ಯಲ್ಲಾಪುರದ ವಾಹನಗಳ 'ಮ್ಯೂಸಿಯಂ'ಗೆ ಸ್ವಾಗತ!

ಸುಳ್ಳಲ್ಲ. ಇವೆಲ್ಲ ಯಲ್ಲಾಪುರ ತಾಲೂಕಿನ ಕಾಡುಗಳಿಂದ ಮರಗಳನ್ನು ಕಡಿದು ಅಕ್ರಮವಾಗಿ ಸಾಗಿಸುತ್ತಿದ್ದ ಸಂದರ್ಭದಲ್ಲಿ ಅರಣ್ಯ ಇಲಾಖೆಯವರು ಅತೀ ಶ್ರಮವಹಿಸಿ ಹಿಡಿದು ತಂದ ವಾಹನಗಳು. ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿ ಅಲ್ಲಿ ತೀರ್ಪು ಬರುವವರೆಗೂ ಈ ವಾಹನಗಳಿಗೆ ಅರಣ್ಯ ಇಲಾಖೆಯ ಆವಾರವೇ ವಾಸಸ್ಥಾನ. ಕಳೆದ 30 ವರ್ಷಗಳ ಹಿಂದೆ ಹಿಡಿದು ತಂದ ವಾಹನಗಳೂ ಇಲ್ಲಿವೆ. ಲಾರಿ, ಮಿನಿ ಲಾರಿ, ರಿಕ್ಷಾ, ಕಾರು, ಓಮ್ನಿ, ಜೀಪ್, ಟೆಂಪೋ, ಟ್ರಾಕ್ಟರ್.... ಹೀಗೆ ಎಲ್ಲ ರೀತಿಯ ವಾಹನಗಳೂ ಇಲ್ಲಿವೆ. ಈ ವಾಹನಗಳನ್ನು ನೋಡುವವರಿಲ್ಲ. ನಿರ್ವಹಿಸುವವರಂತೂ ಮೊದಲೇ ಇಲ್ಲ. ನಿಂತ ಜಾಗದಲ್ಲಿಯೇ ನಿಂತು ಮಣ್ಣಾಗಿ ಹೋಗುತ್ತಿವೆ. ಈ ವಾಹನಗಳ ಜೊತೆಯಲ್ಲಿಯೇ ಹಿಡಿಯಲ್ಪಟ್ಟ ಕಟ್ಟಿಗೆ ಮಾಲುಗಳ ಕಥೆಯೂ ಹೀಗೆಯೇ ಆಗುತ್ತಿದೆ. ಲಕ್ಷಾಂತರ ರೂ ಬೆಲೆಬಾಳುವ ಮರಗಳು ಗೆದ್ದಲು ಹಿಡಿದು ಯಾರ ಉಪಯೋಗಕ್ಕೂ ಬಾರದಂತಾಗಿವೆ.
ವಿಷಯ ಕೆದಕುತ್ತ ಹೋದಂತೆ ಒಂದೊಂದೇ ಮಾಹಿತಿಗಳು ಹೊರಬರತೊಡಗಿದವು. ಈ ಎಲ್ಲ ವಾಹನಗಳು ನಿಂತಲ್ಲಿಯೇ ನಿಂತಿದ್ದರೂ ಪ್ರಯೋಜನ, ಲಾಭ ಪಡೆದುಕೊಳ್ಳುತ್ತಿರುವವರೂ ಇದ್ದಾರೆ. ಅರೆ, ಅದು ಹೇಗೆ, ವಾಹನಗಳು ನಿಂತಲ್ಲೇ ನಿಂತು ಮಣ್ಣಾಗಿ ಹೋದರೆ ಯಾರಿಗೆ ಪ್ರಯೋಜನ ಎನ್ನುತೀರಾ? ಈ ವಾಹನಗಳ ಪ್ರಯೋಜನ ಪಡೆದುಕೊಳ್ಳುತ್ತಿರುವವರು ಕಳ್ಳರು! ನಿಜ ...ಕೆಲ ವ್ಯಕ್ತಿಗಳು ಇಲ್ಲಿರುವ ಪ್ರತಿಯೊಂದೂ ವಾಹನದ ಉಪಯುಕ್ತ ಬಿಡಿಭಾಗಗಳನ್ನೊಂದೂ ಬಿಡದೆ ಎಲ್ಲವನ್ನೂ ದೋಚಿಕೊಂಡು ಹೋಗುತ್ತಿದ್ದಾರೆ. ಉತ್ತಮವಾಗಿರುವ ಟಯರ್‌ಗಳು, ಸೀಟುಗಳು, ಕಾರ್ ಸ್ಟೀರಿಯೋ, ಡಿ.ವಿ.ಡಿ, ಇಂಜಿನ್‌ನ ಬಿಡಿಭಾಗಗಳು, ಕೊನೆಗೆ ಹೆಡ್‌ಲೈಟುಗಳನ್ನೂ ದೋಚಿಕೊಂಡು ಹೋಗಿದ್ದಾರೆ! ಹೊಸ ಟಯರ್‌ಗಳ ಜಾಗದಲ್ಲಿ ನಿರುಪಯುಕ್ತವೆಂದು ಬಿಸಾಡಿದ ಟಯರ್‌ಗಳನ್ನು ಇಟ್ಟಿದ್ದಾರೆ. ಚಾಲಾಕಿ ಕಳ್ಳರು ವಾಹನದ ಬಾಗಿಲಿನ ಬೀಗವನ್ನು ತೆಗೆದು ಒಳಗೆ ಇರುವ ಸೀಟು, ಸ್ಟೀರಿಯೋ, ಬಲ್ಬ್, ಲೈಟುಗಳು ಮುಂತಾದ ಎಲ್ಲ ಉಪಯುಕ್ತ ವಸ್ತುಗಳನ್ನೂ ಮಂಗಮಾಯ ಮಾಡಿದ್ದಾರೆ.
ಯಾವುದೇ ವಾಹನವನ್ನು ಇಲಾಖೆಯ ಸಿಬ್ಬಂದಿಗಳು ಹಿಡಿದು ತಂದು ಅರಣ್ಯ ಇಲಾಖೆಯ ಆವಾರದಲ್ಲಿ ನಿಲ್ಲಿಸಿದ ಎರಡೇ ದಿನಗಳಲ್ಲಿ ಚೋರರ ಈ ಕೈಚಳಕ ಪ್ರಾರಂಭವಾಗಿರುತ್ತದೆ. ಒಂದು ವಾರದ ನಂತರ ಆ ವಾಹನದ ಮಾಲಕರಿಗೂ ಅದರ ಗುರುತು ತಿಳಿಯದಂತೆ ತಮ್ಮ ಅವಯವಗಳನ್ನು ಕಳೆದುಕೊಂಡು ವಿಕಾರವಾಗಿರುತ್ತವೆ. ಹಲವರ ಅಭಿಪ್ರಾಯದಂತೆ ಕೆಲವರು ಹೀಗೆ ಬಿಡಿಭಾಗಗಳನ್ನು ಸಂಗ್ರಹಿಸಿ ಮಾರುವುದನ್ನೇ ಉದ್ಯೋಗವಾಗಿಸಿಕೊಂಡಿದ್ದಾರೆ. ಅಲ್ಲದೆ, ಅರಣ್ಯ ಇಲಾಖೆಯ ಕೆಲ ಸಿಬ್ಬಂದಿಗಳೂ ಕಳ್ಳರ ಜೊತೆ ಕೈಗೂಡಿಸಿರುವುದು ದುರಂತ.
ಅರಣ್ಯ ಇಲಾಖೆಯ ಅಧಿಕಾರಿಗಳು ಹೇಳುವಂತೆ, ಈ ವಿಷಯದಲ್ಲಿ ಅವರು ಏನೂ ಮಾಡುವ ಹಾಗಿಲ್ಲ. ನ್ಯಾಯಾಲಯದ ತೀರ್ಪು ಬರುವವರೆಗೂ ಅವುಗಳನ್ನು ಸ್ಥಳಾಂತರಿಸುವಂತೆಯೂ ಇಲ್ಲ. ಇಲಾಖೆಯಿಂದ ಹಿಡಿಯಲ್ಪಟ್ಟ ನಾಟಾಗಳನ್ನು ಹರಾಜು ಪ್ರಕ್ರಿಯೆಯಲ್ಲಿ ಮಾರಾಟ ಮಾಡಲು ಅನುಮತಿಯಿದ್ದರೂ ವಾಹನಗಳನ್ನು ಹಾಗೆಯೇ ಇಡಬೇಕಾಗುತ್ತದೆ. ಇನ್ನು ವಾಹನಗಳ ಮಾಲಕರು ಸಿಕ್ಕಿಬಿದ್ದ ವಾಹನಗಳ ಬಗ್ಗೆ ತಲೆಕೆಡಿಸಿಕೊಳ್ಳುವದಿಲ್ಲ. ಹೆಚ್ಚಿನ ವಾಹನಗಳಿಗೆ ನೋಂದಣಿಯಿರುವದಿಲ್ಲ. ಸೂಕ್ತ ದಾಖಲೆಗಳಿರುವದಿಲ್ಲ. ಇನ್ನೂ ಕೆಲವು ಎಲ್ಲೆಲ್ಲಿಂದಲೋ ಕದ್ದು ತಂದವುಗಳಾಗಿರುತ್ತವೆ. ಹೋದರೆ ಹೋಯಿತು ಎಂಬ ಭಾವನೆಯಲ್ಲಿಯೇ ಇರುತ್ತಾರೆ.
ನ್ಯಾಯಾಲಯದಲ್ಲಿ ತೀರ್ಪು ಬರುವುದರೊಳಗಾಗಿ ಪ್ರತಿಯೊಂದು ವಾಹನವೂ ನಿರುಪಯುಕ್ತವಾಗಿರುತ್ತದೆ. ಅದರ ಬದಲಾಗಿ ಬೆಂಗಳೂರು ಸೇರಿದಂತೆ ಇತರ ಮಹಾನಗರಗಳ ಪೊಲೀಸರು ಅನುಸರಿಸುವ ಮಾರ್ಗದಿಂದ ಹೀಗೆ ನಿರುಪಯುಕ್ತವಾಗುವ ವಾಹನಗಳನ್ನು ಮುಂದೊಂದು ದಿನ ಸದುಪಯೋಗವಾಗುವಂತೆ ಮಾಡಬಹುದು.












Click it and Unblock the Notifications