ಯುದ್ಧವೊಂದೇ ಏಕೈಕ ಮಾರ್ಗ:ಬಾಳಾ ಠಾಕ್ರೆ
ಪುಣೆ, ಡಿ. 23 : ಪಾಕಿಸ್ತಾನದೊಂದಿಗೆ ಮಾತನಾಡುವುದು ಏನೂ ಉಳಿದಿಲ್ಲ, ಇನ್ನೇನಿದ್ದರೂ ಕೃತಿಯಿಂದ ತೋರಿಸಬೇಕು. ಕೇಂದ್ರ ಸರ್ಕಾರ ವಿನಾಕಾರಣ ಟೀಕೆ ಟಿಪ್ಪಣಿಗಳನ್ನು ಮಾಡುತ್ತ ಕಾಲಹರಣ ಮಾಡುವುದನ್ನು ಬಿಟ್ಟು ಪಾಕಿಗಳ ವಿರುದ್ಧ ಯುದ್ಧ ಘೋಷಿಸಬೇಕು ಎಂದು ಶಿವಸೇನೆ ಮುಖ್ಯಸ್ಥ ಬಾಳಾ ಠಾಕ್ರೆ ಒತ್ತಾಯಿಸಿದ್ದಾರೆ.
1993 ರಿಂದ ಇತ್ತೀಚೆಗೆ ನಡೆದ ಮುಂಬೈ ಭಯೋತ್ಪಾದನೆವರೆಗೆ ಸಾವಿರಾರು ಅಮಾಯಕ ಭಾರತೀಯರ ಪ್ರಾಣ ಕಳೆದುಕೊಂಡಿದ್ದಾರೆ. ತಾಳ್ಮೆ ಇರಬೇಕು ಆದರೆ, ಊರು ಕೊಳ್ಳೆ ಹೊಡೆದರೂ ಕೈಕಟ್ಟಿ ಕುಳಿತು ಕೊಳ್ಳುವುದು ಸರಿಯಲ್ಲ. ದೇಶದ ಸಾರ್ವಭೌಮತೆಯನ್ನು ಎತ್ತಿ ಹಿಡಿಯಲು ಯುದ್ಧವೊಂದು ದಾರಿ. ಮುಂಬೈ ಭಯೋತ್ಪಾದನೆಗೆ ಪಾಕಿಸ್ತಾನದ ಕೈವಾಡ ಇರುವುದು ಸ್ಪಷ್ಟವಾದರೂ ಕೂಡ ಒಪ್ಪಿಕೊಳ್ಳದೇ ಹಠಮಾರಿ ಧೋರಣೆ ತಾಳಿರುವ ಪಾಕಿಗೆ ಸೂಕ್ತ ಉತ್ತರ ನೀಡಬೇಕು ಎಂದು ಬಾಳಾ ಠಾಕ್ರೆ ಶಿವಸೇನೆ ಮುಖವಾಣಿ ಸಾಮ್ನಾ ಸಂಪಾದಕೀಯದಲ್ಲಿ ಬರೆದುಕೊಂಡಿದ್ದಾರೆ.
ಪ್ರಣಬ್ ಮುಖರ್ಜಿ ಅವರೇ ಬಡಾಯಿ ಕೊಚ್ಚಿಕೊಳ್ಳುವುದನ್ನು ನಿಲ್ಲಿಸಿ, ನೀವು ತೆಗೆದುಕೊಳ್ಳುವ ಕ್ರಮಗಳ ಮೇಲೆ ದೇಶದ ಘನತೆ, ಗೌರವ ನಿಂತಿದೆ. ಉಗ್ರರನ್ನು ಮಟ್ಟಹಾಕುವ ವಿಷಯದಲ್ಲಿ ರಾಜಕೀಯ ಮಾಡದೆ ತುರ್ತು ಕ್ರಮಕೈಗೊಳ್ಳಿ, ನಿಮಗೆ ಉಳಿದಿರುವುದು ಒಂದೇ ಮಾರ್ಗ, ಅದು ಪಾಕಿ ವಿರುದ್ಧ ಯುದ್ಧ ಸಾರುವುದು ಎಂದು ಠಾಕ್ರೆ ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡ ಠಾಕ್ರೆ, ಸಂಸತ್ ಮೇಲಿನ ದಾಳಕೋರ ಅಫ್ಜಲ್ ಗುರು ಮರಣದಂಡನೆ ಶಿಕ್ಷೆ ಘೋಷಣೆಯಾದರೂ ಅದನ್ನು ಜಾರಿಗೆ ತರದೇ ಸುಮ್ಮನೆ ಕುಳಿತಿರುವುದು ಏಕೆ, ದೇಶದ ಮೇಲಿನ ಪ್ರೇಮಕ್ಕಿಂತ ಉಗ್ರರ ಮೇಲಿನ ಮಮತೆ ಜಾಸ್ತಿಯಾಯಿತೆ ಎಂದು ಕಿಡಿಕಾರಿದ ಠಾಕ್ರೆ, ಉಗ್ರನನ್ನು ಶೀಘ್ರ ಶಿಕ್ಷೆಗೆ ಗುರಿಪಡಿಸಿ ಎಂದು ಠಾಕ್ರೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.
(ದಟ್ಸ್ ಕನ್ನಡ ವಾರ್ತೆ)
ತಾಲಿಬಾನ್ ಉಗ್ರರಿಂದ ಪಾಕಿಗೆ ಬೆಂಬಲ












Click it and Unblock the Notifications