ವರುಣ್ ಸ್ಪರ್ಧೆ ರದ್ದುಗೊಳಿಸಿ: ಮುಸ್ಲಿಂ ಸಂಘಟನೆ
ಲಖನೌ, ಮಾ. 24 : ಅಲ್ಪಸಂಖ್ಯಾತರ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿರುವ ಉತ್ತರ ಪ್ರದೇಶದ ಪಿಲಿಭಿತ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವರುಣ್ ಅವರ ಸ್ಪರ್ಧೆಯನ್ನು ರದ್ದುಗೊಳಿಸಬೇಕು ಎಂದು ಅಖಿಲ ಭಾರತ ಮುಸ್ಲಿಂ ಸಂಘಟನೆ ಆಗ್ರಹಿಸಿದೆ.
ಅಖಿಲ ಭಾರತ ಮುಸ್ಲಿಂ ಸಂಘಟನೆಯ ಹಿರಿಯ ಸದಸ್ಯ ಮೌಲಾನ ಖಾಲೀದ್ ರಸೀದ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ವರುಣ್ ಗಾಂಧಿ ಬೆಂಬಲ ಅತ್ಯಂತ ಅಪಾಯಕಾರಿ ಸಂಗತಿ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಪಿಲಿಭಿತ್ ಲೋಕಸಭೆ ಕ್ಷೇತ್ರ ಅಭ್ಯರ್ಥಿಯಾಗಿರುವ ವರುಣ್ ಗಾಂಧಿ ಅವರ ಮೂಲಕ ಕೋಮು ಭಾವನೆ ಕೆರಳಿಸಿ ಮತ ಪಡೆಯುವ ಏಕೈಕ ಉದ್ದೇಶವನ್ನು ಬಿಜೆಪಿ ಹೊಂದಿದೆ ಎಂದು ಅವರು ದೂರಿದರು.
ಕೋಮು ಸೌಹಾರ್ದತೆ ಕಾಪಾಡುವ ದೃಷ್ಟಿಯಿಂದ ವರುಣ್ ಅವರ ಸ್ಪರ್ಧೆಯನ್ನು ಕೂಡಲೇ ರದ್ದುಗೊಳಿಸಬೇಕು ಎಂದು ಒತ್ತಾಯಿಸಿರುವ ಅವರು, ಗಾಂಧಿ ಅವರಿಗೆ ಬೆಂಬಲ ನೀಡಿದಲ್ಲಿ ತಿಳುವಳಿಕೆ ಕೊರತೆ ಇರುವ ಇಂತಹ ನೊರೆಂಟು ವರುಣ್ ಗಾಂಧಿಗಳು ಮುಸ್ಲಿಂ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಬಹುದು. ಅದು ದೇಶದಲ್ಲಿ ಅಶಾಂತಿ ಹುಟ್ಟು ಹಾಕಲು ಕಾರಣವಾಗಲಿದೆ. ಆದ್ದರಿಂದ ಕೇಂದ್ರ ಚುನಾವಣೆ ಆಯೋಗ ವರುಣ್ ಅವರ ಸ್ಪರ್ಧೆಯನ್ನು ರದ್ದುಗೊಳಿಸಬೇಕು ಎಂದು ರಸೀದ್ ಆಗ್ರಹಿಸಿದರು.
(ದಟ್ಸ್ ಕನ್ನಡ ವಾರ್ತೆ)
ವರುಣ್ ಗಾಂಧಿ ಬೆನ್ನಿಗೆ ನಿಂತ ಬಿಜೆಪಿ












Click it and Unblock the Notifications