ಬಾಲ್ಯದ ನೆನಪಿನಾಳದಿಂದ ಒಂದು ಹನಿ

* ಚಿದಂಬರ ಬೈಕಂಪಾಡಿ, ಮಂಗಳೂರು
ದೇಶದ ಪ್ರಮುಖ ಬಂದರುಗಳಲ್ಲಿ ಒಂದಾಗಿರುವ ನವಮಂಗಳೂರು ಬಂದರು ಈಗ ಬೆಳೆದಿದೆ. ಹಚ್ಚಹಸುರಿನ ಗದ್ದೆ, ತೆಂಗಿನ ತೋಟಗಳಿಂದ ಕಂಗೊಳಿಸುತ್ತಿದ್ದ ಪಣಂಬೂರು ಈಗ ಬಂದರು ನಗರಿ. ಹಸಿರು ಮಾಯವಾಗಿದೆ, ಎಲ್ಲಿ ನೋಡಿದರೂ ಧೂಳು.. ಧೂಳು. ಬಳ್ಳಾರಿಯ ಗಣಿ ಧೂಳು ನವಮಂಗಳೂರು ಬಂದರು ನಗರವನ್ನು ಆವರಿಸಿಕೊಂಡಿದೆ. ಇಲ್ಲಿನ ರಸ್ತೆಗೆ ಕಾಲಿಟ್ಟರೆ ಸಾಕು ಧೂಳಿನಿಂದ ಧರಿಸಿದ ಬಟ್ಟೆಗಳು ಬಣ್ಣ ಕಳೆದುಕೊಳ್ಳುತ್ತವೆ. ನಿಜಕ್ಕೂ ಹೀಗಾಗುವುದೆಂದು ಯಾರೂ ಭಾವಿಸಿರಲಿಲ್ಲ.
ಆದರೆ ಸುಮಾರು 1962ನೇ ಇಸವಿಯನ್ನು ನೆನಪಿಸಿಕೊಂಡರೆ ಕಣ್ಣಿಗೆ ಕಟ್ಟುವುದು ಭತ್ತದ ಗದ್ದೆಗಳು, ತೆಂಗಿನ ತೋಟ. ನವಮಂಗಳೂರು ಬಂದರು ನಿರ್ಮಾಣ ಆರಂಭವಾಗುತ್ತಿದ್ದಂತೆಯೇ ಹಚ್ಚ ಹಸಿರು ಮಾಯವಾಯಿತು, ಕಾಂಕ್ರೀಟ್ ಕಾಡುಗಳು ಬೆಳೆದು ನಿಂತವು. 1975ರ ಜನವರಿ 11ರಂದು ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರು ತೆರೆದ ಜೀಪಿನಲ್ಲಿ ಬಂದರು ಉದ್ಘಾಟನೆಗೆ ಬಂದಾಗ ನಾನು ಹೈಸ್ಕೂಲ್ ವಿದ್ಯಾರ್ಥಿ. ಈಗಲೂ ಚೆನ್ನಾಗಿ ನೆನಪಿವೆ ಆದಿನಗಳು.
ಬೈಕಂಪಾಡಿ ಮೀನುಗಾರಿಕೆ ಹೈಸ್ಕೂಲ್‌ನಲ್ಲಿ ಓದುತ್ತಿದ್ದೆ. ಇಂದಿರಾ ಗಾಂಧಿ ಅವರನ್ನು ಹತ್ತಿರದಿಂದ ಕಾಣಲು ಅವಕಾಶವಿದೆ ಎನ್ನುವುದು ಗೊತ್ತಾಗಿ ಗೆಳೆಯರ ದಂಡುಕಟ್ಟಿಕೊಂಡು ಮಟ ಮಟ ಮಧ್ಯಾಹ್ನ ಉದ್ಘಾಟನೆ ನಡೆಯಲಿದ್ದ ಸ್ಥಳಕ್ಕೆ ಹೋದೆವು. ಖಾಕಿ ಚೆಡ್ಡಿ, ಬಿಳಿ ಅಂಗಿ(ಶಾಲೆಯ ಯೂನಿಫಾರಂ)ಗೆ ಗಂಜಿ ನೀರು ಹಾಕಿ ಇಸ್ತ್ರಿಹಾಕಿದ್ದೆ. ಆಗ ಎಲ್ಲಿ ನೋಡಿದರೂ ಬುಗರಿ ಹಣ್ಣಿನ ಗಿಡಗಳು. ನಮಗೆ ಬೇಕಾದಷ್ಟು ಹಣ್ಣು ಕಿತ್ತು ಅಂಗಿ, ಚೆಡ್ಡಿ ಕಿಸೆಗಳಿಗೆ ತುಂಬಿಸಿಕೊಂಡೆವು. ಬಿಸಿಲನ್ನೂ ಲೆಕ್ಕಿಸದೆ ಬುಗರಿ ಹಣ್ಣು ತಿನ್ನುತ್ತಾ ಉದ್ಘಾಟನೆ ಸ್ಥಳಕ್ಕೆ ಹೋದಾಗ ದೊಡ್ಡ ಪೆಂಡಾಲ್ ಹಾಕಿ ಸಾಲಾಗಿ ಕುರ್ಚಿಗಳನ್ನು ಜೋಡಿಸಿದ್ದರು. ಖಾಲಿ ಕುರ್ಚಿಗಳಿದ್ದ ಕಾರಣ ಬುಗರಿ ಹಣ್ಣು ತಿನ್ನುತ್ತಾ ಕುಳಿತೆವು. ನಾಲ್ಕು ಮಂದಿ ಕುರ್ಚಿಯಲ್ಲಿ ಕುಳಿತಿದ್ದುದನ್ನು ನೋಡಿದ ದೊಡ್ಡ ಮನುಷ್ಯರು (ಹೆಸರು ಗೊತ್ತಿಲ್ಲ) ಓಡಿಸಿಕೊಂಡು ಬಂದು ಸ್ಟೇಜಿನ ಮುಂದೆ ಹಾಸಿದ್ದ ಜಮಖಾನದ ಮೇಲೆ ಕುಳ್ಳಿರಿಸಿ ಮಿಸುಕಾಡಬಾರದು ಅಂತ ತಾಕೀತು ಮಾಡಿದರು. ಕಿಸೆಯಲ್ಲಿದ್ದ ಬುಗುರಿ ಹಣ್ಣು ಖಾಲಿಯಾದವು, ಒಂದಷ್ಟು ಜನ ಬಂದು ಪೆಂಡಾಲ್ ಸೇರಿದರು, ಇಂದಿರಾ ಗಾಂಧಿಯವರು ಮಾತ್ರ ಬರಲೇ ಇಲ್ಲ.
ಮಧ್ಯಾಹ್ನದ ಬಿಸಿಲಿನ ಝಳ ಕಡಿಮೆಯಾಗುತ್ತಿದ್ದಂತೆಯೇ ಪಂಡಿತಾರಾಧ್ಯ (ಬಂದರಿನ ಆಗಿನ ಚೀಫ್ ಇಂಜಿನಿಯರ್) ಸ್ಟೇಜ್ ಹತ್ತಿದರು. ತುಸು ಹೊತ್ತಲ್ಲಿ ಸಾಲುಗಟ್ಟಿ ಕಾರುಗಳು ಬಂದವು. ಅದರಲ್ಲಿ ಇಂದಿರಾ ಗಾಂಧಿ ಇದ್ದರು. ಕಾರಿನಿಂದ ಇಳಿದ ಇಂದಿರಾಗಾಂಧಿ ನೇರವಾಗಿ ತೆರೆದ ಜೀಪು ಹತ್ತಿದರು. ಬಂದರನ್ನು ಸುತ್ತಾಡಿದರು ಮತ್ತು ಹೆದ್ದಾರಿಯ ಮತ್ತೊಂದು ಪಕ್ಕದಲ್ಲಿರುವ ಎಂಸಿಎಫ್ (ಮಂಗಳೂರು ರಾಸಾಯನಿಕ ಮತ್ತು ರಸಗೊಬ್ಬರ ಕಾರ್ಖಾನೆ) ಉದ್ಘಾಟಿಸಿ ಬಂದರು.
ದೊಡ್ಡ ಪೆಂಡಾಲ್ ಜನರಿಂದ ತುಂಬಿ ಹೋಯಿತು. ಸ್ಟೇಜಿನ ಮುಂಭಾಗದಲ್ಲಿ ಗೋಣು ಎತ್ತರಿಸಿಕೊಂಡೇ ಕುಳಿತಿರಬೇಕಾಯಿತು. ವೀರೇಂದ್ರ ಪಾಟೀಲ್, ದೇವರಾಜ ಅರಸು, ಕಮಲಾಪತಿ ತ್ರಿಪಾಠಿ ಮುಂತಾದವರಿದ್ದ ನೆನಪು. ವೇದಿಕೆಯಲ್ಲಿದ್ದವರೆಲ್ಲಾ ಭಾಷಣ ಮಾಡಿದರು.ಇಂದಿರಾ ಗಾಂಧಿಯವರು ಭಾಷಣಕ್ಕೆ ಎದ್ದು ನಿಂತಾಗ ಪಿನ್‌ಡ್ರಾಪ್ ಸೈಲೆನ್ಸ್. ಕಂಚಿನ ಕಂಠದಲ್ಲಿ ಹಿಂದಿಯಲ್ಲಿ, ಇಂಗ್ಲಿಷ್‌ನಲ್ಲಿ ಭಾಷಣ ಮಾಡಿದರು. ಅವರು ಹೇಳಿದ ಮಾತುಗಳ ಪೈಕಿ ಈಗಲೂ ನೆನಪಿರುವುದು ಇಷ್ಟು : ಕರ್ನಾಟಕದ ಹೆಬ್ಬಾಗಿಲು ಈ ಬಂದರು. ಈ ಮೂಲಕ ಇಲ್ಲಿ ಕೈಗಾರಿಕೆ ಕ್ರಾಂತಿ ಆಗಲಿದೆ. ಭಾರತದ ಭೂಪಟದಲ್ಲಿ ಮಂಗಳೂರು ಖಾಯಂ ಸ್ಥಾನ ಪಡೆಯಲಿದೆ.
ನಿಜ ಇಂದಿರಾ ಗಾಂಧಿಯವರು ಹೇಳಿದು ಸತ್ಯ. ಈಗ ಮಂಗಳೂರು ಜಗತ್ತಿನ ಭೂಪಟದಲ್ಲಿ ಸ್ಥಾನ ಪಡೆದುಕೊಂಡಿದೆ. ಒಂದಷ್ಟು ಭಾರೀ ಕೈಗಾರಿಕೆಗಳು ಬಂದಿವೆ, ಬೇಡವೆಂದರೂ ಬರುತ್ತಿವೆ. ಪರಿಸರ, ಜೀವ ಸಂಕುಲ, ಹಸಿರು ವನಸಿರಿ ನಾಶವಾಗುವಷ್ಟರ ಮಟ್ಟಿಗೆ ಕೈಗಾರಿಕೆಗಳು ಬೇರೂರುತ್ತಿವೆ.
ಈಗ ಭತ್ತದ ಗದ್ದೆಗಳಿಲ್ಲ, ತೆಂಗಿನ ತೋಟಗಳಿಲ್ಲ, ಕಿಸೆತುಂಬಾ ತುಂಬಿಸಿಕೊಂಡು ತಿನ್ನುತ್ತಿದ್ದ ಬುಗರಿ ಹಣ್ಣಿಲ್ಲ, ಗಿಡಗಳೂ ಇಲ್ಲ. ಬಿಸಿಲಿ ಝಳ ನೀಗಿಸಿಕೊಳ್ಳಲು ಈಜಾಡಿ ಸ್ನಾನ ಮಾಡುತ್ತಿದ್ದ ಬೈಲರೆಗಳು (ಸಣ್ಣ ಸಣ್ಣ ಕೆರೆ) ಇಲ್ಲ. ಕಳೆದುಹೋದ ದಿನಗಳು ಮತ್ತೆ ಬರುವುದಿಲ್ಲ ನಿಜ, ಹಾಗೆಯೇ ಕಳೆದುಕೊಂಡ ಗದ್ದೆ, ಬಯಲು, ತೋಟ, ಕೆರೆಗಳೂ ಮತ್ತೆ ಕಾಣಸಿಗವು. ನಮಗೆ ನೆನಪಾದರೂ ಉಳಿದಿವೆ, ನಮ್ಮ ಮಕ್ಕಳಿಗೆ ಅದೂ ಗೊತ್ತಿಲ್ಲ ಎನ್ನುವುದೇ ಬೇಸರ. ಮಕ್ಕಳೇ ನಮ್ಮನ್ನು ಕ್ಷಮಿಸಿ ಬಿಡಿ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications