ಕೋಮು ಸಾಮರಸ್ಯ ಕಾಪಾಡಲು ಐಜಿ ಕರೆ
ಬೆಂಗಳೂರು, ಮಾ. 17 : ರಾಜ್ಯದ ಮುಖ್ಯ ಚುನಾವಣಾಧಿಕಾರಿ ಮತ್ತು ಪೊಲೀಸ್ ಮಹಾ ನಿರ್ದೇಶಕ ಅಜಯಕುಮಾರ್ ಸಿಂಗ್ ಕರೆದಿದ್ದ ಸಭೆಯಲ್ಲಿ ರಾಜ್ಯದ ಏಳು ರಾಷ್ಟ್ರೀಯ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಈ ಸಭೆಯಲ್ಲಿ ಚುನಾವಣಾ ನೀತಿ ಸಂಹಿತೆಯ ಕುರಿತು ವಿವರಿಸಲಾಯಿತು ಹಾಗೂ ಈ ಸಂಬಂಧದ ಹಲವಾರು ಅನುಮಾನಗಳ ಬಗ್ಗೆ ಚರ್ಚಿಸಿ ಪರಿಹರಿಸಿಕೊಳ್ಳಲಾಯಿತು.
ರಾಜ್ಯದ ಪೊಲೀಸ್ ಮಹಾ ನಿರ್ದೇಶಕರು ಸಭೆಯಲ್ಲಿ ಹಾಜರಿದ್ದ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಚುನಾವಣೆಯಲ್ಲಿ ಸಹಕಾರವನ್ನು ನೀಡುವಂತೆ ಹಾಗೂ ಶಾಂತಿ ಮತ್ತು ಕೋಮುಸೌಹಾರ್ದತೆಯನ್ನು ಕಾಪಾಡಬೇಕೆಂದು ಸಹ ಕೋರಿದರು. ಕಾನೂನಿನಲ್ಲಿರುವ ಹಲವಾರು ಕಾಯ್ದೆಗಳ ಬಗ್ಗೆಯೂ ಚರ್ಚಿಸಲಾಯಿತು.
ಪೊಲೀಸ್ ಮಹಾ ನಿರ್ದೇಶಕರು ವಿವಿಧ ರಾಜಕೀಯ ಪ್ರತಿನಿಧಿಗಳಿಗೆ ಚುನಾವಣೆ ನೀತಿ ಸಂಹಿತೆ ಮತ್ತು ಕಾನೂನುಪರ ವಿಷಯಗಳ ಬಗ್ಗೆ ತಿಳಿಹೇಳಿ ಕ್ರಮಬದ್ದ ಹಾಗೂ ಅವುಗಳನ್ನು ಕಠಿಣ ರೀತಿಯಲ್ಲಿ ಪೊಲೀಸರು ಜಾರಿಗೆ ತರುತ್ತಾರೆಂದು ತಿಳಿಸಿದರು. ಸಭೆಯಲ್ಲಿ ಹಾಜರಿದ್ದ ವಿವಿಧ ರಾಜಕೀಯ ಪಕ್ಷದ ಪ್ರತಿನಿಧಿಗಳೂ ಸಹ ಸಂಪೂರ್ಣ ಸಹಕಾರ ನೀಡುವುದಾಗಿ ಈ ಸಂದರ್ಭದಲ್ಲಿ ಭರವಸೆ ನೀಡಿದರೆಂದು ತಿಳಿಸಲಾಗಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications