ಹಣ ಹಂಚುತ್ತಿದ್ದ ಚೆನ್ನಿಗಪ್ಪ ಮಗ ಪರಾರಿ
ತುಮಕೂರು, ಡಿ. 26 : ಗುರುವಾರವೇ ವಿಧಾನಸಭೆ ಉಪ ಚುನಾವಣೆ ಪ್ರಚಾರಕ್ಕೆ ತೆರೆಬಿದ್ದಿದ್ದರೂ ಕೆಲ ಪಕ್ಷದವರು ತೆರೆಮರೆಯಲ್ಲಿ ಮತದಾರರನ್ನು ಸೆಳೆಯಲು ಕಸರತ್ತು ನಡೆಸಿದ್ದರೆ, ಕೆಲವರು ಚುನಾವಣಾ ನೀತಿನಿಯಮಗಳನ್ನು ಧಿಕ್ಕರಿಸಿ ರಾಜಾರೋಷವಾಗಿ ಮತದಾರರನ್ನು ಓಲೈಸಿಕೊಳ್ಳಲು ಅಂತಿಮ ಮಸಲತ್ತು ನಡೆಸಿದ್ದಾರೆ.
ಮಧುಗಿರಿಯ ಬಿಜೆಪಿ ಅಭ್ಯರ್ಥಿಯಾಗಿರುವ ಸಿ. ಚೆನ್ನಿಗಪ್ಪ ಪರ ಪ್ರಚಾರ ನಡೆಸುತ್ತ ಜನರಿಗೆ ಹಣ ಹಂಚುತ್ತಿದ್ದ ಮೂವರು ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಖಚಿತವಾಗಿ ದೊರೆತ ಸುಳಿವಿನ ಆಧಾರದ ಮೇಲೆ ಚುನಾವಣಾಧಿಕಾರಿಗಳು ಮತ್ತು ಪೊಲೀಸರು ದಾಳಿ ನಡೆಸಿದರು. ದಾಳಿಯ ಸುಳಿವು ದೊರೆಯುತ್ತಿದ್ದಂತೆ ಚೆನ್ನಿಗಪ್ಪ ಅವರ ಮಗ ವೇಣುಗೋಪಾಲ್ ಕಾಲಿಗೆ ಬುದ್ಧಿ ಹೇಳಿದ್ದಾರೆ.
ಬಾಬು, ಬಾಲಕೃಷ್ಣ ಮತ್ತೊರ್ವನನ್ನು ಬಂಧಿಸಲಾಗಿದೆ. ಬಂಧಿತರಿಂದ ಎರಡೂವರೆ ಲಕ್ಷ ರು. ಹಣ, ಕ್ವಾಲಿಸ್ ವಾಹನ, ಮೊಬೈಲ್ ಫೋನ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಚುನಾವಣಾಧಿಕಾರಿ ಗೋಪಾಲ್ ಹೇಳಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications