ಸತ್ಯಂ ಅವ್ಯವಹಾರ ತನಿಖೆಗೆ ಕೇಂದ್ರ ಆಸಕ್ತಿ
ನವದೆಹಲಿ, ಜ. 7 : ಸತ್ಯಂ ಕಂಪ್ಯೂಟರ್ ನಲ್ಲಿ ನಡೆದಿರುವ ಭಾರಿ ಮಟ್ಟದ ಅವ್ಯವಹಾರದ ಸಮಗ್ರ ತನಿಖೆ ನಡೆಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಧರಿಸಿದೆ. ಸತ್ಯಂ ಪ್ರಕರಣವನ್ನು ಕೇಂದ್ರದ ಹಣಕಾಸು ಅವ್ಯವಹಾರ ತನಿಖಾ ಇಲಾಖೆಗೆ ( Serious Fraud Investigation Office) ವಹಿಸಲು ಕೇಂದ್ರ ತೀರ್ಮಾನಿಸಿದೆ.
ಸತ್ಯಂ ಘಟನೆ ನಾಚಿಕೆಗೇಡಿನ ಸಂಗತಿಯಾಗಿದೆ. ಈ ಮೂಲಕ ಕಾರ್ಪೋರೇಟ್ ವಲಯವನ್ನು ತಲೆತಗ್ಗಿಸುವಂತೆ ಮಾಡಿದೆ ಎಂದು ಕೇಂದ್ರ ಸರ್ಕಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಸತ್ಯಂ ಪ್ರಕರಣದ ಸತ್ಯಾಸತ್ಯತೆ ತಿಳಿಯಲು ಎಸ್ಎಫ್ ಐಓಗೆ ವಹಿಸಲು ತೀರ್ಮಾನಿಸಲಾಗಿದೆ ಎಂದು ಕೇಂದ್ರ ಸಚಿವ ಪಿ ಸಿ ಗುಪ್ತಾ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಸತ್ಯಂ ನಲ್ಲಿ ಅವ್ಯವಹಾರದ ಕುರಿತು ತನಿಖೆ ನಡೆಸಲಾಗುವುದು. ಆರೋಪ ಸಾಬೀತಾದಲ್ಲಿ ಸತ್ಯಂ ಚೇರಮನ್ ರಾಮಲಿಂಗರಾಜು ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಸರ್ಕಾರ ಹಿಂಜರಿಯುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಸತ್ಯಂ ಘಟನೆ ಷೇರು ಮಾರುಕಟ್ಟೆಯಲ್ಲಿ ಭಾರಿ ತಲ್ಲಣ ಸೃಷ್ಟಿಸಿದೆ. ಈ ಬೆಳವಣಿಗೆಗಳ ಮೇಲೆ ಸರ್ಕಾರ ತೀವ್ರ ನಿಗಾ ವಹಿಸಿದೆ ಎಂದು ಗುಪ್ತಾ ಸ್ಪಷ್ಟಪಡಿಸಿದರು.
(ದಟ್ಸ್ ಕನ್ನಡ ವಾರ್ತೆ)
ಪೂರಕ ಓದಿಗೆ:












Click it and Unblock the Notifications