ನೋಡಬನ್ನಿ ಉಳ್ಳಾಲದ ಸೋಮೇಶ್ವರ ಬೀಚ್

*ಚಿದಂಬರ ಬೈಕಂಪಾಡಿ, ಮಂಗಳೂರು
ಉಳ್ಳಾಲ ಈ ದೇಶದ ಮೊಟ್ಟಮೊದಲ ಸ್ವಾತಂತ್ಯ್ರ ಸಮರಕ್ಕೆ ಕಹಳೆ ಊದಿದ ತಾಣ. ಉಳ್ಳಾಲದ ರಾಣಿ ಅಬ್ಬಕ್ಕ ಪೋರ್ಚ್‌ಗೀಸರ ವಿರುದ್ದ ಹೋರಾಟ ಮಾಡಿದ್ದು ಇಲ್ಲೇ ಎನ್ನುವುದು ಬಹು ಮುಖ್ಯ ಸಂಗತಿ. ಅಬ್ಬಕ್ಕಳ ಆರಾಧ್ಯದೇವರು ಸೋಮನಾಥ. ಪ್ರತೀ ದಿನವೂ ಈ ದೇವಾಲಯಕ್ಕೆ ಅಬ್ಬಕ್ಕ ಬಂದು ಸೋಮನಾಥ ದೇವರಿಗೆ ಪೂಜೆ ಸಲ್ಲಿಸುವ ಪರಿಪಾಠವಿತ್ತು. ಆಕೆ ಬದುಕಿರುವಷ್ಟು ಕಾಲವೂ ಈ ದೇವಾಯಕ್ಕೆ ಬಂದು ದೇವರಿಗೆ ಕೈಮುಗಿದ ಮೇಲೆಯೇ ಯಾವುದೇ ಕೆಲಸ ಮಾಡುತ್ತಿದ್ದಳು. ಆಕೆ ಕೊನೆಯುಸಿರೆಳೆದಾಗಲೂ ಜೈಸೋಮನಾಥ ಎನ್ನುವ ಉದ್ಘಾರ ತೆಗೆದಳಂತೆ.ಅಂದರೆ ಸೋಮನಾಥನಿಗೂ ಆಕೆಗೂ ಇದ್ದ ನಿಕಟ ಬಾಂಧವ್ಯ ಮನವರಿಕೆ ಆಗುತ್ತದೆ. ಇಂಥ ದೇವಾಲಯದ ಸನಿಹದಲ್ಲಿರುವುದು ಸೋಮೇಶ್ವರ ಬೀಚ್.
ಸೋಮೇಶ್ವರ ಬೀಚ್‌ನ ವಿಶೇಷತೆಯೆಂದರೆ ಸಮುದ್ರದ ಮಧ್ಯೆಯಲ್ಲಿ ದೊಡ್ಡಕಲ್ಲು ಬಂಡೆಗಳಿರುವುದು ಮತ್ತು ಅವುಗಳಮೇಲೆ ಹತ್ತಿ ಕುಳಿತು ಹಿತ ಅನುಭವಿಸುವುದು. ಆದರೆ ಧೈರ್ಯ ಇರಬೇಕು, ಯಾಕೆಂದರೆ ಆಳೆತ್ತರದ ಅಲೆಗಳು ಬಂಡೆಕಲ್ಲಿಗೆ ಅಪ್ಪಳಿಸುವಾಗ ಯಾರಿಗೇ ಆದರೂ ಭಯ ಆಗುವುದು ವಾಸ್ತವ ಸತ್ಯ.
ಸಮುದ್ರ ದಂಡೆಯ ಮೇಲೆ ಮರಳಿನಲ್ಲಿ ನಡೆದುಹೋಗುವುದೂ ಕೂಡಾ ವಿಶಿಷ್ಟ ಅನುಭವ. ಅಲೆಗಳ ನೀರು ಕಾಲು ಸ್ಪರ್ಶಿಸದಂತೆ ಮಕ್ಕಳು ಇಲ್ಲಿ ಆಡುವ ಆಟವನ್ನು ನೋಡಲು ಮೋಜೆನಿಸುತ್ತದೆ. ಮರಳಿನಲ್ಲಿ ಸುಂದರ ಮನೆ ನಿರ್ಮಿಸಿ ಸಂಭ್ರಮಿಸುತ್ತಾರೆ ಮಕ್ಕಳು. ದೊಡ್ಡ ಅಲೆ ಅಪ್ಪಳಿಸಿ ಇಡೀ ಮನೆಯನ್ನು ಒಡಲಿಗೆ ಸೆಳೆದುಕೊಂಡಾಗ ಮಕ್ಕಳು ಪರಿತಪಿಸುವುದನ್ನು ನೀವು ಖುದ್ದು ನೋಡಬೇಕು, ಇಂಥ ಮೋಜಿನ ಆಟಗಳಿಗೆ ಈ ಬೀಚ್ ಹೆಸರುವಾಸಿ.
ಅಲ್ಲಲ್ಲಿ ಕಲ್ಲು ಬಂಡೆಗಳಿರುವುದರಿಂದ ಮತ್ತು ನಿರ್ಜನಪ್ರದೇಶವೂ ಆಗಿರುವುದರಿಂದಲೇ ಇಲ್ಲಿಗೆ ಹೆಚ್ಚಾಗಿ ಪ್ರೇಮಿಗಳೇ ಬರುತ್ತಾರೆ. ಸಮುದ್ರದ ಅಲೆಗಳ ಹಿಮ್ಮೇಳಕ್ಕೆ ಪ್ರೇಮಿಗಳ ಎದೆಗೂಡಿನ ಹಾಡು ಅದೆಷ್ಟು ಇಂಪಾಗಿರಬಹುದಲ್ಲವೇ?.
ಬದುಕಿನಲ್ಲಿ ನೋವುಂಡವರು ತಮ್ಮ ಬದುಕಿಗೆ ಅಂತಿಮ ವಿದಾಯ ಹೇಳಲು ಈ ಕಲ್ಲು ಬಂಡೆಗಳನ್ನೇ ಆಶ್ರಯಿಸುತ್ತಾರೆ ಎನ್ನುವುದು ವಿಷಾದನೀಯ. ಇಲ್ಲಿ ಸುಸೈಡ್ ಸ್ಪಾಟ್ ಇದೆ. ಎತ್ತರದ ಕಲ್ಲು ಬಂಡೆಯಿಂದ ಧುಮುಕಿದರೆ ಬೀಳುವುದು ನೇರವಾಗಿ ಸಮುದ್ರಕ್ಕೆ. ಇಲ್ಲಿಂದ ಜಿಗಿದರೆ ಮತ್ತೆ ಬದುಕಬೇಕು ಎಂದರೂ ಬದುಕಲು ಅಸಾಧ್ಯ ಮತ್ತು ಬದುಕಿಸಲು ಇಲ್ಲಿ ಜೀವರಕ್ಷಕದಳಗಳಿಲ್ಲ ಎನ್ನುವುದು ಬಹುದೊಡ್ಡ ಕೊರಗು.
ಆದ್ದರಿಂದಲೇ ಸೋಮೇಶ್ವರ ಬೀಚನ್ನು ಸುಂದರ ರುದ್ರ ರಮಣೀಯ ಎನ್ನುವುದು. ಇಲ್ಲಿಗೆ ಬಂದು ಹೋಗಲು ಬಸ್ಸಿನ ವ್ಯವಸ್ಥೆ ಸರಿಯಿಲ್ಲ. ಉಳ್ಳಾಲಕ್ಕೆ ಬಂದು ಅಲ್ಲಿಂದ ರಿಕ್ಷಾ ಅವಲಂಬಿಸಬೇಕು, ಇಲ್ಲವಾದರೆ ನಡೆದೇ ಹೋಗಬೇಕು.
ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶವಿದ್ದರೂ ಬಳಕೆ ಮಾಡಿಕೊಂಡಿಲ್ಲ. ಇಲ್ಲಿಯೇ ಹತ್ತಿರದಲ್ಲಿ ರೆಸಾರ್ಟ್ ಇದೆ ವಾಸ್ತ್ಯಕ್ಕೆ ತೊಂದರೆಯಿಲ್ಲ. ಆದರೆ ಪ್ರವಾಸೊದ್ಯಮ ಇಲಾಖೆಯಿಂದ ಯಾವುದೇ ಮೂಲಭೂತ ಸೌಕರ್ಯವಿಲ್ಲ. ಸಮುದ್ರದಂಡೆಯಲ್ಲಿ ಕುಳಿತುಕೊಳ್ಳಲು ಸಿಮೆಂಟ್ ಬೆಂಚ್ ಹಾಕಲಾಗಿದೆ. ಆದರೆ ಹೆಚ್ಚಿನವು ಮುರಿದುಬಿದ್ದಿವೆ, ಇವುಗಳನ್ನು ಬದಲಾಯಿಸುವ ಗೋಜಿಗೆಹೋಗಿಲ್ಲ. ಈ ಬೀಚ್‌ನಲ್ಲಿ ಕುಳಿತು ಹೊತ್ತು ಕಳೆಯಲು ಬರುವಿರಾದರೆ ಜೊತೆಯಲ್ಲಿ ಕುಡಿಯುವ ನೀರು, ತಿನ್ನಲು ತಿಂಡಿ ತರಲು ಮರೆಯಬೇಡಿ.
ಇಲ್ಲಿರುವ ಕೊರತೆಗಳ ನಡುವೆಯೂ ನೀವು ನೋಡಲೇ ಬೇಕಾದ ಬೀಚ್ ಉಳ್ಳಾಲದ ಸೋಮೇಶ್ವರ ಮತ್ತು ಅಬ್ಬಕ್ಕ ರಾಣಿಯ ವೀರಭೂಮಿ.












Click it and Unblock the Notifications