ಮಳೆ : ಬನ್ನಿ ನಮ್ಮವರಿಗಾಗಿ ಸ್ಪಂದಿಸೋಣ

ಉತ್ತರ ಕರ್ನಾಟಕದ ಜಿಲ್ಲೆಗಳ ಅನೇಕ ಗ್ರಾಮಗಳ ಮನೆಗಳು ಮೇಲುಮುದ್ದೆಯವು. ಗೋಡೆಗಳು ಮಣ್ಣಿನವು. ಹೀಗಾಗಿ ಸಿಟ್ಟು ಮಾಡಿಕೊಂಡ ವರುಣ ಧೋ ಅಂತ ಎಡಬಿಡದೆ ಸುರಿದರೆ ತಡೆದುಕೊಳ್ಳುವ ಶಕ್ತಿ ಅವಕ್ಕಿಲ್ಲ. ಪೈಪೋಟಿಗಿಳಿದಂತೆ ನಾಮುಂದು ತಾಮುಂದು ಎಂದ ಮನೆಗಳು ಕುಸಿದು ಬಿದ್ದಿವೆ. ಪ್ರತಿ ಗ್ರಾಮದಲ್ಲಿ ಬಹುತೇಕ ಮನೆಗಳು ಕುಸಿದು ಕುಂತಿವೆ. ಬಡಜನ ಕಂಗಾಲಾಗಿ ಹೋಗಿದೆ. ಮನೆ, ಮಠ ಕಳೆದುಕೊಂಡವರಲ್ಲಿ ಹೆಚ್ಚಿನ ಮಂದಿ ರೈತ ಸಮುದಾಯಕ್ಕೆ ಸೇರಿದ್ದಾರೆ.
ಮೊದಲೇ ಹಿಂದುಳಿದ ಪ್ರದೇಶ, ಸರಕಾರ ಹಾಗೂ ಜನಪ್ರತಿನಿಧಿಗಳಿಂದ ನಿರ್ಲಕ್ಷ್ಯ ಒಳಗಾಗಿ ಮೂಲಭೂತ ಸೌಕರ್ಯಗಳು ಕೂಡ ನೆಟ್ಟಗೆ ಇಲ್ಲಿ ಸಿಗುವುದಿಲ್ಲ. ಇಂತ ಪರಿಸ್ಥಿತಿ ನಡುವೆ ಬರಗಾಲ ಬೇರೆ. ಹಾಗೂ ಹೀಗೂ ಮಾಡಿ ರೈತ ಜನ ಬದುಕಿನ ಬಂಡಿ ಸಾಗಿಸುತ್ತಿದ್ದರು. ಆದರೆ, ಮಳೆರಾಯನಿಗೆ ಅದೂ ಕೂಡಾ ಮನಸ್ಸಿಗೆ ಹಿಡಿಸಲಿಲ್ಲ ಅಂತಾ ಕಾಣುತ್ತೆ. ಕಳೆದ ನಾಲ್ಕು ದಿನಗಳಿಂದ ಹಚ್ಚಿ ಹೊಡೆದ ಮಳೆಯ ರಭಸಕ್ಕೆ ಎಲ್ಲವೂ ನಾಶಗೊಂಡಿದೆ. ಕೈಗೆ ಬಂದ ಬೆಳೆ ನಾಶ, ಕಷ್ಟಾನೋ ಸುಖಾನೋ ಇದ್ದೊಂದು ಸೂರು ಕೂಡಾ ಇದೀಗ ಕುಸಿದು ಬಿದ್ದಿದೆ. ಈ ಮೂಲಕ ಬದುಕಿನ ಆಶಾಭಾವನೆಯನ್ನು ಅಲ್ಲಿಯ ಜನತೆ ಕಳೆದುಕೊಂಡಿದ್ದಾರೆ.
ನಮ್ಮ ಘನ ಸರಕಾರ ವಿಧಾನಸೌಧದಲ್ಲಿ ಎರಡು ಸಾರಿ ಸಭೆ ಕರೆದು ಪರಿಹಾರ ಕಾರ್ಯಕ್ಕೆ 100 ಕೋಟಿ ರುಪಾಯಿಗಳಂತೆ ಎರಡು ಬಾರಿ ಘೋಷಣೆ ಮಾಡಿದೆ. ಕನಿಷ್ಠ ಅಂದರೂ ಸಾವಿರಾರು ಕೋಟಿ ರುಪಾಯಿಗಳ ನಷ್ಟವಾಗಿದೆ. ಸರಕಾರ ನೀಡುವ 200 ಕೋಟಿ ರುಪಾಯಿ ಯಾವ ಮೂಲೆಗೆ ಸಾಕಾಗುತ್ತಿದೆ. ಕೇಂದ್ರದ ನೆರವಿಗೆ ಸರಕಾರ ಮನವಿ ಮಾಡಿದೆ. ರಾಜ್ಯದಿಂದ ನಾಲ್ಕು ಮಂದಿ ಕ್ಯಾಬಿನೆಟ್ ಸಚಿವರು, ಒಬ್ಬರು ರಾಜ್ಯ ಮಂತ್ರಿಗಳು ಇದ್ದಾರೆ. ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ಒಟ್ಟಾಗಿ ಪರಿಹಾರ ಕಾರ್ಯ ನಡೆಸಿದರೆ, ಜನರ ಬದುಕನ್ನು ಸಂಪೂರ್ಣವಾಗಿ ಅಲ್ಲದಿದ್ದರೆ, ಉಸಿರಾಡುವಂತೆ ಮಾಡಬಹುದು.
ಆದರೆ, ಯಡಿಯೂರಪ್ಪ ಕೇಂದ್ರಕ್ಕೆ ಮನವಿ ಮಾಡಿಕೊಂಡರೆ, ಕೆಪಿಸಿಸಿ ಅಧ್ಯಕ್ಷ ಕೇಂದ್ರಕ್ಕೆ ಏಕೆ ? ರಾಜ್ಯ ಸರಕಾರವೇ ಪರಿವಾರ ಕಾರ್ಯಕ್ಕೆ ಮುಂದಾಗಬೇಕು ಎಂದು ಫರ್ಮಾನು ಹೊರಡಿಸುತ್ತಾರೆ. ಜೆಡಿಎಸ್ ಪರಿಹಾರ ಕಾರ್ಯಕ್ಕೆ ಧನಸಹಾಯ ಮಾಡಲಿದೆ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಿದೆ. ಇನ್ನೊಂದಡೆ ಹುಬ್ಬಳ್ಳಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಯಡಿಯೂರಪ್ಪ ಅವರನ್ನು ಮುಖಾಮೋತಿ ನೋಡಿದೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಟೀಕಿಸಲಾರಂಭಿಸುತ್ತಾರೆ. ಬೆಕ್ಕಿಗೆ ಚೆಲ್ಲಾಟವಾದರೆ, ಬದುಕನ್ನೇ ಕಳೆದುಕೊಂಡ ಪ್ರವಾಹ ಪೀಡಿತರಿಗೆ ಪ್ರಾಣ ಸಂಕಟವಾಗಿದೆ. ಇಲ್ಲಿಯೂ ಕೂಡಾ ನಮ್ಮ ನಾಯಕರು ರಾಜಕೀಯ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ.
ಸರಿ, ರಾಜ್ಯದ 11 ಜಿಲ್ಲೆಗಳು ನೀರಿನಲ್ಲಿ ಮುಳುಗಿವೆ. ನೂರಾರು ಗ್ರಾಮಗಳು ನದಿಯಂತಾಗಿವೆ. ಸರ್ವಸ್ವವನ್ನೂ ಕಳೆದುಕೊಂಡ ಮಂದಿ ಸರಕಾರದ ಸಹಾಯಕ್ಕಾಗಿ ಕಣ್ಣು ಬಿಟ್ಟು ನೋಡುತ್ತಿದೆ. ಸಹಜವೂ ಕೂಡಾ. ನಿರಾಶ್ರಿತರಲ್ಲಿ ಗರ್ಭೀಣಿ ಹೆಂಗಸರು, ಬಾಣಂತಿಯರು, ಮಕ್ಕಳು, ಮಹಿಳೆಯರು, ವೃದ್ಧರು, ಅಂಗವಿಕಲರು, ರೋಗರುಜಿನವುಳ್ಳವರು ಇದ್ದಾರೆ. ಅವರ ಪರಿಸ್ಥಿತಿ ಕಂಡರೆ ಅಯ್ಯೋ ಎನಿಸಿದೆ ಇರದು. ಎಲ್ಲೂ ಭೂಕಂಪವಾದರೆ, ಸುನಾಮಿ ಅಪ್ಪಳಿಸಿದರೆ, ಮತ್ತ್ಯಾವದೋ ರಾಷ್ಟ್ರೀಯ ದುರಂತ ಸಂಭವಿಸಿದಾಗ ತುತ್ತು ಅನ್ನ ಕೊಟ್ಟು ಸಂತೈಸಿದವರು ನಾವು. ಇದೀಗ ನಮ್ಮವರೆ, ನಮ್ಮ ಪಕ್ಕದವರ ಬದುಕು ಚಿಂದಿಚಿಂದಿಯಾಗಿದೆ. ಬದುಕು ರೂಪಿಸಬೇಕಾಗಿರುವುದು ಸರಕಾರದ ಕೆಲಸ. ಆದರೆ, ಇಷ್ಟು ದೊಡ್ಡ ಮಟ್ಟದ ದುರಂತ ಸರಕಾರವೊಂದರಿಂದಲೇ ನಿಭಾಯಿಯಲು ಸಾಧ್ಯವೇ ?
ಅದೇನೆ ಇರಲಿ, ಬೆಂಗಳೂರು ಸೇರಿದಂತೆ ಇತರೆ ಸ್ಥಳದಲ್ಲಿರುವ ಶ್ರೀಮಂತ ಜೀವನವಲ್ಲದಿದ್ದರೂ ನೆಮ್ಮದಿಯಾಗಿ ಬದುಕುವಂತಹ ಸ್ಥಿತಿಯಲ್ಲಿರುವ ನಾವುಗಳು ನಮ್ಮವರ ಬದುಕಿಗಾಗಿ ಮಿಡಿಯಬೇಕಿದೆ. ಎಲ್ಲವನ್ನೂ ಕಳೆದಕೊಂಡು ಸಂತ್ರಸ್ಥರಾಗಿರುವ ನಮ್ಮ ಸಾಮರ್ಥ್ಯಕ್ಕೆ ತಕ್ಕಷ್ಟು ಅದು 1 ರುಪಾಯಿಯಾದರೂ ಸರಿ ಸಹಾಯ ಮಾಡಬೇಕಿರುವುದು ನಮ್ಮ ಕರ್ತವ್ಯ. ಈಗಾಗಲೇ ಬಿಜೆಪಿ ಶಾಸಕರು ತಮ್ಮ ತಿಂಗಳ ಪಗಾರ, ಸರಕಾರಿ ನೌಕರರು ಒಂದು ವೇತನ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಇದರ ಜೊತೆಗೆ ಬೆಂಗಳೂರಿನಲ್ಲಿರುವ ಕೈಗಾರಿಕೆಗಳು, ಉದ್ಯಮಿದಾರರು, ಸಾಫ್ಟ್ ವೇರ್ ಕಂಪನಿಗಳು, ಸಾಫ್ಟ್ ವೇರ್ ಇಂಜಿನಿಯರ್ ಗಳು, ಖಾಸಗಿ ಕಂಪನಿಯಗಳಲ್ಲಿ ದೊಡ್ಡ ದೊಡ್ಡ ಹುದ್ದೆಯಲ್ಲಿರುವವರು, ಚಲನಚಿತ್ರ ಕಲಾವಿದರು ಕೈಲಾದಷ್ಟು ಸಹಾಯ ಮಾಡಿ ಎನ್ನುವುದು ನಮ್ಮ ವಿನಂತಿ. ಸಂಸದ ಹಾಗೂ ಸುವರ್ಣ ಚಾನೆಲ್ ನ ಮುಖ್ಯಸ್ಥರಾದ ರಾಜೀವ ಚಂದ್ರಶೇಖರ್ ಅವರು ಸಂತ್ರಸ್ಥರಿಗೆ ಪರಿಹಾರಕ್ಕೆ 25 ಲಕ್ಷ ರುಪಾಯಿ ನೀಡಿ ಮುನ್ನುಡಿ ಬರೆದಿದ್ದಾರೆ. ಉದ್ಯಮಿದಾರರು ಉದಾರತನ ತೋರಬೇಕಿದೆ, ಏಕೆಂದರೆ ಅವರು ಕೂಡಾ ನಮ್ಮವರೆ ಅಲ್ಲವೇ...












Click it and Unblock the Notifications