ಗಣರಾಜ್ಯೋತ್ಸವ : ಪಟ್ಟದಕಲ್ಲು ಸ್ತಬ್ಧಚಿತ್ರದ ಸಂಚಲನ
ನವದೆಹಲಿ, ಜ. 23: ದೇವಸ್ಥಾನ ವಾಸ್ತುಶಿಲ್ಪ ಗಳ ತೊಟ್ಟಿಲು ಎಂದು ಹೆಸರಾಗಿರುವ ಪಟ್ಟದಕಲ್ಲು,ವಿಶ್ವ ಪರಂಪರೆ ತಾಣ ಕೂಡ ಹೌದು. ಪಟ್ಟದಕಲ್ಲಿನ ವೈಭವದ ಜೊತೆಗೆ ಕನ್ನಡದ ಹೆಮ್ಮೆಯ ಡೊಳ್ಳುಕುಣಿತ ಹಿಮ್ಮೇಳವನ್ನು ಸೇರಿಸಿ, ಈ ಬಾರಿಯ ಗಣತಂತ್ರ ದಿನದ ಪಥಸಂಚಲನದಲ್ಲಿ ಪ್ರದರ್ಶಿಸಲಾಗುತ್ತಿದೆ. ರಾಜ್ಯದ ವಾಸ್ತುಶಿಲ್ಪ ವೈಭವ ಸಾರುವ ಸ್ತಬ್ಧಚಿತ್ರ, ಜಾನಪದ ಸೊಗಡನ್ನು ಬಿಂಬಿಸಲು ಡೊಳ್ಳು ಕುಣಿತವನ್ನು ಆರಿಸಿಕೊಳ್ಳಲಾಗಿದೆ. ಈಗಾಗಲೇ ಎರಡು ಬಾರಿ ಅತ್ಯುತ್ತಮ ಸ್ತಬ್ಧ ಚಿತ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿರುವ ಕರ್ನಾಟಕ ಈ ಬಾರಿ ಕೂಡ ಜನಮನ ಗೆದ್ದು, ವಿಜಯಿಯಾಗಲಿ ಎಂದು ದಟ್ಸ್ ಕನ್ನಡ ತಂಡ ಹಾರೈಸುತ್ತದೆ.
ಗಣರಾಜ್ಯೋತ್ಸವ ದಿನದ ಕಾರ್ಯಕ್ರಮಗಳ ತಾಲೀಮು ನಡೆಯುತ್ತಿರುವೆಡೆಯಲ್ಲಿ ಡೊಳ್ಳು ಕುಣಿತದ್ದೇ ಸದ್ದು, ಪಟ್ಟದಕಲ್ಲು ವೈಭವದ್ದೇ ಮಾತು. ಸ್ಥಳೀಯ ಪತ್ರಕರ್ತರಂತೂ ಕೆಮೆರಾ, ಮೊಬೈಲ್, ನೋಟ್ ಪ್ಯಾಡ್ ಬದಿಗಿಟ್ಟು ಕುಣಿಯುವುದೊಂದೇ ಬಾಕಿ.ಆದರೆ, ಸುರಕ್ಷತಾ ನಿಯಮಗಳು ಹಿಂದೆಂದಿಗಿಂತಲೂ ಈ ಬಾರಿ ಹೆಚ್ಚಾಗಿರುವುದರಿಂದ ನಿಂತಲ್ಲೇ ಫೋಟೋ ಕ್ಲಿಕ್ಕಿಸುತ್ತಾ ಕಾಲುಕುಣಿಸುತ್ತಿದ್ದರು ಎಂಬುದು ನಮ್ಮ ದೆಹಲಿ ಪ್ರತಿನಿಧಿಗಳ ಅಂಬೋಣ.
ಪಟ್ಟದಕಲ್ಲು ಸ್ತಬ್ಧಚಿತ್ರ, ಡೊಳ್ಳು ಕುಣಿತದ ವಿವರ:
*ರಾಜ್ಯದ ವಾಸ್ತುಶಿಲ್ಪ ವೈಭವ ಬಿಂಬಿಸಲು ಪಟ್ಟದಕಲ್ಲು ದೇಗುಲದ ಆಕೃತಿಯ ಆಯ್ಕೆ. ವಿಶ್ವನಾಥ ಮಂದಿರ ಹಾಗೂ ಮಲ್ಲಿಕಾರ್ಜುನ ದೇವಸ್ಥಾನವನ್ನು ಒಳಗೊಂಡಿದೆ ಈ ಸ್ತಬ್ಧಚಿತ್ರ.
*ವಿಶ್ವನಾಥ ಮಂದಿರದ ಕೆಳಭಾಗ ದಕ್ಷಿಣ ಭಾರತದ ದ್ರಾವಿಡಶೈಲಿಯಲ್ಲಿದ್ದು,ಮೇಲ್ಭಾಗ ಉತ್ತರ ಭಾರತ ಶೈಲಿಯಲ್ಲಿದೆ. ಮಲ್ಲಿಕಾರ್ಜುನ ದೇವಾಲಯ ಸಂಪೂರ್ಣವಾಗಿ ದ್ರಾವಿಡ ಶೈಲಿಯಲ್ಲಿದೆ.
*ಈ ಸ್ತಬ್ಧ ಚಿತ್ರದ ವಿನ್ಯಾಸವನ್ನು ಕಲಾವಿದ ಶಶಿಧರ ಅಡಪ ನಿರ್ಮಿಸಿದ್ದು, ಬೆಂಗಳೂರಿನ ಸಂಜಯ ಮಾರ್ಕೆಂಟಿಂಗ್ ಸಂಸ್ಥೆ ಸ್ತಬ್ಧಚಿತ್ರ ನಿರ್ಮಾಣದ ಹೊಣೆ ಹೊತ್ತಿದೆ.
*ಸ್ತಬ್ಧ ಚಿತ್ರ ನಿರ್ಮಾಣವನ್ನು ಬೆಂಗಳೂರು ಹಾಗೂ ದಿಲ್ಲಿಯಲ್ಲಿ ಮಾಡಲಾಗಿದ್ದು ಸುಮಾರು 29 ಲಕ್ಷ ರು ತಗುಲಿದೆ. 2000ನೇ ಇಸವಿಯಿಂದಲೂ ಸಂಜಯ ಮಾರ್ಕೆಟಿಂಗ್ ಸಂಸ್ಥೆಯೇ ಸ್ತಬ್ಧಚಿತ್ರ ನಿರ್ಮಾಣ ಮಾಡುತ್ತಾ ಬಂದಿದೆ.
* ಡೊಳ್ಳು ಕುಣಿತ ತಂಡ:ಸಾಗರದ ಪ್ರಸಿದ್ಧ ಕಲಾವಿದ ಟಾಕಪ್ಪ ಅವರ ನೇತೃತ್ವದಲ್ಲಿ ಶಿವಮೊಗ್ಗ ಜಿಲ್ಲೆಯ ಕಣ್ಣೂರಿನ ಕಣ್ಣೇಶ್ವರ ಯುವಕ ಸಂಘ ಮತ್ತು ತಮಪುರದ ಗೌತಮೇಶ್ವರಿ ಯುವಕ ಮಂಡಳ.
*2006 ರಲ್ಲಿ ರಾಜ್ಯದ ವತಿಯಿಂದ ಪ್ರದರ್ಶಿಸಲಾದ ಗೊಮ್ಮಟೇಶ್ವರನ ಮಹಾಮಸ್ತಕಾಭಿಷೇಕ ಸ್ತಬ್ಧ ಚಿತ್ರಕ್ಕೆ ಮೊದಲ ಬಹುಮಾನ ಲಭಿಸಿತ್ತು.2008ರಲ್ಲಿ ಪ್ರದರ್ಶಿಸಲಾದ ಹೊಯ್ಸಳ ಶೈಲಿ ದೇವಸ್ಥಾನಕ್ಕೆ ಉತ್ತಮ ವಸ್ತ್ರವಿನ್ಯಾಸ ಬಹುಮಾನ ಲಭಿಸಿತ್ತು.
ಪಥ ಸಂಚಲನದಲ್ಲಿ ನಗರದ ವಿದ್ಯಾರ್ಥಿಗಳು
*ಬೆಂಗಳೂರಿನ ಆರ್.ವಿ. ಶಾಲೆ, ಜೀವನಭೀಮಾನಗರದ ಸೇಕ್ರೆಡ್ ಹಾರ್ಟ್ ಶಾಲೆ ಹಾಗೂ ಜೀವನಭೀಮಾನಗರದ ಸರಕಾರಿ ಶಾಲೆ-ಈ 3 ಶಾಲೆಗಳಿಂದ ಒಟ್ಟು 160 ಮಕ್ಕಳನ್ನು ಇದಕ್ಕಾಗಿ ಆಯ್ಕೆ ಮಾಡಲಾಗಿದೆ.
*ಇವರಲ್ಲಿ 140 ಹೆಣ್ಣು ಮಕ್ಕಳು. ಎಲ್ಲರೂ 8 ಮತ್ತು 9 ನೇ ತರಗತಿ ಕಲಿಯುತ್ತಿರುವವರು. ಬೆಂಗಳೂರಿನ ಸುಜಾತಾ ಮೂರ್ತಿ ನೃತ್ಯ ಸಂಯೋಜನೆ ನಡೆಸಿದ್ದು, 3 ತಿಂಗಳಿನಿಂದ ಅಭ್ಯಾಸ ನಿರತರಾಗಿದ್ದಾರೆ.
*ದಕ್ಷಿಣ ಭಾರತದಿಂದ ಪಥ ಸಂಚಲನದಲ್ಲಿ ಭಾಗವಹಿಸುತ್ತಿರುವ ಏಕೈಕ ತಂಡ ಇದಾಗಿದ್ದು, ತಂಜಾವೂರಿನ ಸೌತ್ ಜೋನ್ ಕಲ್ಚರಲ್ ಸೆಂಟರ್ ಮೂಲಕ ಈ ಆಯ್ಕೆ ನಡೆಯಿತು.











Click it and Unblock the Notifications