ಲೋಕಸಭೆ: ಕರ್ನಾಟಕದಲ್ಲಿ ಗೆಲ್ಲುವ ಕುದುರೆಗಳು

Lok Sabha Election 2009 : Who will win in Karnataka
ಲೋಕಸಭೆ ಮತದಾನದ ದಿನಾಂಕಗಳು ಸನ್ನಿಹಿತವಾಗತೊಡಗಿವೆ. ರಾಜ್ಯದ ಐದು ಮಂದಿ ಮಾಜಿ ಮುಖ್ಯಮಂತ್ರಿಗಳು ಅಖಾಡದಲ್ಲಿದ್ದಾರೆ. ತಂತ್ರಜ್ಞಾನ ಕ್ಷೇತ್ರದ ಪ್ರಮುಖರು, ವೈದ್ಯರು, ಉದ್ಯಮಿದಾರರು ಸಾಕಷ್ಟು ಸಂಖ್ಯೆಯಲ್ಲಿ ಇಲ್ಲದಿದ್ದರೂ ಹೇಳಿಕೊಳ್ಳವ ಮಟ್ಟಿಗಾದರೂ ಹುರಿಯಾಳು ಆಗಿದ್ದಾರೆ. ಇದರ ಜೊತೆಗೆ ಅಪರೇಷನ್ ಕಮಲದ ಮೂಲಕ ಬಿಜೆಪಿ ಸೇರ್ಪಡೆಗೊಂಡಿರುವ ಕಾಂಗ್ರೆಸ್ಸಿನ ಕೆಲ ಅತ್ಯಂತ ಹಿರಿಯ ರಾಜಕಾರಣಿಗಳು ಬಿಜೆಪಿ ಮೂಲಕ ತಮ್ಮ ಅದೃಷ್ಟವನ್ನು ಒರೆಗೆ ಹಚ್ಚಿದ್ದಾರೆ.

*ಮೃತ್ಯುಂಜಯ ಕಲ್ಮಠ

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನೇತೃತ್ವದ ಅಭಿವೃದ್ಧಿಪರ ಸರ್ಕಾರ ಮಾಡಿರುವ ಅನೇಕ (?) ಜನಪರ ಕಾರ್ಯಕ್ರಮಗಳ ಮೂಲಕ ಬಿಜೆಪಿ ಕಣದಲ್ಲಿ ಕುಣಿಯುತ್ತಿದ್ದರೆ, ಆಪರೇಷನ್ ಕಮಲದ ಮೂಲಕ ಒಬ್ಬರ ಹಿಂದೆ ಒಬ್ಬರಂತೆ ಕೈಗೆ ಟಾಟಾ ಹೇಳಿ ಬಿಜೆಪಿ ಪಾಲಾಗುತ್ತಿರುವಾಗ ಕಾಂಗ್ರೆಸ್ ಸ್ಥಿತಿ ಮತ್ತಷ್ಟು ಚಿಂತಾಜನಕವಾಗಿದೆ. ನಿತ್ರಾಣ ಸ್ಥಿತಿಯಲ್ಲಿರುವ ಕಾಂಗ್ರೆಸ್ ಪಕ್ಷ ಈ ಚುನಾವಣೆಯಲ್ಲೂ ಕೊಡವಿ ಮೇಲೆಳುವ ಲಕ್ಷಣಗಳು ಕಾಣುತ್ತಿಲ್ಲ. ಒಳಜಗಳ, ಕಾಲೆಳೆಯುವಿಕೆ, ಮುಖಂಡರ ಮುಸುಕಿನ ಗುದ್ದಾಟದಿಂದ ಕೈ ಕಂಗಾಲಾಗಿರುವುದು ಸುಳ್ಳಲ್ಲ.

ತೃತೀಯ ರಂಗ ರಚಿಸಿಕೊಂಡು ಇನ್ನೊಂದು ಸಲ ಪ್ರಧಾನಮಂತ್ರಿ ಹುದ್ದೆ ಏರಬೇಕು, ತಪ್ಪಿದರೆ ಪ್ರತಿಭಾ ಪಾಟೀಲ್ ನಂತರ ರಾಷ್ಟ್ರಪತಿಯಾಗಬೇಕು ಎನ್ನುವ ದೂರಾಲೋಚನೆ ಇರಿಸಿಕೊಂಡಿರುವ ದೇವೇಗೌಡರ ಪಕ್ಷ ಮತ್ತೆ ತನ್ನ ಶಕ್ತಿ ಪ್ರದರ್ಶನ ಮಾಡುವ ಸಾಧ್ಯತೆ. ದಕ್ಷಿಣ ಕರ್ನಾಟಕ ಬಲಿಷ್ಠ ಪಕ್ಷವಾಗಿರುವ ಜೆಡಿಎಸ್ ಮತ್ತೆ ತನ್ನ ಅಧಿಪತ್ಯ ಸ್ಥಾಪಿಸುವ ವಾಸನೆ ಗೋಚರವಾಗತೊಡಗಿದೆ.

ರಾಜ್ಯದ 28 ಲೋಕಸಭೆ ಕ್ಷೇತ್ರದಲ್ಲಿ ಬೆಂಗಳೂರು ದಕ್ಷಿಣ, ಶಿವಮೊಗ್ಗ, ಬಳ್ಳಾರಿ, ಗುಲ್ಬರ್ಗಾ, ಬೀದರ್, ಬೆಂಗಳೂರು ಗ್ರಾಮಾಂತರ, ಹಾಸನ, ಉತ್ತರ ಕನ್ನಡ, ಚಿಕ್ಕಬಳ್ಳಾಪುರ ಕ್ಷೇತ್ರಗಳು ಮೂರು ಪಕ್ಷಗಳಿಗೂ ಪ್ರತಿಷ್ಠೆಯ ಕ್ಷೇತ್ರಗಳಾಗಿ ರೂಪುಗೊಂಡಿವೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಕಳೆದ ಸಲಕ್ಕಿಂತ ಒಂದು ಕ್ಷೇತ್ರ ಹೆಚ್ಚಿಸಿಕೊಳ್ಳಬಹುದು ಇಲ್ಲವೇ, ಕಳೆದುಕೊಳ್ಳಬಹುದು. ಬಿಜೆಪಿ ಭದ್ರಕೋಟೆ ಎನ್ನಲಾಗಿರುವ ಉತ್ತರ ಕರ್ನಾಟಕದಲ್ಲಿ ಬಿಜೆಪಿ ಮತ್ತೆ ವಿಜಯದ ಕಹಳೆಯನ್ನು ಮೊಳಗಿಸುವುದರಲ್ಲಿ ಸಂಶಯವಿಲ್ಲ.

ಕಳೆದ ಉಪಚುನಾವಣೆಯಲ್ಲಿ ಸೋತು ಸುಣ್ಣವಾಗಿದ್ದ ಕಾಂಗ್ರೆಸ್ ಪಕ್ಷಕ್ಕೆ ಈ ಚುನಾವಣೆಯಲ್ಲಿ ಕೂಡಾ ಲಾಭ ಆಗಲಿದೆ ಎನ್ನುವುದು ಕನಸಿನ ಮಾತೇ ಸರಿ. ಪ್ರತಿಪಕ್ಷದ ನಾಯಕ ಖರ್ಗೆ, ಧರಂಸಿಂಗ್, ವೀರಪ್ಪ ಮೋಯ್ಲಿ, ಕೃಷ್ಣ ಭೈರೇಗೌಡ, ಮಾರ್ಗರೇಟ್ ಆಳ್ವ ಹಾಗೂ ಬಂಗಾರಪ್ಪ ಅಖಾಡದಲ್ಲಿದ್ದರೂ ಗೆದ್ದೇ ತೀರುವೆ ಎಂದು ಹೇಳಿಕೊಳ್ಳಲು ಈ ನಾಯಕರಿಗೆ ಶಕ್ತಿ ಇಲ್ಲದಂತಾಗಿದೆ. ಜೆಡಿಎಸ್ ಮತ್ತೆ ತನ್ನ ಸಾಮರ್ಥ್ಯ ಸಾಬೀತು ಮಾಡುವ ಸಾಧ್ಯತೆಗಳನ್ನು ಅಲ್ಲಗೆಳೆಯುವಂತಿಲ್ಲ. ಎರಡರಿಂದ ನಾಲ್ಕು ಸ್ಥಾನಗಳನ್ನು ಗೆಲ್ಲುವ ಎಲ್ಲ ಅವಕಾಶಗಳು ಈ ಪಕ್ಷ ಹೊಂದಿದೆ.

ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಗೆಲುವು ಕುದುರೆಯಾಗಿದ್ದು, ಕಾಂಗ್ರೆಸ್ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಸಿ ಪಿ ಯೋಗೀಶ್ವರ ಇಂಗು ತಿಂದ ಮಂಗನಾಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಸಂಸದೆ ತೇಜಸ್ವಿನಿ ಅವರ ಆಟ ಈ ಚುನಾವಣೆಯಲ್ಲಿ ನಡೆಯದು.

ಬೆಂಗಳೂರು ದಕ್ಷಿಣ ಕ್ಷೇತ್ರ ಬಿಜೆಪಿ ಮತ್ತು ಕಾಂಗ್ರೆಸ್ ಗೆ ಮರ್ಯಾದೆ ಪ್ರಶ್ನೆ ಆಗಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ವಿರುದ್ಧ ಕೈ ಪಾಳೆಯದಿಂದ ಕೃಷ್ಣ ಭೈರೇಗೌಡ ಅಖಾಡಕ್ಕೆ ಇಳಿದಿದ್ದಾರೆ. ಇಬ್ಬರು ನಡುವೆ ತುರಿಸಿನ ಪೈಪೋಟಿ ಏರ್ಪಡುವುದರಲ್ಲಿ ಸಂಶಯವಿಲ್ಲ. ಇದರ ಜೊತೆಗೆ ಮೇಲ್ವರ್ಗ ಹಾಗೂ ವಿದ್ಯಾವಂತರ ಮತದ ಮೇಲೆ ಕಣ್ಣಿರಿಸಿರುವ ಕ್ಯಾಪ್ಟನ್ ಗೋಪಿನಾಥ್ ಹಾಗೂ ಪ್ರೊ ರಾಧಕೃಷ್ಣ ಅವರು ಅಧಿಕ ಮತಗಳನ್ನು ಪಡೆಯುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಕನ್ನಡ ಚಳವಳಿ ಪಕ್ಷ ವಾಟಾಳ್ ನಾಗರಾಜ್ ಕೂಡಾ ನಾಮಪತ್ರ ಸಲ್ಲಿಸಿದ್ದಾರೆ. ಅಂತಿಮವಾಗಿ ಕೂದಲೆಳೆಯಲ್ಲಿ ಕಮಲ ಅರಳುವ ಲಕ್ಷಣಗಳಿವೆ.

ದೇಶದ ಗಮನ ಸೆಳೆದಿರುವ ಮಾಜಿ ಹಾಗೂ ಹಾಲಿ ಮುಖ್ಯಮಂತ್ರಿಗಳ ಸಮರ ಕಣ ಎಂದೇ ಬಿಂಬಿತವಾಗಿರುವ ಶಿವಮೊಗ್ಗ ಕ್ಷೇತ್ರದ ಮೇಲೆ ಎಲ್ಲರ ಕಣ್ಣು ಇದೆ. ಸೋಲಿಲ್ಲದ ಸರದಾರನೆಂದೇ ಖ್ಯಾತಿಯಾಗಿರುವ ಎಸ್ ಬಂಗಾರಪ್ಪ ವಿರುದ್ಧ ಯಡಿಯೂರಪ್ಪ ಪುತ್ರ ರಾಘವೆಂದ್ರ ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ. ಇಲ್ಲಿ ಜೆಡಿಎಸ್, ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದೆ. ಆದರೂ ಬಿಜೆಪಿ ಕಡೆಗೆ ಅಲ್ಲಿನ ಮತದಾರ ವಾಲಿದ್ದಾರೆ ಎನ್ನುವುದನ್ನು ಕಳೆದ ಉಪಚುನಾವಣೆಯಲ್ಲಿ ಸಾಬೀತಾಗಿದೆ. ಆ ಚುನಾವಣೆಯಲ್ಲಿ ಬಂಗಾರಪ್ಪ ಸುಮಾರು 45 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಸೋತು ಭಾರಿ ಮುಖಭಂಗಕ್ಕೆ ಒಳಗಾಗಿದ್ದರು. ಈ ಚುನಾವಣೆಯಲ್ಲಿ ಕೂಡಾ ಅವರಿಗೆ ಅದೇ ಪರಿಸ್ಥಿತಿ ಎದುರಾಗುವ ಸಂಭವಗಳೇ ಜಾಸ್ತಿಯಾಗಿವೆ.

ದೇವೇಗೌಡರ ಬದ್ಧ ವೈರಿ ಸಚಿವ ಜನಾರ್ದನರೆಡ್ಡಿ ಅವರ ಬೆಂಬಲದಿಂದ ಸ್ಪರ್ಧೆಗಿಳಿದಿರುವ ಸಚಿವ ಶ್ರೀರಾಮುಲು ಅವರ ಸಹೋದರಿ ಜೆ ಶಾಂತಾ ಅವರು ಗೆಲುವು ಸಾಧಿಸುವುದರಲ್ಲಿ ಸಂಶಯವೇ ಇಲ್ಲ. ಜೆಡಿಎಸ್ ಪಕ್ಷ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದೆಯಾದರೂ, ಕೈ ಬಳಗದ ಅಭ್ಯರ್ಥಿಯಾಗಿರುವ ಎನ್ ವೈ ಹನುಮಂತಪ್ಪ ಬೇರೆ ಜಿಲ್ಲೆಯವರು. ಅಲ್ಲದೇ ಗಣಿಗಾರಿಕೆಯ ಹಣ, ನೀರಿನಂತೆ ಖರ್ಚಾಗುವುದನ್ನು ತಡೆಯಲು ಬಹುಶಃ ಯಾರಿಂದಲೂ ಸಾಧ್ಯವಿಲ್ಲ ಎನ್ನುವ ಮಟ್ಟಿಗೆ ಅಲ್ಲಿ ವಾತಾವರಣ ನಿರ್ಮಾಣವಾಗಿದೆ.

ಉಳಿದಂತೆ ಬೆಳಗಾವಿ-ಸುರೇಶ ಅಂಗಡಿ, ಚಿಕ್ಕೋಡಿ-ರಮೇಶ ಕತ್ತಿ, ಬಿಜಾಪುರ-ರಮೇಶ್ ಜಿಗಜಿಣಗಿ, ಬೀದರ್-ಗುರುಪಾದಪ್ಪ ನಾಗಮಾರಪಲ್ಲಿ, ಉತ್ತರ ಕನ್ನಡ-ಅನಂತಕುಮಾರ್ ಹೆಗಡೆ, ತುಮಕೂರು-ಜಿ ಎಸ್ ಬಸವರಾಜು, ಕೋಲಾರ- ಡಿ ಎಸ್ ವೀರಯ್ಯ, ಮೈಸೂರು- ಸಿಎಚ್ ವಿಜಯಶಂಕರ್, ಹಾವೇರಿ-ಶಿವಕುಮಾರ್ ಉದಾಸಿ, ಬೆಂಗಳೂರು ದಕ್ಷಿಣ-ಅನಂತಕುಮಾರ್, ಬಳ್ಳಾರಿ- ಜೆ ಶಾಂತಾ, ರಾಯಚೂರು-ರಾಜಾ ಅಮರೇಶ್ ನಾಯಕ, ಶಿವಮೂಗ್ಗ- ಬಿ ವೈ ರಾಘವೇಂದ್ರ, ಮಂಗಳೂರು-ನಳಿನ್ ಕುಮಾರ್ ಕಟೀಲ್, ಉಡುಪಿ-ಚಿಕ್ಕಮಗಳೂರು-ಸದಾನಂದಗೌಡ, ದಾವಣಗೆರೆ-ಜಿ ಎಂ ಸಿದ್ದೇಶ್, ಧಾರವಾಡ-ಪ್ರಹ್ಲಾದ್ ಜೋಶಿ, ಚಿತ್ರದುರ್ಗ-ಜನಾರ್ದನಸ್ವಾಮಿ ಆಯ್ಕೆಯಾಗುವ ಸಾಧ್ಯತೆಗಳಿವೆ.

ಗುಲ್ಬರ್ಗಾ-ಮಲ್ಲಿಕಾರ್ಜುನ ಖರ್ಗೆ, ಕೊಪ್ಪಳ-ಬಸವರಾಜ ರಾಯರೆಡ್ಡಿ, ಬೆಂಗಳೂರು ಉತ್ತರ- ಸಿ ಕೆ ಜಾಫರ್ ಷರೀಫ್, ಮಂಡ್ಯ-ಅಂಬರೀಷ್, ಚಿಕ್ಕಬಳ್ಳಾಪುರ-ವೀರಪ್ಪ ಮೊಯ್ಲಿ, ಚಿತ್ರದುರ್ಗ-ಡಾ ತಿಪ್ಪೇಸ್ವಾಮಿ, ಬೆಂಗಳೂರು-ಎಚ್ ಟಿ ಸಾಂಗ್ಲಿಯಾನ, ಚಾಮರಾಜನಗರ-ಧ್ರುವನಾರಾಯಣ, ದಾವಣಗೆರೆ-ಎಸ್ ಎಸ್ ಮಲ್ಲಿಕಾರ್ಜುನ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಬಹುದು. ಉಳಿದಂತೆ ದೇವೇಗೌಡರ ಪಕ್ಷಕ್ಕೆ ಹಾಸನ-ದೇವೇಗೌಡ, ಬೆಂಗಳೂರು ಗ್ರಾಮಾಂತರ-ಎಚ್ ಡಿ ಕುಮಾರಸ್ವಾಮಿ, ಬೆಂಗಳೂರು ಸೆಂಟ್ರಲ್-ಝಡ್ ಎ ಜಮೀರ್ ಅಹ್ಮದ್, ಕೊಪ್ಪಳ ಇಕ್ಬಾಲ್ ಅನ್ಸಾರಿ ಜಯಭೇರಿ ಸಾಧಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+