ಲಾಹೋರ್ ಸ್ಫೋಟದಲ್ಲಿ ಭಾರತದ ಕೈವಾಡ ಇದೆ
ಇಸ್ಲಾಮಾಬಾದ್, ಡಿ.25: ಮುಂಬೈ ಸ್ಫೋಟಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ದಿನಕ್ಕೊಂದು ಹೊಸ ಹೊಸ ಹೇಳಿಕೆಗಳನ್ನು ನೀಡುತ್ತಿದೆ. ಮುಂಬೈ ಸ್ಫೋಟ ಪ್ರಕರಣದಲ್ಲಿ ಪಾಕಿಗಳ ಹಸ್ತ ಇದೆಯಾ?ಹಾಗಿದ್ದರೆ ಲಾಹೋರ್ ನಲ್ಲಿ ಬುಧವಾರ(ಡಿ.24) ನಡೆದ ಸ್ಫೋಟದಲ್ಲಿ ನಿಮ್ಮವರ ಕೈವಾಡ ಇದೆ ಎಂದು ಪಾಕಿಸ್ತಾನ ಹೊಸ ರಾಗ ಎಳೆದಿದೆ.
ಇದಕ್ಕೆ ಸಾಕ್ಷಿ ಎಂಬಂತೆ ಭಾರತೀಯನೊಬ್ಬನನ್ನು ಬಂಧಿಸಿದೆ. ಲಾಹೋರ್ ನಲ್ಲಿ ನಡೆದ ಕಾರು ಬಾಂಬ್ ಸ್ಫೋಟದಲ್ಲಿ ಈತನ ಕೈವಾಡ ಇದೆ ಎಂದು ಕಳೆದ ರಾತ್ರಿ ಪಾಕಿಸ್ತಾನದ ಗುಪ್ತಚರ ಅಧಿಕಾರಿಗಳು ಸತೀಶ್ ಆನಂದ್ ಶುಕ್ಲ ಎಂಬ ಭಾರತೀಯನನ್ನು ಬಂಧಿಸಿದ್ದಾರೆ. ಸರ್ಕಾರಿ ಅಧಿಕಾರಿಗಳು ಹೆಚ್ಚಾಗಿ ವಾಸಿಸುವ ಬಿಗಿ ಭದ್ರತೆಯುಳ್ಳ ಪ್ರದೇಶದಲ್ಲಿ ಈ ಸ್ಫೋಟ ಸಂಭವಿಸಿತ್ತು.
ಸ್ಫೋಟದಲ್ಲಿ ಓರ್ವಮೃತಪಟ್ಟಿದ್ದು ನಾಲ್ಕು ಮಂದಿ ಗಾಯಗೊಂಡಿದ್ದರು.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿರುವ ಆನಂದ್ ಶುಕ್ಲಾ ಎಂಬವರು ಕೋಲ್ಕತ್ತಾ ಮೂಲದವರು. ಇವರು ಲಂಡನ್ನಿನ ಭಾರತೀಯ ದೂತಾವಾಸ ಕಚೇರಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ ಎಂದು ಪಾಕಿಸ್ತಾನಿ ಅಧಿಕಾರಿಗಳು ತಿಳಿಸಿದ್ದಾರೆ. ಆತ ತಾನು ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾನೆಂದೂ, ಸ್ಫೋಟಕ್ಕೆ ಸಹಕರಿಸಿದ ಇತರ ಮೂರು ಮಂದಿಯ ಹೆಸರನ್ನು ಹೇಳಿರುವುದಾಗಿ ಪಾಕಿಸ್ತಾನ ತಿಳಿಸಿದೆ.
(ಏಜೆನ್ಸೀಸ್)












Click it and Unblock the Notifications