ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಖ್ಯಮಂತ್ರಿಗಳೆ ತಲೆದಂಡ ಸಾಕು ನಿಲ್ಲಿಸಿ

By Staff
|
Google Oneindia Kannada News

ಸ್ವಾಮಿ ಮುಖ್ಯಮಂತ್ರಿಗಳೆ ರಾಜ್ಯದ ಜನತೆಗೆ ಬಿಜೆಪಿ, ನಿಮ್ಮ ಸರಕಾರದ ವರ್ತನೆ ಹಾಗೂ ನೀವು ತೆಗೆದುಕೊಳ್ಳುತ್ತಿರುವ ತಲೆದಂಡದ ತೀರ್ಮಾನಗಳಿಂದ ರಾಜ್ಯದ ಜನತೆಗೆ ಕಿರಿಕಿರಿಯಾಗುತ್ತಿದೆ. ಸಂಪುಟ ರಚನೆ ಮಾಡುವುದಾದರೆ ಒಂದು ಸಾರಿ ಬೇಡವಾಗಿರುವ ಎಲ್ಲ ಸಚಿವರ ರಾಜೀನಾಮೆ ಪಡೆದು ಒಂದೇ ಸಾರಿ ಸಂಪುಟವನ್ನು ಪುನರ್ ರಚನೆ ಮಾಡಿಬಿಡಿ. ಅದು ಬಿಟ್ಟು ಮೂರು ತಿಂಗಳಿಗೆ ಒಬ್ಬ ಸಚಿವರಂತೆ ಬಲಿ ತೆಗೆದುಕೊಳ್ಳುತ್ತಾ ಅನಗತ್ಯ ಗೊಂದಲ ಸೃಷ್ಟಿಸಿಕೊಳ್ಳುತ್ತಿರುವುದು ಸರಿ ಎನಿಸುತ್ತಿಲ್ಲ ಬಿಡಿ.

*ಮೃತ್ಯುಂಜಯ ಕಲ್ಮಠ

ಹುಕ್ಕೇರಿ ಶಾಸಕ ಉಮೇಶ ಕತ್ತಿ ಅವರಿಗಾಗಿ ಕಳೆದ ಕೆಲ ತಿಂಗಳಗಳ ಹಿಂದೆ ಹೈದರಾಬಾದ್ ಕರ್ನಾಟಕ ಭಾಗದಿಂದ ಸಚಿವರಾಗಿದ್ದ ಎಸ್ ಕೆ ಬೆಳ್ಳುಬ್ಬಿ ಅವರನ್ನು ಸಂಪುಟದಿಂದ ಕೈಬಿಟ್ಟಿದ್ದೀರಿ. ಇದೀಗ ನಿಮ್ಮ ಪರಮಾತ್ಮ ಆಗಿರುವ ಸತತ ಮೂರು ಬಾರಿ ಶಾಸಕರಾಗಿದ್ದ ಹಾಗೂ ಸಚಿವ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸಿ ಮುಜರಾಯಿ ಖಾತೆಯ ಮಹತ್ವವನ್ನು ಜನಸಾಮಾನ್ಯರಿಗೆ ತಿಳಿಸಿದ್ದ ಕೃಷ್ಣಯ್ಯಶೆಟ್ಟಿ ಅವರಿಂದ ರಾಜೀನಾಮೆ ಪಡೆದುಕೊಂಡು ವಿ ಸೋಮಣ್ಣ ಅವರಿಗೆ ಸ್ಥಾನ ಕಲ್ಪಿಸಿದ್ದೀರಿ. ಸರಿ, ಇದು ಎಲ್ಲಿಯವರೆಗೆ ಅಂತ ?

ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ಆತನ ಸನ್ನಿದಿಯಲ್ಲಿ ಸಚಿವ ಸ್ಥಾನದ ಹುದ್ದೆಯ ರಾಜೀನಾಮೆ ಪತ್ರಕ್ಕೆ ಸಹಿ ಮಾಡಿದ ಮಾಜಿ ಸಚಿವ ಕೃಷ್ಣಯ್ಯ ಕುಟುಂಬ ಸಮೇತ ನೇರವಾಗಿ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಕ್ಕೆ ತೆರಳಿ ತಮ್ಮ ರಾಜೀನಾಮೆ ಪತ್ರ ನೀಡಿದ್ದಾರೆ. ಆಗ ಕುಟುಂಬ ಸದಸ್ಯರು ಸೇರಿ ಕೃಷ್ಣಯ್ಯ ಶೆಟ್ಟಿ ಕಣ್ಣಲ್ಲಿ ನೀರು ಉಕ್ಕಿ ಬಂತು. ಅದು ಸಹಜ. ಸಿಕ್ಕಿರುವ ಸ್ಥಾನವನ್ನು ಸಮರ್ಥವಾಗಿ ನಿರ್ವಹಿಸಿದರೂ ಅನಿವಾರ್ಯವಾಗಿ ರಾಜೀನಾಮೆ ನೀಡಬೇಕಾಗಿ ಬಂದಿದ್ದು, ಎಂತವರಿಗೂ ದುಃಖ ಸಂಗತಿಯೇ. ಇದಕ್ಕೆ ಕೃಷ್ಣಯ್ಯ ಶೆಟ್ಟಿ ಹೊರತಲ್ಲ.

ನಾಳೆ ಅನ್ಯ ಪಕ್ಷದ ಇನ್ನೊಬ್ಬ ಪ್ರಬಲ ಮುಖಂಡ ಬಿಜೆಪಿ ಸೇರ್ಪಡೆಗೊಂಡರೆ ಅವರಿಗಾಗಿ ಮತ್ತ್ಯಾವ ಸಚಿವರನ್ನು ಬಲಿ ತೆಗೆದುಕೊಳ್ಳಲು ಚಿಂತನೆ ನಡೆಸಿದ್ದೀರಿ ? ನೀವು ಮಾಡುತ್ತಿರುವ ಕೆಲಸದಿಂದ ನಿಮ್ಮದೇ ಪಕ್ಷದ ನಿಷ್ಟಾವಂತ ಕಾರ್ಯಕರ್ತರು ನಿಮ್ಮ ವಿರುದ್ಧ ತೀವ್ರ ಅಸಮಾಧಾನಗೊಂಡಿದ್ದಾರೆ ಎನ್ನುವುದನ್ನು ಮರೆಯಬೇಡಿ. ಹೊನ್ನಾಳಿ ಶಾಸಕ ರೇಣುಕಾಚಾರ್ಯ ಈಗಾಗಲೇ ಇದೇ ಕಾರಣಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ನಿಮ್ಮಿಂದ ಪದೆಪದೇ ತಲೆದಂಡ ತೀರ್ಮಾನಗಳು ಹೊರಬೀಳತೊಡಗಿದರೆ, ಕೊನೆಗೆ ಏನಾಗಬಹುದು ಎಂದು ಸ್ವಲ್ಪ ಯೋಚಿಸಬೇಕಲ್ಲವೇ ?

ಇನ್ನೂ ನಾಲ್ಕು ವರ್ಷ ರಾಜ್ಯಭಾರ ಮಾಡಬೇಕಾಗಿದೆ. ಬದಲಾವಣೆ ಬಯಸಿ ರಾಜ್ಯದ ಜನತೆ ನಿಮಗೆ ಅಧಿಕಾರ ನೀಡಿದ್ದಾರೆ. ಕಳೆದ ಒಂದು ತಿಂಗಳಿಂದ ನಿಮ್ಮ ಸರಕಾರದಲ್ಲಿ ನಡೆದ ಬೆಳವಣಿಗೆಗಳು ಮತ ನೀಡಿದ ಮತದಾರರಿಗೆ ಭ್ರಮನಿರಸವಾಗಿದೆ. ಕಾಂಗ್ರೆಸ್ ಪಕ್ಷಕ್ಕಿಂತ ಕಚ್ಚಾಟದಲ್ಲಿ ನಾವೇನು ಕಮ್ಮಿ ಇಲ್ಲ ಎಂಬಂತೆ ವರ್ತಿಸಿದ್ದೀರಿ. ಇನ್ನೂ ಮುಂದಾದರೂ ತಪ್ಪು ಮಾಡದಂತೆ ರಾಜ್ಯ ಹಾಗೂ ಜನರ ಕಲ್ಯಾಣಕ್ಕಾಗಿ ಕೆಲಸ ಮಾಡಬಾರದೇ ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X