ಕೋಕಾ ಕಾಯ್ದೆ : ಕಾಂಗ್ರೆಸ್ ವಿರುದ್ದ ರವಿ ಕಿಡಿ
ಮೈಸೂರು, ಮೇ. 13 : ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (ಕೋಕಾ) ಜಾರಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷ ವಿರೋಧಿಸುತ್ತಿರುವ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಶಾಸಕ ಸಿ ಟಿ ರವಿ, ಕೋಕಾ ಕಾಯ್ದೆಯಿಂದ ಕಾಂಗ್ರೆಸ್ ಆಗುತ್ತಿರಕುವ ತೊಂದರೆಯಾದರೂ ಏನೂ ಎಂದು ಪ್ರಶ್ನಿಸಿದ್ದಾರೆ.
ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಭಯೋತ್ಪಾದನೆ ಎದುರಿಸುವ ಸಲುವಾಗಿ ಕೋಕಾ ಕಾಯ್ದೆಯನ್ನು ಜಾರಿಗೆ ತರಲಾಗುತ್ತಿದೆ. ಕೋಕಾ ಕಾಯ್ದೆ ಜಾರಿಗೆ ತರಬೇಕು ಎಂಬ ಚಿಂತನೆ ನಡೆಸುತ್ತಿದ್ದಂತೆಯೇ ಕಾಂಗ್ರೆಸ್ ಪಕ್ಷ ನಾಯಕರು ಭೀತಿ ಒಳಗಾಗಿದ್ದಾರೆ ಎಂದು ಲೇವಡಿ ಮಾಡಿದ ರವಿ, ಉಗ್ರರ ನಿಗ್ರಹಕ್ಕೆ ತರುತ್ತಿರುವ ಕಾಯ್ದೆಗೆ ವಿರೋಧಿಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಉಗ್ರರೊಂದಿಗೆ ಯಾವ ಸಂಬಂಧವಿದೆ ಎನ್ನುವುದನ್ನು ಬಹಿರಂಗಪಡಿಸಲಿ ಎಂದು ಒತ್ತಾಯಿಸಿದರು.
ಕುಮಾರಸ್ವಾಮಿ ಅವರು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ರವಿ, ದೇವೇಗೌಡರ ಆಟ ಈ ಚುನಾವಣೆಯಲ್ಲಿ ನಡೆಯಲ್ಲ. ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದೊಂದಿಗೆ ಜೆಡಿಎಸ್ ಅಕ್ರಮವಾಗಿ ಒಳಒಪ್ಪಂದ ಮಾಡಿಕೊಂಡಿತ್ತು. ತೃತೀಯ ರಂಗ ಒಡೆದು ಹೋಳಾಗುತ್ತಿರುವ ಬೆನ್ನಲ್ಲೇ ಜೆಡಿಎಸ್ ಮತ್ತೆ ಕಾಂಗ್ರೆಸ್ ಬಾಗಿಲು ಕಾಯತೊಡಗಿದೆ ಎಂದು ಟೀಕಿಸಿದರು.
(ದಟ್ಸ್ ಕನ್ನಡ ವಾರ್ತೆ)
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು












Click it and Unblock the Notifications