ಬಿರುಸುಗೊಂಡ ಉಪಚುನಾವಣೆ ಕಸರತ್ತು
ಬೆಂಗಳೂರು, ಅ.13: ರಾಜ್ಯದ ಎಂಟು ವಿಧಾನಸಭೆ ಕ್ಷೇತ್ರಗಳು ಉಪಚುನಾವಣೆ ಎದುರಿಸಲು ಸಿದ್ಧವಾಗಿದ್ದು ವಿವಿಧ ರಾಜಕೀಯ ಪಕ್ಷಗಳ ಕಚೇರಿಗಳು ಬಿರುಸಿನ ಚಟುವಟಿಕೆಗಳ ತಾಣಗಳಾಗಿ ಬದಲಾಗಿವೆ. ಉಪಚುನಾವಣೆ ದಿನಾಂಕವನ್ನು ಚುನಾವಣಾ ಆಯೋಗ ಇನ್ನೂ ಪ್ರಕಟಿಸಿಲ್ಲದಿದ್ದರೂ ಚುನಾವಣೆ ಕಸರತ್ತು ಮಾತ್ರ ಬಿರುಸುಗೊಂಡಿದೆ.
ಆಡಳಿತ ಪಕ್ಷ ಬಿಜೆಪಿ ಹಾಗೂ ವಿರೋಧ ಪಕ್ಷ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ವಾಕ್ ಸಮರ ಶುರುವಾಗಿದ್ದು,ಉಪ ಚುನಾವಣೆಯನ್ನು ಎದುರಿಸಲು ರಾಜ್ಯ ರಾಜಕೀಯ ವಲಯ ಸಜ್ಜಾಗಿದೆ. ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಉಪಚುನಾವಣೆಯಲ್ಲಿ ಗೆಲುವು ಸಾಧಿಸಲು ಎಲ್ಲ ವಿಧಗಳಲ್ಲೂ ಸಿದ್ಧವಾಗಿದೆ. ಹಿಂದಿನ ಚುನಾವಣೆಗಳಂತಲ್ಲದೆ ಈ ಉಪಚುನಾವಣೆಯಲ್ಲಿ ಗೆಲುವು ಸಾಧಿಸುವುದು ಕಠಿಣ ಸವಾಲಾಗಿ ಬಿಜೆಪಿಗೆ ಪರಿಣಮಿಸಿದೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಸುಮ್ಮನೆ ಕೂತಿಲ್ಲ.ಎರಡು ಪಕ್ಷಗಳು ಒಮ್ಮತದಿಂದ ಸ್ಪರ್ಧಿಸಿ ಬಿಜೆಪಿಯನ್ನು ಮಣಿಸಲು ಹೊಂದಾಣಿಕೆಗಾಗಿ ಹವಣಿಸುತ್ತಿವೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ಗೆಲುವೊಂದೇ ಮುಖ್ಯ ಗುರಿಯಾಗಿಲ್ಲ. ಹೋದ ಸ್ಥಾನಗಳನ್ನು ಮರುಪಡೆಯುವ ಮೂಲಕ ಆಡಳಿತ ಪಕ್ಷ ಬಿಜೆಪಿಗೆ ಪ್ರಬಲ ರಾಜಕೀಯ ಸಂದೇಶ ರವಾನಿಸ ಬೇಕೆಂದುನಿಶ್ಚಯಿಸಿವೆ.
'ಆಪರೇಷನ್ ಕಮಲ'ದ ಮೂಲಕ ಏಳು ಮಂದಿ ವಿರೋಧ ಪಕ್ಷಗಳ ಶಾಸಕರನ್ನು ಬಿಜೆಪಿ ತನ್ನ ಪಕ್ಷಕ್ಕೆ ಸೆಳೆದುಕೊಂಡು ಈ ಉಪಚುನಾವಣೆಗಳಿಗೆ ಕಾರಣವಾಯಿತು. ಜೆಡಿಎಸ್ ನ ಮದ್ದೂರು ಶಾಸಕ ಸಿದ್ಧರಾಜು ಹಠಾತ್ ಮರಣದಿಂದ ಎಂಟನೆ ವಿಧಾನಸಭೆ ಕ್ಷೇತ್ರ ಖಾಲಿಯಾಗಿ ಉಳಿಯಿತು. ಈಗ ಈ ಎಂಟು ಕ್ಷೇತ್ರಗಳು ಉಪಚುನಾವಣೆಗಾಗಿ ತ್ರಿಕೋಣ ಸ್ಪರ್ಧೆ ಎದುರಿಸಲಿವೆ.
ಆರು ಸ್ಥಾನಗಳ ನಿರೀಕ್ಷೆಯಲ್ಲಿ ಬಿಜೆಪಿ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈಗಾಗಲೇ ಈ ಎಂಟು ವಿಧಾನಸಭೆ ಕ್ಷೇತ್ರಗಳಲ್ಲಿ ಪ್ರವಾಸಿ ಮಾಡಿ ಬಂದಿದ್ದು , ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಘೋಷಿಸಿ ಮತದಾರರನ್ನು ಸೆಳೆದಿದ್ದಾರೆ. ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಸಹ ಸಿದ್ಧವಾಗಿದೆ. ಆದರೆ ತುರುವೆಕೆರೆ ವಿಧಾನಸಭೆ ಕ್ಷೇತ್ರಕ್ಕೆ ನಟ ಜಗ್ಗೇಶ್ ಅವರನ್ನು ಕಣಕ್ಕೆ ಇಳಿಸಬೇಕೆ ಬೇಡವೆ ಎಂಬ ಬಗ್ಗೆ ಇನ್ನೂ ದೃಢ ಅಭಿಪ್ರಾಯಕ್ಕೆ ಬಂದಿಲ್ಲ. ಉಪಚುನಾವಣೆಯಲ್ಲಿ ಐದು ಅಥವಾ ಆರು ಸ್ಥಾನಗಳನ್ನು ಗೆಲ್ಲಲೇ ಬೇಕೆಂಬ ನಿರೀಕ್ಷೆಯಲ್ಲಿ ಬಿಜೆಪಿ ಇದೆ. ಆದರೆ ಎಲ್ಲ ಎಂಟು ಸ್ಥಾನಗಳನ್ನು ಗೆದ್ದೆ ಗೆಲ್ಲುತ್ತೀವಿ ಎಂಬ ಭರವಸೆ ಬಿಜೆಪಿ ನಾಯಕರದ್ದು.
ಕಾಂಗ್ರೆಸ್ ಗೆ ದೊಡ್ಡ ಸವಾಲು
ಉಪಚುನಾವಣೆಯಲ್ಲಿ ಗೆಲುವು ಸಾಧಿಸುವುದು ಕಾಂಗ್ರೆಸ್ ಪಕ್ಷಕ್ಕೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಹೊಸದಾಗಿ ಆಯ್ಕೆಯಾದ ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಹಾಗೂ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ದೇಶಪಾಂಡೆ ಅವರ ತವರು ಜಿಲ್ಲೆ ಉತ್ತರಕನ್ನಡದ ಒಂದು ವಿಧಾನಸಭೆ ಕ್ಷೇತ್ರದಲ್ಲೂ ಉಪಚುನಾವಣೆ ನಡೆಯುತ್ತಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಒಟ್ಟಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಲೇ ಬೇಕೆಂಬ ಛಲದಲ್ಲಿ ಈ ಹೊಸ ಸಾರಥಿಗಳು ಪಣ ತೊಟ್ಟಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಕಾಂಗ್ರೆಸ್,ಜೆಡಿಎಸ್ ಹೊಂದಾಣಿಕೆ ನಾಚಿಕೆಗೇಡು:ಡಿವಿಎಸ್












Click it and Unblock the Notifications