ಬೆಂಗಳೂರಿಗೆ 23 ಗಂಟೆ ವಿದ್ಯುತ್, ಸಿಎಂ

ಕಳೆದ ಕೆಲ ದಿನದಳಿಂದ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ವಿದ್ಯುತ್ ಕಣ್ಣುಮುಚ್ಚಾಲೆ ಆಡುತ್ತಿದೆ. ಪರೀಕ್ಷೆಗಳು ಹತ್ತಿರ ಬಂದಿದ್ದರಿಂದ ವಿದ್ಯಾರ್ಥಿಗಳ ಗೋಳು ಹೇಳತೀರದಾಗಿದೆ. ಅನಿಯಮಿತವಾಗಿ ವಿದ್ಯುತ್ ಕೊರತೆಯಿಂದಾಗಿ ಕೈಗಾರಿಕೆಗಳು ತೀವ್ರ ಸಮಸ್ಯೆಯನ್ನು ಎದುರಿಸುತ್ತಿವೆ.
ಗ್ರಾಮೀಣ ಪ್ರದೇಶದ ಜನರು ಕರೆಂಟ್ ಮುಖ ನೋಡುವುದು ಒಂದು ಅದೃಷ್ಟ ಎಂಬಂತಾಗಿದೆ. ನಿಯಮಿತವಾಗಿ ವಿದ್ಯುತ್ ಒದಗಿಸುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ. ಈ ಬಗ್ಗೆ ಸರಕಾರ ಸ್ಪಷ್ಟನೆ ನೀಡಬೇಕು ಎಂದು ಪ್ರತಿಪಕ್ಷಗಳು ಆಗ್ರಹಿಸಿದವು. ಈ ಸಂದರ್ಭದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಕೆಲಕಾಲ ಮಾತಿನ ಚಕಮಕಿಯೂ ನಡೆಯಿತು.
ಆಗ ಎದ್ದು ನಿಂತ ಮುಖ್ಯಮಂತ್ರಿ ಯಡಿಯೂರಪ್ಪ, ವಿದ್ಯುತ್ ನಿಯಮಿತವಾಗಿ ಪೂರೈಸಲು ಸರಕಾರ ನಿರ್ಧರಿಸಿದೆ. ಕೈಗಾರಿಕೆಗಳು ಹೆಚ್ಚಾಗಿರುವ ಹಾಗೂ ವಿದ್ಯುತ್ ಅನಿವಾರ್ಯವಾಗಿ ಬೇಕಿರುವ ಮಹಾನಗರ ಬೆಂಗಳೂರಿಗೆ 23 ಗಂಟೆ ವಿದ್ಯುತ್ ನೀಡಲು ತೀರ್ಮಾನಿಸಲಾಗಿದೆ. 1 ಗಂಟೆ ಮಾತ್ರ ಲೋಡ್ ಶೆಡ್ಡಿಂಗ್ ಮಾಡಲಾಗುವುದು. ಪರೀಕ್ಷೆಯ ಸಮಯವಾಗಿದ್ದರಿಂದ ರಾಜ್ಯಾದ್ಯಂತ ರಾತ್ರಿ 7 ಗಂಟೆಯಿಂದ 11ಗಂಟೆ ವರೆಗೆ ಸಿಂಗಲ್ ಫೇಸ್ ವಿದ್ಯುತ್ ಪೂರೈಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
ಫೆಬ್ರವರಿ ತಿಂಗಳಲ್ಲಿ 400 ಮೆಗಾವ್ಯಾಟ್ ವಿದ್ಯುತ್ ನ್ನು ಖರೀದಿಸಲಾಗಿದೆ. ಮಾರ್ಚ್ ತಿಂಗಳಲ್ಲಿ ಇನ್ನೂ 1000 ವಿದ್ಯುತ್ ಖರೀದಿಸಲಾಗುವುದು. ಕೇಂದ್ರದಿಂದ ಬರಬೇಕಿರುವ ಅಗತ್ಯ ಪ್ರಮಾಣದ ವಿದ್ಯುತ್ ಬಂದಿಲ್ಲ. ವಿದ್ಯುತ್ ನೀಡುವಲ್ಲಿ ಕೇಂದ್ರ ಸರಕಾರ ಹಿಂದೇಟು ಹಾಕುತ್ತಿದೆ ಎಂದು ಯಡಿಯೂರಪ್ಪ ಆರೋಪಿಸಿದರು. ಮುಂದಿನ ಎರಡು ವರ್ಷಗಳಲ್ಲಿ ರಾಜ್ಯ ಸರಕಾರ ಸುಮಾರು 5900 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲು ಎಲ್ಲ ಕ್ರಮಗಳನ್ನು ಕೈಗೊಂಡಿದೆ ಎಂದು ಅವರು ಹೇಳಿದರು.












Click it and Unblock the Notifications