ಮೈಸೂರು ಬಸ್ ನಿಲ್ದಾಣಗಳಿಗೆ ಕಾಯಕಲ್ಪ

Mysore bus stand uplift
ಮೈಸೂರು, ಅ.29: ಮೈಸೂರು ಜಿಲ್ಲೆಯಲ್ಲಿನ 10 ಬಸ್ ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಾರಿಗೆ ಸಚಿವ ಆರ್ ಅಶೋಕ್ ಹೇಳಿದ್ದಾರೆ.ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮೈಸೂರು ಗ್ರಾಮಾಂತರ ವಿಭಾಗದ ವತಿಯಿಂದ ನೂತನ ಹುಣಸೂರು ಬಸ್ ನಿಲ್ದಾಣ ಉದ್ಘಾಟಿಸಿ ಅವರು ಈ ವಿಷಯ ಪ್ರಕಟಿಸಿದರು.

ಹೆಚ್ ಡಿ ಕೋಟೆ, ಬನ್ನೂರು, ಕೆ ಆರ್ ನಗರ, ಸಾತಗಳ್ಳಿ, ಚಾಮುಂಡಿಬೆಟ್ಟ ಸೇರಿದಂತೆ ಒಟ್ಟು ಹತ್ತು ಬಸ್ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಿ ಮೂಲ ಸೌಕರ್ಯ ಅಭಿವೃದ್ಧಿಪಡಿಸಲಾಗುತ್ತದೆ ಎಂದು ಅವರು ಹೇಳಿದರು. ಖಾಸಗಿ ಸಾರಿಗೆಗೆ ಸರಿಸಮಾನವಾಗಿ ಸರ್ಕಾರಿ ಸ್ವಾಮ್ಯದ ರಾಜ್ಯ ಸಾರಿಗೆ ಸಂಸ್ಥೆ ಸೇವೆಯನ್ನು ಒದಗಿಸುತ್ತದೆ. ವಿದ್ಯಾರ್ಥಿಗಳು, ಅಂಗವಿಕಲರು, ಹಿರಿಯ ನಾಗರಿಕರಿಗೆ ಹಲವು ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಸಾರ್ವಜನಿಕರಿಗೆ ಗುಣಮಟ್ಟದ ಸೇವೆ ಒದಗಿಸಲಾಗುತ್ತದೆ ಎಂದು ಸಚಿವರು ಹೇಳಿಕೊಂಡರು.

ಸುಮಾರು 5ಎಕರೆ ವಿಸ್ತೀರ್ಣದಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಹುಣಸೂರು ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಅಗತ್ಯವಿರುವ ಇತರೆ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗಿದೆ. ಕಳೆದ ಹದಿನೈದು ತಿಂಗಳಲ್ಲಿ 20,000 ನೌಕರರನ್ನು ಸಾರಿಗೆ ನಿಗಮಕ್ಕೆ ನೇಮಕ ಮಾಡಿಕೊಳ್ಳಲಾಗಿದೆ. ನೋಮಕಾತಿ ಪ್ರಕ್ರಿಯೆಯಲ್ಲು ಪಾರದರ್ಶಕತೆಯಿದೆ.ಕನ್ನಡಿಗರು ಅದರಲ್ಲೂ ಹೆಚ್ಚಾಗಿ ಗ್ರಾಮೀಣ ಪ್ರದೇಶದವರು ಹೆಚ್ಚಿನ ಪ್ರಮಾಣದಲ್ಲಿ ನೌಕರಿ ಪಡೆದುಕೊಂಡಿದ್ದಾರೆ ಎಂದು ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಹುಣಸೂರು ಕ್ಷೇತ್ರದ ಶಾಸಕ ಹೆಚ್ ಪಿ ಮಂಜುನಾಥ್ ಮಾತನಾಡಿ ಬಿಳಿಕೆರೆ, ಹನಗೋಡು ಹಾಗೂ ಕಟ್ಟಮಳಲವಾಡಿಯಲ್ಲಿ ಬಸ್ ನಿಲ್ದಾಣ ಮಂಜೂರಾಗಿದ್ದು ಕೂಡಲೇ ಕಾಮಗಾರಿ ಕೈಗೊಳ್ಳಬೇಕೆಂದು ಸಾರಿಗೆ ಸಚಿವರಲ್ಲಿ ವಿನಂತಿಸಿದರು. ಸಂಸತ್ ಸದಸ್ಯ ಹೆಚ್ ವಿಶ್ವನಾಥ್ ಮಾತನಾಡಿ ಸಾರ್ವಜನಿಕ ಕ್ಷೇತ್ರದಲ್ಲಿ ಪ್ರಾಮಾಣಿಕತೆ ಕೊರತೆಯಿಂದ ಅಭಿವೃದ್ಧಿ ಕುಂಠಿತವಾಗಿದೆ. ಅಭಿವೃದ್ಧಿಯನ್ನು ದೃಷ್ಟಿಯಾಗಿಟ್ಟುಕೊಂಡು ಪಕ್ಷಬೇಧ ಮರೆತು ಕೆಲಸ ಮಾಡಬೇಕಾಗಿದೆ ಎಂದು ಅಭಿಪ್ರಾಯ ತಾಳಿದರು.

ನವೆಂಬರ್ 2 ರಂದು ಹೊಗೆಸೊಪ್ಪು ಖರೀದಿಸುವ ಹಲವು ವಿದೇಶಿ ಕಂಪನಿಗಳು ಆಗಮಿಸುತ್ತಿದ್ದು ಈ ಭೇಟಿ ಫಲಪ್ರದವಾಗುವ ನಿರೀಕ್ಷೆ ಇದೆ. ಇದರಿಂದ ತಂಬಾಕು ಬೆಳೆಗಾರರಿಗೆ ಹೆಚ್ಚಿನ ಅನುಕೂಲವಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದರು. ಸಮಾರಂಭದಲ್ಲಿ ಗೃಹ ಮಂಡಳಿ ಅಧ್ಯಕ್ಷ ಜಿ ಟಿ ದೇವೇಗೌಡ, ವಿಧಾನ ಪರಿಷತ್ ಸದಸ್ಯರಾದ ಚಿಕ್ಕಮಾದು ಹಾಗೂ ಕೆ ಟಿ ಶ್ರೀಮಂಠೇಗೌಡ ಮಾತನಾಡಿದರು.

ಹುಣಸೂರು ಪುರಸಭೆ ಅಧ್ಯಕ್ಷ ಹೆಚ್ ಎನ್ ಚಂದ್ರಶೇಖರ್, ಉಪಾಧ್ಯಕ್ಷೆ ಶ್ರೀಮತಿ ಮಂಜುಳ, ತಾಲ್ಲೂಕು ಪಂಚಾಯಿತ್ ಅಧ್ಯಕ್ಷ ಇಮ್ರಾನ್ ಖಾನ್, ಉಪಾಧ್ಯಕ್ಷ ಚನ್ನವೀರಯ್ಯ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನಿರ್ದೇಶಕ ಎನ್ ಎ ಸಲೀಂ ಮತ್ತಿತರರು ಉಪಸ್ಥಿತರಿದ್ದರು.

(ದಟ್ಸ್ ಕನ್ನಡವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+