ಮಾಲೇಗಾಂವ್ ಸ್ಫೋಟ:ಸಾಧ್ವಿಗೆ ಜಾಮೀನು ನಕಾರ
ಮುಂಬೈ, ಜು. 10 : ಮಾಲೇಗಾಂವ್ ಸ್ಫೋಟಕ್ಕೆ ಸಂಬಂಧಿಸಿದಂತೆ ಮೋಕಾ ಕಾಯ್ದೆಯಡಿ ಬಂಧಿತರಾಗಿರುವ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಿಶೇಷ ನ್ಯಾಯಾಲಯ ತಿರಸ್ಕೃರಿಸಿದೆ. ನಿಗದಿತ ಅವಧಿಯಲ್ಲಿ ಸಮರ್ಪಕವಾದ ಸಾಕ್ಷ್ಯಾಧಾರಗಳನ್ನು ಒದಗಿಸುವಲ್ಲಿ ಸಾಧ್ವಿ ಪರ ವಕೀಲ ವಿಫಲವಾಗಿರುವುದೇ ಪ್ರಗ್ಯಾಸಿಂಗ್ ಅವರ ಜಾಮೀನು ಅರ್ಜಿ ತಿರಸ್ಕೃತಗೊಳ್ಳಲು ಕಾರಣವಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಪಬ್ಲಿಕ್ ಪ್ರಾಸಿಕ್ಯೂಟರ್ ರೋಹಿಣಿ ಸಾಲಿಯಾನ್, ಮೋಕಾ ಕಾಯ್ದೆಯಡಿ 90 ದಿನದೊಳಗೆ ದೋಷಾರೋಪಣೆ ಪಟ್ಟಿ ಸಲ್ಲಿಸುವದರೊಳಗೆ ಜಾಮೀನಿಗೆ ಅರ್ಜಿ ಸಲ್ಲಿಸಬೇಕು. ಆದರೆ, ದೋಷಾರೂಪಣೆ ಪಟ್ಟಿ ಸಲ್ಲಿಸಿದ ನಂತರ ಜಾಮೀನಿಗೆ ಆರೋಪಿಯು ಅರ್ಜಿ ಸಲ್ಲಿಸಿದ್ದಾರೆ ಎಂದರು.
ಸಾಧ್ವಿ ಪರ ವಕೀಲ ಗಣೇಶ್ ಸೋವಾನಿ ಪ್ರಕಾರ, ಮಾಲೇಗಾಂವ್ ಸ್ಟೋಟಕ್ಕೆ ಸಂಬಂಧಿದಂತೆ ಅಕ್ಟೋಬರ್ 23 ರಂದು ಮಹಾರಾಷ್ಟ್ರ ಭಯೋತ್ಪಾದನೆ ನಿಗ್ರಹ ಪಡೆ ಪೊಲೀಸರು ಬಂಧಿಸಿದ್ದರು. ಜನವರಿ 20ಕ್ಕೆ 89 ದಿನಗಳಾಗುತ್ತವೆ. ಆದರೆ, ಪೊಲೀಸರು ಅಕ್ಟೋಬರ್ 10ರಂದು ಬಂಧಿಸಿದ್ದೇವೆ ಎಂದು ತಪ್ಪು ವಿವರಣೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಇದೀಗ ಮೋಕಾ ಕಾಯ್ದೆಯಡಿ ಬಂಧಿತರಾದವರಿಗೆ ಜಾಮೀನು ಅವಧಿಯನ್ನು 180 ದಿನಕ್ಕೆ ವಿಸ್ತರಿಸಲಾಗಿದೆ.
2008ರ ಸೆಪ್ಟೆಂಬರ್ 29 ರಂದು ಮಾಲೇಗಾಂವ್ ನಲ್ಲಿ ನಡೆದ ಸ್ಫೋಟದಲ್ಲಿ ಅನೇಕ ಸಾವು ನೋವುಗಳು ಸಂಭವಿಸಿದ್ದವು. ಇದರಲ್ಲಿ ಸಾಧ್ವಿ ಪ್ರಗ್ಯಾ ಸಿಂಗ್, ಪುಣೆಯ ಅಭಿನವ್ ಭರತ್, ಸೇನಾಧಿಕಾರಿ ಪ್ರಸಾದ್ ಶ್ರೀಕಾಂತ್ ಪುರೋಹಿತ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
(ಏಜನ್ಸೀಸ್)












Click it and Unblock the Notifications