2012 ರ ಪ್ರಳಯಕ್ಕೆ ವೈಜ್ಞಾನಿಕ ಆಧಾರವಿಲ್ಲ, ಕಲಾಂ
ಬೆಂಗಳೂರು, ನ. 27 : ಪ್ರಳಯಕ್ಕೆ ಸಂಬಂಧಿಸಿದ ಉಹಾಪೋಹಗಳಿಗೆ ಅರ್ಥವಿಲ್ಲ. 2012 ರಲ್ಲಿ ಪ್ರಳಯವಾಗಲಿದೆ ಎನ್ನುವುದರಲ್ಲಿ ವೈಜ್ಞಾನಿಕವಾಗಿ ಯಾವ ಆಧಾರವೂ ಇಲ್ಲ. ಈ ಬಗ್ಗೆ ಜನರು ಆತಂಕಪಡುವ ಅಗತ್ಯವಿಲ್ಲ ಎಂದು ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಸ್ಪಷ್ಟಪಡಿಸಿದರು.
ಕೆಂಗೇರಿ ಬಿಜಿಎಸ್ ಆರೋಗ್ಯ ಮತ್ತು ಶಿಕ್ಷಣ ಸಿಟಿಯಲ್ಲಿ ಎಸ್ ಜೆಬಿ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆಯೋಜಿಸಿರುವ ಮೂರು ದಿನಗಳ ಬಿಜಿಎಸ್ ಉತ್ಸವ 2009 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. 2012 ಪ್ರಳಯದ ಬಗ್ಗೆ ಪ್ರೌಢ ಶಾಲೆಯ ವಿದ್ಯಾರ್ಥಿಯೊಬ್ಬನ ಲಿಖಿತ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಳಯವಾಗಲಿದೆ ಎನ್ನುವುದು ಶುದ್ಧ ಸುಳ್ಳು. ಯಾರೂ ಭಯಪಡಬಾರದು ಎಂದು ಕಿವಿಮಾತು ಹೇಳಿದರು. 10 ಬಿಲಿಯನ್ ವರ್ಷದ ನಂತರ ಸೂರ್ಯನಲ್ಲಿ ಥರ್ಮೋ ನ್ಯೂಕ್ಲಿಯರ್ ರಿಯಾಕ್ಷನ್ ನಡೆಯಲಿದ್ದು, ಆಗ ಸೂರ್ಯ ಹೊತ್ತಿ ಉರಿಯಲಿದ್ದಾನೆ. ಆದರೆ, ಈಗ ಸೂರ್ಯನಿಗೆ ಈಗ 5 ಬಿಲಿಯನ್ ವರ್ಷವಾಗಿದ್ದರಿಂದ ಪ್ರಳಯ ಪ್ರಕ್ರಿಯೆ ನಡೆಯುವುದಿಲ್ಲ ಸ್ಪಷ್ಟಪಡಿಸಿದರು.
2012ರಲ್ಲಿ ಪ್ರಕೃತಿಯಲ್ಲಿ ಕೆಲವೊಂದು ಬದಲಾವಣೆಗಳು ಆಗಬಹುದು. ಇಷ್ಟು ಮಾತ್ರಕ್ಕೆ ಪ್ರಳಯ ಸಂಭವಿಸಿ ಇಡೀ ಪ್ರಪಂಚವೇ ನಾಶವಾಗಲಿದೆ ಎಂಬುದಕ್ಕೆ ಅರ್ಥವಿಲ್ಲ. ಈ ಬಗ್ಗೆ ಯಾವ ಆಧಾರವೂ ಇಲ್ಲ. ಜನರು ಇದರ ಬಗ್ಗೆ ಆತಂಕಕ್ಕೆ ಒಳಗಾಗಬೇಕಿಲ್ಲ ಎಂದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications