ಮಧುಗಿರಿ, ಮದ್ದೂರಿನಲ್ಲಿ ಜೆಡಿಎಸ್ ಗೆಲುವಿನ ನಗೆ?
ಬೆಂಗಳೂರು, ಡಿ. 30 : ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವುದರ ಜೊತೆಗೆ ಜೆಡಿಎಸ್ ವರಿಷ್ಠ ದೇವೇಗೌಡರ ಕುಟುಂಬಕ್ಕೆ ಭಾರಿ ಪ್ರತಿಷ್ಠೆ ಕಣವಾಗಿರುವ ಮಧುಗಿರಿಯಲ್ಲಿ ಅನಿತಾ ಕುಮಾರಸ್ವಾಮಿ ಸುಮಾರು 6 ಸಾವಿರಕ್ಕೂ ಅಧಿಕ ಮತಗಳಿಂದ ಮುಂದಿದ್ದಾರೆ. ಮೊದಲೆರಡು ಸುತ್ತಿನಲ್ಲಿ ಕಾಂಗ್ರೆಸ್ ಕೆ ಎನ್ ರಾಜಣ್ಣ ಮುಂದಿದ್ದರಾದರೂ ನಂತರದಲ್ಲಿ ನಿಧಾನವಾಗಿ ಜೆಡಿಎಸ್ ಅಭ್ಯರ್ಥಿ ಮುನ್ನೆಡೆ ಗಳಿಸುತ್ತಾ ದಾಪುಗಾಲಿಟ್ಟರು. ಆದರೆ ತನ್ನ ರಾಜಕೀಯ ಗುರು ದೇವೇಗೌಡರಿಗೆ ಸವಾಲು ಎಸೆದಿದ್ದ ಬಿಜೆಪಿ ಅಭ್ಯರ್ಥಿ ಸಿ ಚೆನ್ನಿಗಪ್ಪ ಸೋಲಿನ ಭೀತಿ ಎದುರಿಸುತ್ತಿದ್ದಾರೆ.
ಮದ್ದೂರು ಕ್ಷೇತ್ರದಲ್ಲಿ ಕೂಡ ಬಿಜೆಪಿ ಅಭ್ಯರ್ಥಿ ಶತಕೋಟ್ಯಾಧೀಶ್ವರ ಡಿ ಸಿ ತಮ್ಮಣ್ಣ ಜೆಡಿಎಸ್ ಅಭ್ಯರ್ಥಿ ಕಲ್ಪನಾ ಸಿದ್ದರಾಜು ಅವರಿಗಿಂತ ಸುಮಾರು 4 ಸಾವಿರಕ್ಕೂ ಅಧಿಕ ಮತಗಳಿಂದ ಹಿಂದೆ ಉಳಿದಿದ್ದಾರೆ. ಶಾಸಕರಾಗಿದ್ದ ಸಿದ್ದರಾಜು ಅವರ ಅಕಾಲಿಕ ಮರಣದಿಂದ ಈ ಕ್ಷೇತ್ರದಲ್ಲಿ ಮತದಾರರಿಗೆ ಮತ್ತೊಮ್ಮೆ ಮತ ಹಾಕುವ ಅವಕಾಶ ದಕ್ಕಿತು. ಸಿದ್ದರಾಜು ಪತ್ನಿ ಕಲ್ಪನಾ ಸಿದ್ದರಾಜು ಈ ಸಲ ಜೆಡಿಎಸ್ ನಿಂದ ಸ್ಪರ್ಧಿಸಿ ಆಯ್ಕೆ ಬಯಸಿದರೆ, ದೇವೇಗೌಡರ ಸಂಬಂಧಿ ಕಾಂಗ್ರೆಸ್ ಮಾಜಿ ಶಾಸಕರಾಗಿದ್ದ ಡಿ ಸಿ ತಮ್ಮಣ್ಣ ಬಿಜೆಪಿಯಿಂದ ಅಖಾಡಕ್ಕಿಳಿದಿರುವುದು ವಿಶೇಷವಾಗಿತ್ತು. ಇಷ್ಟರಲ್ಲಿಯೇ ಅಂತಿಮ ಫಲಿತಾಂಶ ಹೊರಬೀಳಲಿದ್ದು, ಅನುಕಂಪದ ಅಲೆಯಲ್ಲಿ ಜೆಡಿಎಸ್ ಅಭ್ಯರ್ಥಿ ಕಲ್ಪನಾ ಸಿದ್ದರಾಜು ಗೆಲುವು ಸಾಧಿಸಬಹುದು.
(ದಟ್ಸ್ ಕನ್ನಡ ವಾರ್ತೆ)
ಕಮಲ ಪಕ್ಷಕ್ಕೆ ಪ್ಲೇವಿನ್ ಲಾಟರಿ ಹೊಡಿತು
ಹುಕ್ಕೇರಿಯಲ್ಲಿ ಉಮೇಶ್ ಕತ್ತಿ ಭರ್ಜರಿ ಜಯ
ಅರಭಾವಿ ಬಾಲಚಂದ್ರ ಜಾರಕಿಹೊಳಿ ದಿಗ್ವಿಜಯ












Click it and Unblock the Notifications