ಬಿಬಿಎಂಪಿ ಅಖಾಡದಲ್ಲಿ ಟಯೋಟಾ ಟೆಕ್ಕಿ

ಎಲೆಕ್ಟ್ರಾನಿಕ್ ಅಂಡ್ ಕಮ್ಯುನಿಕೇಷನ್ ಪದವೀಧರನಾಗಿರುವ ಸಿ. ಶಿವಕುಮಾರ್(24) ಅಖಾಡಕ್ಕಿಳಿದಿರುವ ಟೆಕ್ಕಿ. ವಾರ್ಡ್ ನಂಬರ್ 128ರಲ್ಲಿ ಅದೃಷ್ಟ ಪರೀಕ್ಷೆಗೆ ನಿಂತಿರುವ ಶಿವಕುಮಾರ್, ಟಯೋಟಾ ಕಂಪನಿಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಬಿಬಿಎಂಪಿ ಚುನಾವಣೆಗೆ ಸ್ಪರ್ಧಿಸಬೇಕು ಎನ್ನುವ ನನ್ನ ನಿರ್ಧಾರಕ್ಕೆ ಸ್ನೇಹಿತರ ಬೆಂಬಲವಿದೆ ಹಾಗೂ ಸಾವಿರಾರು ಜನ ಹಿತೈಷಿಗಳು ಬೆಂಬಲಕ್ಕೆ ನಿಂತಿದ್ದಾರೆ.
ಆದರೆ, ರಾಜಕೀಯಕ್ಕೆ ಪ್ರವೇಶಿಸುವುದು. ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸುವ ನಿರ್ಧಾರಕ್ಕೆ ಮೊದಲು ಕುಟುಂಬ ಸದಸ್ಯರಿಂದ ತೀವ್ರ ವಿರೋಧ ವ್ಯಕ್ತವಾಯಿತು. ಆನಂತರ ವಸ್ತು ಸ್ಥಿತಿಯನ್ನು ಮನವರಿಕೆ ಕೊಟ್ಟ ನಂತರ ಎಲ್ಲವೂ ಸಹಜಸ್ಥಿತಿ ಬಂದಿದೆ. ನನ್ನ ಕುಟುಂಬದ ಎಲ್ಲರೂ ಇದೀಗ ನನ್ನ ನಿರ್ಧಾರವನ್ನು ಬೆಂಬಲಿಸುತ್ತಿದ್ದಾರೆ ಎನ್ನುತ್ತಾರೆ ಟೆಕ್ಕಿ ಶಿವಕುಮಾರ್.
ನಾವುಗಳು ಸರಕಾರಕ್ಕೆ ಪ್ರತಿ ವರ್ಷ ತೆರಿಗೆ ತುಂಬುತ್ತೇವೆ. ಆದರೆ, ಯಾರಿಗೆ ಉಪಯೋಗವಾಗಿದೆ. ರಸ್ತೆಗಳ ಸ್ಥಿತಿ ಹದಗೆಟ್ಟುಹೋಗಿದೆ. ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಸಾಧ್ಯವಾಗಿಲ್ಲ. ಮೂಲಭೂತ ಸೌಕರ್ಯಗಳಿಲ್ಲದೆ ಜನಸಾಮಾನ್ಯರು ನಿತ್ಯ ತತ್ತರಿಸುತ್ತಿದ್ದಾರೆ. ಸದ್ಯದ ರಾಜಕೀಯ ವ್ಯವಸ್ಥೆಯೇ ಕುಲಗೆಟ್ಟು ಹೋಗಿದೆ. ಜನರಿಂದ ಆಯ್ಕೆಯಾಗುವ ಜನಪ್ರತಿನಿಧಿ ಜನರ ಕಷ್ಟ ನಷ್ಟವನ್ನು ಮರೆತುಬಿಡುತ್ತಾನೆ. ಇದೆಲ್ಲವನ್ನೂ ಕಣ್ಣಾರೆ ಕಂಡಿರುವ ನಾನು ರಾಜಕೀಯ ಪ್ರವೇಶಿಸಲು ನಿರ್ಧರಿಸಿದೆ. ಆ ಮೂಲಕ ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸಲು ತೀರ್ಮಾನಿಸಿದೆ ಎನ್ನುವುದು ಶಿವಕುಮಾರ್ ಅವರ ಮಾತು.
ವಿದ್ಯಾರ್ಥಿದೆಸೆಯಿಂದಲೂ ಶಿವಕುಮಾರ್ ನಾಯಕತ್ವ ಗುಣ ಹೊಂದಿರುವ ವ್ಯಕ್ತಿಯಾಗಿದ್ದು, ಇಂಜಿನಿಯರಿಂಗ್ ಅಭ್ಯಾಸ ಮಾಡುತ್ತಿದ್ದಾಗಲೂ ವಿದ್ಯಾರ್ಥಿ ನಾಯಕರಾಗಿ ಕೆಲಸ ಮಾಡಿದ್ದಾರೆ. ಇದೇ ಕಾರಣದಿಂದ ಅವರ ರಾಜಕೀಯ ಪ್ರವೇಶಿಸಲು ಕಾರಣವಾಗಿರಬಹುದು. ಏನಾದರಾಗಲಿ, ವಿದ್ಯಾವಂತರು, ತಿಳುವಳಿಕೆಯುಳ್ಳವರು ರಾಜಕೀಯಕ್ಕೆ ಬರಬೇಕು. ಇದರಿಂದ ಜಿಡ್ಡುಗಟ್ಟಿರುವ ರಾಜಕೀಯ ವ್ಯವಸ್ಥೆ ಬದಲಾವಣೆ ಸಾಧ್ಯ ಎನ್ನುವ ಮಾತಿದೆ.
ಹಿಂದೆ ಲೋಕಸಭೆ ಚುನಾವಣೆಯಲ್ಲಿ ಕ್ಯಾಪ್ಟನ್ ಗೋಪಿನಾಥ್ ನಂತಹ ಸಾಧಕರು ಕಣಕ್ಕಿಳಿದಿದ್ದರು. ಆದರೆ, ಮತದಾರ ಅವರನ್ನು ಸೋಲಿಸಿದರು. ವ್ಯವಸ್ಥೆ ಬದಲಾವಣೆಗಾಗಿ ಕೈಯಲ್ಲಿರುವ ಕೆಲಸಕ್ಕೆ ರಾಜೀನಾಮೆ ನೀಡಿ ಅಖಾಡಕ್ಕಿಳಿಯುವುದು ಸುಲಭವಲ್ಲ. ಶಿವಕುಮಾರ್ ನಂತವರಿಗೆ ಮತದಾರರು ಬೆಂಬಲಿಸಬೇಕು.












Click it and Unblock the Notifications