ತಣ್ಣಗಾಗದ ಜೈಟ್ಲಿ ಮುನಿಸು, ಸಭೆ ಗೈರು
ನವದೆಹಲಿ, ಮಾ. 17 : ಭಾರತೀಯ ಜನತಾ ಪಕ್ಷದಲ್ಲಿ ಉಲ್ಭಣಗೊಂಡಿರುವ ಆಂತರಿಕ ಬಿಕ್ಕಟ್ಟು ಮತ್ತಷ್ಟು ಕಗ್ಗಾಂಟಾಗಿದೆ. ಪಕ್ಷದ ಹಿರಿಯ ಮುಖಂಡ ಅರುಣ್ ಜೈಟ್ಲಿ ಅವರು ಬಿಜೆಪಿ ರಾಷ್ಟ್ರೀಯ ಚುನಾವಣಾ ಸಮಿತಿಯ ಇಂದಿನ ಮಹತ್ವದ ಸಭೆಗೆ ಗೈರು ಹಾಜರಾದರು. ಇನ್ನೊಂದು ಮಹತ್ವದ ಬೆಳವಣಿಗೆಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಇಂದಿನ ಸಭೆಗೆ ಹಾಜರಾಗದಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ.
ಇಂದಿನ ಸಭೆಯಲ್ಲಿ ಪಕ್ಷದ ಅಧ್ಯಕ್ಷ ರಾಜನಾಥ್ ಸಿಂಗ್, ಬಿಜೆಪಿ ಪ್ರಧಾನಮಂತ್ರಿ ಅಭ್ಯರ್ಥಿ ಎಲ್ ಕೆ ಆಡ್ವಾಣಿ, ವೆಂಕಯ್ಯ ನಾಯ್ಡು ಮತ್ತು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹಾಜರಾಗಿದ್ದರು. ಸುಧಾಂಶು ಮಿತ್ತಲ್ ಅವರನ್ನು ಈಶಾನ್ಯ ಭಾಗದ ಮುಖ್ಯಸ್ಥರನ್ನಾಗಿ ನೇಮಕ ಮಾಡಿರುವುದು ಜೈಟ್ಲಿ ಮುನಿಸಿಗೆ ಕಾರಣವಾಗಿತ್ತು. ಸುಧಾಂಶು ಅವರನ್ನು ಕೂಡಲೇ ಆ ಪದವಿಯಿಂದ ಬಿಡುಗಡೆಗೊಳಿಸಬೇಕೆ೦ದು ಜೈಟ್ಲಿ ಪಟ್ಟುಹಿಡಿದಿದ್ದರು. ಆದರೆ, ಅಧ್ಯಕ್ಷ ರಾಜನಾಥ್ ಸಿಂಗ್ ಅವರು ಸೋಮವಾರ ಮತ್ತೆ ಸುಧಾಂಶು ಅವರೊಂದಿಗೆ ಚುನಾವಣೆ ಸಂಬಂಧಿಸಿದಂತೆ ಚರ್ಚೆ ನಡೆಸಿರುವುದು ಉರಿಯುವ ಬೆಂಕಿಗೆ ತುಪ್ಪ ಸುರಿದ ಹಾಗೆ ಆಗಿದೆ. ಈ ಎಲ್ಲ ಬೆಳವಣಿಗೆ ಹಿನ್ನೆಲೆಯಲ್ಲಿ ಅವರು ಇಂದು ನಡೆದ ಸಭೆಗೆ ಜೈಟ್ಲಿ ಗೈರು ಹಾಜರಾಗಿದ್ದಾರೆ.
ಇನ್ನೊಂದಡೆ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಜೊತೆಗಿನ ವಿರಸದೊಂದಿಗೆ ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಸಭೆಗೆ ಗೈರುಹಾಜರಾಗಲು ಪ್ರಮುಖ ಕಾರಣವೆಂದು ಹೇಳಲಾಗಿದೆ. ಇಂದು ಪಕ್ಷದ ಅಂತರಿಕ ಸಮಸ್ಯೆ ಇದನ್ನು ನಾವು ಆದಷ್ಟು ಬೇಗ ಪರಿಹರಿಸಿಕೊಳ್ಳುತ್ತೇವೆ ಎಂದು ವೆಂಕಯ್ಯ ನಾಯ್ಡು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಶಿಸ್ತಿನ ಪಕ್ಷವೆಂದೇ ಹೇಳಲಾಗಿದ್ದ ಬಿಜೆಪಿ ಕೂಡ ಕಾಂಗ್ರೆಸ್ ಪಕ್ಷಕ್ಕಿಂತ ಹೊರತೇನಲ್ಲ ಎಂಬುದನ್ನು ಸಾಬೀತುಪಡಿಸಿದೆ.
(ದಟ್ಸ್ ಕನ್ನಡ ವಾರ್ತೆ)
ಯಡಿಯೂರಪ್ಪ ನಮ್ಮ ಕ್ಯಾಪ್ಟನ್, ಅನಂತಕುಮಾರ್












Click it and Unblock the Notifications