ಸಭೆಯಲ್ಲಿ ಬಿಜೆಪಿ ಉಪಚುನಾವಣೆಗೆ ರಣತಂತ್ರ
ಬೆಂಗಳೂರು, ಸೆ.13: ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಎರಡನೇ ದಿನದ ಕಲಾಪದಲ್ಲಿ ರಾಜ್ಯ ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು.
ಸಭೆಯಲ್ಲಿ ಬಿಜೆಪಿ ಸರ್ಕಾರ ಕೆಲ ದಿನಗಳ ಹಿಂದೆ ಮಾಡಿದ ಆಪರೇಷನ್ ಕಮಲ ಪ್ರಮುಖ ವಿಷಯವಾಗಿತ್ತು. ಸುಭದ್ರ ಸರ್ಕಾರದ ಅಸ್ತಿತ್ವಕ್ಕಾಗಿ ರಾಜ್ಯ ನಾಯಕರು ಕಂಡುಕೊಂಡ ಹೊಸ ಮಾರ್ಗ ಆಪರೇಷನ್ ಕಮಲ. ಈ ಕುರಿತು ರಾಜ್ಯಾಧ್ಯಕ್ಷ ಡಿ.ವಿ.ಸದಾನಂದ ಗೌಡ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಪರೇಷನ್ ಕಮಲದ ಬೆಳವಣಿಗೆ ಕುರಿತು ಸಭೆಗೆ ತಿಳಿಸಿದರು. ಉಪಚುನಾವಣೆಯಲ್ಲಿ ಎಲ್ಲ ಸ್ಥಾನಗಳನ್ನು ಗೆಲ್ಲುವ ಮೂಲಕ ಪೂರ್ಣ ಬಹುಮತ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರ್ಯತಂತ್ರಗಳ ಬಗ್ಗೆ ಚರ್ಚೆ ನಡೆಯಿತು. ಉಪಚುನಾವಣೆಯಲ್ಲಿ ಪಕ್ಷ ಗೆಲ್ಲಲು ಎಲ್ಲ ರೀತಿಯ ತಂತ್ರಗಳನ್ನು ಅನುಸರಿಸಲು ಚರ್ಚಿಸಲಾಗಿದೆ.
ಮುಂದಿನ ಲೋಕಸಭೆ ಚುನಾವಣೆ ದೃಷ್ಟಿಯಿಂದ ಈ ಉಪಚುನಾವಣೆ ಗೆಲುವು ಅತಿ ಮುಖ್ಯ ಎಂದು ಕಾರ್ಯಕಾರಿಣಿ ಸಭೆಯಲ್ಲಿ ಹೆಚ್ಚಿನ ಮಹತ್ವ ನೀಡಲಾಗಿತ್ತು ಎಂದು ಉನ್ನತ ಮೂಲಗಳು ತಿಳಿಸಿವೆ. ರಾಜ್ಯದ ಉಪಚುನವಣೆ ಜೊತೆಗೆ 6 ರಾಜ್ಯಗಳ ವಿಧಾನಸಭೆ ಚುನಾವಣೆಗೆ ರಣನೀತಿ ಬಗ್ಗೆ ಸಹ ಇಂದಿನ ಕಾರ್ಯಕಾರಿಣಿಯಲ್ಲಿ ಚರ್ಚಿಸಲಾಗಿದೆ.
ಶನಿವಾರ ಸಂಜೆ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಬಿಜೆಪಿಯ ಸಾರ್ವಜನಿಕ ಸಭೆ ನಡೆಯಲಿದ್ದು ಈ ಮೂಲಕ ಎಲ್.ಕೆ.ಅಡ್ವಾಣಿ ಸಾರ್ವಜನಿಕರನ್ನು ಉದ್ದೇಶಿಸಿ ಮಹತ್ವದ ಭಾಷನ ಮಾಡಲಿದ್ದಾರೆ. ಹಾಗಾಗಿ ಇಂದಿನ ಸಭೆಯನ್ನು ಕೆಲ ಗಂಟೆಗಳ ಮುಂಚಿತವಾಗಿಯೇ ಮುಗಿಸಲಾಯಿತು ಎಂದು ಮೂಲಗಳು ತಿಳಿಸಿವೆ.
ವಿಜಯ ಸಂಕಲ್ಪ ಯಾತ್ರೆ ಶುರು
ನಗರದ ಬಸವನಗುಡಿ ನ್ಯಾಷನಲ್ ಹೈಸ್ಕೂಲು ಮೈದಾನದಲ್ಲಿ ಶನಿವಾರ ಸಂಜೆ ಬಿಜೆಪಿಯ ಸಂಕಲ್ಪ ಯಾತ್ರೆ ಶುರುವಾಗಿದ್ದು ರಾಜ್ಯಾದ್ಯಂತ ಲಕ್ಷಾಂತರ ಜನಸಾಗರ ಹರಿದುಬಂದಿದೆ. ದಾಸರಹಳ್ಳಿ ವಿಧಾನಸಭೆ ಕ್ಷೇತ್ರದಿಂದ ಜನರನ್ನು ಕರೆದೊಯ್ಯಲು ಶಾಸಕ ಎಸ್.ಮುನಿರಾಜು 60 ಬಸ್ಸುಗಳು, 80 ಟೆಂಪೋಗಳು ಹಾಗೂ 100 ಕಾರುಗಳನ್ನು ವ್ಯವಸ್ಥೆ ಮಾಡಿದ್ದರು.
ಬೆಂಗಳೂರಿನ ವಿವಿಧ 17 ವಿಧಾನಸಭೆ ಕ್ಷೇತ್ರಗಳಿಂದಲೂ ಜನ ಸಾಗರ ಹರಿದು ಬರುತ್ತಿದೆ. ನ್ಯಾಷನಲ್ ಹೈಸ್ಕೂಲು ಮೈದಾನದಲ್ಲಿ ಬೃಹತ್ ವೇದಿಕೆ ನಿರ್ಮಿಸಲಾಗಿದೆ. ಇದೊಂದು ರಾಷ್ಟ್ರೀಯ ಕಾರ್ಯಕ್ರಮವಾಗಿರುವ ಕಾರಣ ಮೈದಾನದ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತನ್ನು ಮಾಡಲಾಗಿದೆ. ಸಮಾರಂಭದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್, ನಾಯಕರಾದ ವೆಂಕಯ್ಯ ನಾಯ್ಡು, ಅನಂತಕುಮಾರ್, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯಾಧ್ಯಕ್ಷ ಡಿ.ವಿ.ಸದಾನಂದಗೌಡ ಸೇರಿದಂತೆ ರಾಷ್ಟ್ರಮುಖಂಡರು, ರಾಜ್ಯ ಮುಖಂಡರು, ವಿವಿಧ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.
ಸೋಮಣ್ಣ-ಅಡ್ವಾಣಿ ಮಾತುಕತೆ?
ವಿಧಾನಸೌಧದಲ್ಲಿ ಬಿಜೆಪಿ ಏರ್ಪಡಿಸಿದ್ದ ಔತಣ ಕೂಟದಲ್ಲಿ ವಿರೋಧ ಪಕ್ಷದ ಹಲವಾರು ನಾಯಕ ಹಾಜರಾಗಿದ್ದರು. ಈ ಸಂದರ್ಭದಲ್ಲಿ ಸೋಮಣ್ಣ ಅವರು ಅಡ್ವಾಣಿ ಅವರನ್ನು ಭೇಟಿಯಾದ ಬಗ್ಗೆ ಊಹಾ ಪೋಹಗಳು ಎದ್ದಿವೆ.ಈ ಕುರಿತು ಶಾಸಕ ಸೋಮಣ್ಣ ಪ್ರತಿಕ್ರಿಯಿಸುತ್ತಾ, ಇದೆಲ್ಲ ಶುದ್ಧ ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ. ಸೋಮಣ್ಣ ಬಿಜೆಪಿಗೆ ಸೇರ್ಪಡೆಯಾಗುತ್ತಾರೆಂಬ ಬಗ್ಗೆ ಇದ್ದ ಎಲ್ಲ ವದಂತಿಗಳನ್ನು ಅವರು ನಿರಾಕರಿಸಿದ್ದಾರೆ. ಮುಖ್ಯಮಂತ್ರಿಗಳ ಆಹ್ವಾನದ ಮೇರೆಗಷ್ಟೇ ನಾವು ಔತಣ ಕೂಟಕ್ಕೆ ಭೇಟಿ ಕೊಟ್ಟಿದ್ದಾಗಿ ತಿಳಿಸಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications