ರೆಡ್ಡಿ ವಿರುದ್ಧ ಪ್ರಕರಣ ದಾಖಲಿಸಿದ ಸಿಬಿಐ

ಸಿಬಿಐ ರೆಡ್ಡಿ ವಿರುದ್ಧ ಪ್ರಕರಣ ದಾಖಲಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮತ್ತೊಂದು ಪೀಕಲಾಟ ಶುರುವಾಗಿದ್ದು, ಸಂಪುಟದಿಂದ ರೆಡ್ಡಿಯನ್ನು ಕೈಬಿಡಬೇಕೆ, ಬೇಡವೇ ಎಂದು ನಿರ್ಧರಿಸುವುದೇ ದೊಡ್ಡ ಪ್ರಶ್ನೆಯಾಗಿದೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಯಡಿಯೂರಪ್ಪ, ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಯಾರ ಮೇಲೆಯೂ ಆರೋಪಗಳಿಲ್ಲ. ಅಲ್ಲದೇ ಯಾರನ್ನೂ ಸಂಪುಟದಿಂದ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಅವರ ಹೇಳಿದ್ದಾರೆ.
ಜನಾರ್ದನ ರೆಡ್ಡಿ ಮೇಲೆ ಸಿಬಿಐ ಕೇಸ್ ದಾಖಲಿಸಿ ಆರೋಪಿ ಸ್ಥಾನದಲ್ಲಿ ನಿಲ್ಲಿಸಿದರೆ, ಅವರು ನೈತಿಕತೆವಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಹಿರಿಯ ನಾಯಕ ಧನಂಜಯ್ ಕುಮಾರ್ ಬುಧವಾರ ಮಾಧ್ಯಮ ಪ್ರತಿನಿಧಿಗಳಿಗೆ ವಿವರಿಸಿದ್ದರು. ನಂತರ ಅವರು ತಮ್ಮ ಮಾತನ್ನು ಬದಲಿಸಿರುವುದು ಬೇರೆ ವಿಷಯ.
ಸಚಿವರಾದ ಜನಾರ್ದನರರೆಡ್ಡಿ ಮಾಲೀಕತ್ವದ ಓಬಳಾಪುರಂ ಮೈನಿಂಗ್ ಕಂಪನಿ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿರುವುದನ್ನು ದೃಢೀಕರಿಸಿರುವ ಸಿಬಿಐ ತಂಡ ಅತಿಕ್ರಮಣ, ಅಕ್ರಮ ಗಣಿ ಸಂಗ್ರಹದ ಆರೋಪದ ಮೇಲೆ ವಿಶೇಷ ನ್ಯಾಯಾಲಯದಲ್ಲಿ ಅರಣ್ಯ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆ ನಿಯಮದಡಿಯಲ್ಲಿ ಪ್ರಕರಣ ದಾಖಲಿಸಿದೆ.
ರೆಡ್ಡಿ ಸಹೋದರರ ಗಣಿ ಕಂಪನಿಗಳು ಗಡಿ ಉಲ್ಲಂಘಿಸಿ ಕಾನೂನು ಬಾಹಿರವಾಗಿ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದು, ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಓಬಳಾಪುರಂ ಮತ್ತು ಎಚ್ ಸಿದ್ದಾಪುರ ಗ್ರಾಮ ಹಾಗೂ ಬಳ್ಳಾರಿಯಲ್ಲೂ ಕಾನೂನು ಉಲ್ಲಂಘಿಸಿರುವುದು ಪತ್ತೆಯಾಗಿದೆ. ತನಿಖೆ ಮುಗಿಯುವವರೆಗೂ ಬಳ್ಳಾರಿ ಬಿಟ್ಟು ಬೇರಡೆ ತೆರಳದಂತೆ ಸಚಿವ ಜನಾರ್ದನರೆಡ್ಡಿಗೆ ಸಿಬಿಐ ತಾಕೀತು ಮಾಡಿದೆ ಎನ್ನಲಾಗಿದೆ.
ಅತ್ತ ಸಿಬಿಐ ತನಿಖೆ ಆರಂಭ ಇನ್ನೊಂದಡೆ ರೆಡ್ಡಿ ಒಡೆತನದ ಮೈನಿಂಗ್ ಕಂಪನಿಗಳ ಕಚೇರಿ, ಎನ್ನೋಬಲ್ ಇಂಡಿಯಾ ಕಚೇರಿ, ಈ ನಮ್ಮ ಕನ್ನಡ ನಾಡು ಪತ್ರಿಕಾ ಕಚೇರಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳು, ಕಾಗದ ಪತ್ರಗಳ, ವ್ಯಾಪಾರ ವಹಿವಾಟಿನ ಕಡಿತಗಳ ಪರಿಶೀಲನೆ ನಡೆಸಿದ್ದಾರೆ. 150 ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications