೊಂಡಿದ್ದಾರೆ. ಆದರೆ, ಬೆಳೆ ವಿಫಲಗೊಂಡಾಗ ಬಲಿಪಶುಗಳಾಗುತ್ತಿರುವುದು ರೈತರು ಎಂಬುದು ವಿಪರ್ಯಾಸ.

ತಮ್ಮ ಬೀಜಗಳ ಗುಣಮಟ್ಟ, ಇಳುವರಿ, ಯಶಸ್ಸಿನ ಬಗ್ಗೆ ಸುಳ್ಳಿನ ಸರಣಿಯನ್ನೇ ಹಣೆಯುವ, ಒತ್ತಾಯಪೂರ್ವಕವಾಗಿ ರೈತರಿಗೆ ಬೀಜಗಳನ್ನು ಮಾರುವ, ಸತತವಾಗಿ ರೈತರನ್ನು ಮೋಸಗೊಳಿಸುವ ಖಾಸಗಿ ಕಂಪನಿಗಳ ಮಾರಾಟ ಪ್ರತಿನಿಧಿಗಳು, ಬೆಳೆ ವಿಫಲವಾಗುತ್ತಿದ್ದಂತೆ ತಮ್ಮ ನಿಜರೂಪ ತೋರುತ್ತಿದ್ದಾರೆ. ಇದನ್ನು ತಡೆಗಟ್ಟಬೇಕಾದ, ರೈತರನ್ನು ಜಾಗ್ರತ ಗೊಳಿಸಬೇಕಾದ, ನಕಲಿ ಬೀಜಗಳ ಮೇಲೆ ಕ್ರಮ ಜರುಗಿಸಬೇಕಾದ ಇಲಾಖೆ ಹಾಗೂ ಅಧಿಕಾರಿಗಳು ಮಾತ್ರ ಗಾಢನಿದ್ರೆಯಲ್ಲಿದ್ದಾರೆ. ಬಿತ್ತನೆಯ ಅವಧಿಯಲ್ಲಿ ರೈತ ಸಂಪರ್ಕ ಕೇಂದ್ರಗಳು ದಲ್ಲಾಳಿಗಳ ಅಡ್ಡೆಯಾಗಿ ಪರಿವರ್ತನೆಗೊಳ್ಳುತ್ತದೆ.

ಸವಣೂರ ತಾಲೂಕಿನ ಜೇಕಿನಕಟ್ಟಿ ಗ್ರಾಮದಲ್ಲಿ ಬಿತ್ತನೆ ಮಾಡಲಾಗಿದ್ದ ಕಲ್ಲಂಗಡಿ ಹಣ್ಣಿನ ಬೆಳೆ ಸಂಪೂರ್ಣವಾಗಿ ವಿಫಲಗೊಂಡಿದ್ದು, ರೈತರು ಲಕ್ಷಾಂತರ ರೂ ಬೆಳೆ ಹಾನಿ ಅನುಭವಿಸಿದ್ದಾರೆ. ಜೇಕಿನಕಟ್ಟಿಯ ರೈತ ಮೃತ್ಯುಂಜಯ ವಿ. ಕುಬಸದ ಅವರು ತಮ್ಮ ಆರು ಎಕರೆ ನೀರಾವರಿ ಜಮೀನಿನಲ್ಲಿ ಬಿತ್ತನೆ ಮಾಡಿದ್ದ ಕಲ್ಲಂಗಡಿ ಬೆಳೆ, ಕಾಯಿ ಮೂಡುವ ಹಂತದಲ್ಲಿ ತನ್ನ ನಿಜರೂಪವನ್ನು ತೋರಿದೆ. 11790 ರೂ. ವೆಚ್ಚ ಮಾಡಿ ಸಿಕಂದರಾಬಾದ್ ಮೂಲಕ ಡೆಲ್ಟಾ ಕಂಪನಿಯ 49 ಚೀಲ ಬಿತ್ತನೆ ಬೀಜಗಳನ್ನು ಹೊಲಕ್ಕೆ ಹಾಕಿದ್ದ ಕುಬಸದ, ಕ್ರಿಮಿನಾಶಕ ಹಾಗೂ ರಸಗೊಬ್ಬರಕ್ಕಾಗಿ ವೆಚ್ಚ ಮಾಡಿದ್ದ 6630 ರೂ.ಗಳು ಸಹ ಮಣ್ಣು ಪಾಲಾಗಿವೆ. ಕೂಲಿ ಕಾರ್ಮಿಕರು, ಹೊಲದ ನಿರ್ವಹಣೆ ಸೇರಿದಂತೆ ಒಟ್ಟೂ 2 ಲಕ್ಷ ರೂ.ಗಳನ್ನು ವೆಚ್ಚ ಮಾಡಿದ್ದು, ಅಂದಾಜು 5 ಲಕ್ಷ ರೂ.ಗಳ ಬೆಳೆ ಹಾನಿಯನ್ನು ಅನುಭವಿಸಿದ್ದಾರೆ.

ಬಿತ್ತನೆ ಮಾಡಿದ ಆರಂಭದ ದಿನಗಳಲ್ಲಿ ಉತ್ತಮ ಬೆಳವಣಿಗೆ ತೋರಿದ ಕಲ್ಲಂಗಡಿ ಬೆಳೆ ಕಾಯಿ ಬಿಡುವ ಹಂತದಲ್ಲಿ ಮುರುಟಿಕೊಳ್ಳಲು ಆರಂಭಿಸಿದೆ. ಸಮರ್ಪಕವಾದ ಪ್ರಮಾಣದಲ್ಲಿ ಆಕಾರವಾಗಲಿ, ಗುಣಮಟ್ಟ ಗಾತ್ರವಾಗಲಿ ಇರದ ಕಾಯಿಗಳು, ಗಿಡದಲ್ಲಿಯೇ ಕೊಳೆಯಲು ಆರಂಭಿಸಿದೆ. ಯಾವದೇ ಹವಾಮಾನ ವೈಪರಿತ್ಯ, ನೀರಿನ ಕೊರತೆ ಇಲ್ಲದಿದ್ದರೂ, ಬೆಳೆ ಸಂಪೂರ್ಣ ವಿಫಲವಾಗಿದೆ. ಕ್ಷೇತ್ರಕ್ಕೆ ಭೆಟ್ಟಿ ನೀಡಿದ್ದ ತೋಟಗಾರಿಕೆ ಇಲಾಖೆಯ ಅಧಿಕಾರಿಗಳೂ ಬಿತ್ತನೆ ಬೀಜದ ಗುಣಮಟ್ಟದ ಬಗ್ಗೆಯೇ ಅಪಸ್ವರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸದರಿ ಡೆಲ್ಟಾ ಕಂಪನಿಗೂ ಮಾಹಿತಿ ನೀಡಿದ್ದಾರೆ.

ಆದರೆ, ಕಾಯಿಗಳು ಬಿಡುವುದಕ್ಕಿಂತ ಮುಂಚೆ ಹಲವಾರು ಬಾರಿ ಹೊಲಕ್ಕೆ ಭೆಟ್ಟಿ ನೀಡಿದ್ದ ಡೆಲ್ಟಾ ಕಂಪನಿಯ ಮಾರಾಟ ಪ್ರತಿನಿಧಿಗಳು, ಬೆಳೆ ವಿಫಲವಾಗುತ್ತಿದ್ದಂತೆ ನಾಪತ್ತೆಯಾಗಿದ್ದಾರೆ. ತಮ್ಮ ಕೋರಿಕೆಗೆ ಸೂಕ್ತ ಸ್ಪಂದನೆಯನ್ನೂ ತೋರದೆ ಕಡೆಗಣಿಸಿದ್ದಾರೆ. ಹಾನಿಗೊಳಗಾದ ತಮ್ಮನ್ನು ಅನಗತ್ಯವಾಗಿ ಅಲೆದಾಡಿಸುತ್ತಿದ್ದಾರೆ ಎಂದು ರೈತರು ದೂರಿದ್ದಾರೆ. ಕಂಡಕಂಡಲ್ಲಿ ಸಾಲ ಮಾಡಿ ಬಿತ್ತನೆ ಮಾಡಿದ್ದ ರೈತ ಇಂದು ಏಕಾಏಕಿ ಸಾಲಗಾರನಾಗಿದ್ದೂ, ಹಾಕಿದ್ದ ಬಂಡವಾಳವನ್ನೂ ಕಳೆದುಕೊಂಡಿದ್ದಾನೆ. ಈ ಬಗ್ಗೆ ಸವಣೂರಿನ ಉಪವಿಭಾಗಾಧಿಕಾರಿ ಕೆ.ಪಿ ಮೋಹನರಾಜ್ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳಿಗೂ ದೂರು ಸಲ್ಲಿಸಿದ್ದು, ಅಗತ್ಯವಾದಲ್ಲಿ ಕಂಪನಿಯ ವಿರುದ್ದ ಕಾನೂನು ಕ್ರಮವನ್ನೂ ಜರುಗಿಸುವದಾಗಿ ತಿಳಿಸಿದ್ದಾರೆ.

ಈ ಹಿಂದಿನ ವರ್ಷವೂ ಧಾನ್ಯ ತಳಿಯ ಗೋವಿನಜೋಳದ ಬಿತ್ತನೆ ಬೀಜಗಳಿಂದ ವ್ಯಾಪಕವಾದ ಪ್ರಮಾಣದಲ್ಲಿ ಹಾನಿಗೀಡಾಗಿದ್ದ ತಾಲೂಕಿನ ರೈತ ಸಮೂಹದ ಕೂಗು ಅರಣ್ಯರೋದನವಾಗಿತ್ತು. ಈ ಬಾರಿಯೂ ಉಪವಿಭಾಗಾಧಿಕಾರಿಗಳು ಹಾನಿಗೊಳಗಾದ ಬೆಳೆಯ ವೀಕ್ಷಣೆಯನ್ನು ಕೈಗೊಳ್ಳಬೇಕು. ಕಳಪೆ ಗುಣಮಟ್ಟದ ಬೀಜಗಳನ್ನು ಮಾರಿದ ಡೆಲ್ಟಾ ಕಂಪನಿಯ ಮೇಲೆ ಕ್ರಮ ಜರುಗಿಸಬೇಕು. ಹಾನಿಗೆ ಒಳಗಾದ ರೈತರಿಗೆ ಸೂಕ್ತ ಪರಿಹಾರವನ್ನು ದೊರಕಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದ್ದರೂ, ರೈತರಿಗೆ ನ್ಯಾಯ ದೊರೆಯಲಿದೆ ಎಂಬ ಪ್ರಶ್ನೆ ಉಳಿದುಕೊಂಡಿದೆ.

ಬೆಳೆ ಹಾನಿಯಾಗಿ ಅಪಾರ ನಷ್ಟ ಅನುಭವಿಸಿದ ರೈತರು ಆತ್ಮಹತ್ಯೆಗೆ ಶರಣಾದಾಗ ಬೆರಳು ತೋರಿಸುವುದು ಅವರು ಮಾಡಿದ ಸಾಲವನ್ನೇ ಹೊರತು ಮೋಸ ಮಾಡಿದ ಕಂಪನಿಗಳ ಮೇಲೆ ಯಾರೂ ಬೆರಳೆತ್ತಿ ತೋರಿಸುವುದಿಲ್ಲ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X