ಇನ್ಮುಂದೆ ಹೊಟೇಲ್ ನ ತಿಂಡಿಗಳ ಬೆಲೆ ಹೆಚ್ಚಳ
ಬೆಂಗಳೂರು, ಜು. 31 : ಹಣದುಬ್ಬರದ ಬಿಸಿಯಿಂದಾಗಿ ಹೊಟೇಲ್ ಮಾಲೀಕರು ತಿಂಡಿ ತಿನಿಸುಗಳ ದರವನ್ನು ಪರಿಷ್ಕರಿಸಲು ನಿರ್ಧರಿಸಿವೆ. ಈ ಮೂಲಕ ಸಾರ್ವಜನಿಕರ ಜೇಬಿಗೆ ಮತ್ತಷ್ಟು ಕತ್ತರಿ ಬೀಳುವುದು ಖಾತರಿಯಾಗಿದೆ. ಹಣದುಬ್ಬರದಿಂದಾಗಿ ತರಕಾರಿ ಬೆಲೆಗಳಲ್ಲಿ ಹೆಚ್ಚಳವಾಗಿದ್ದರ ಪರಿಣಾಮ ಅನಿವಾರ್ಯವಾಗಿ ದರ ಹೆಚ್ಚಸಲೇಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಬೃಹತ್ ಬೆಂಗಳೂರು ಹೊಟೇಲ್ ಮಾಲೀಕರ ಸಂಘ ತಿಳಿಸಿದೆ. ಕನಿಷ್ಠ 50 ಪೈಸೆಯಿಂದ 2 ರುಪಾಯಿಯವರೆಗೆ ದರವನ್ನು ಹೆಚ್ಚಿಸಲು ಸಂಘ ಚಿಂತನೆ ನಡೆಸಿದೆ.
ಇತ್ತೀಚಿನ ದಿನಗಳಲ್ಲಿ ಹೊಟೇಲ್ ನಡೆಸುವುದು ದೊಡ್ಡ ಸಮಸ್ಯೆಯಾಗಿದೆ. ಒಂದಡೆ ಹಣದುಬ್ಬರ ಹೊಡೆತದಿಂದ ನಮ್ಮ ಜೇಬಿಗೆ ಬಾರಿ ಕತ್ತರಿ ಬೀಳತೊಡಗಿದೆ. ನೀರು, ವಿದ್ಯುತ್, ಹೊಟೇಲ್ ನಲ್ಲಿ ಕೆಲಸ ಮಾಡುವವರು ಎಲ್ಲರಿಗೂ ಹಣ ನೀಡಬೇಕು. ಈ ಹಿನ್ನೆಲೆಯಲ್ಲಿ ಶೀಘ್ರದಲ್ಲಿ ಬೃಹತ್ ಬೆಂಗಳೂರು ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಹೊಟೇಲ್ ಆಯಾ ಪ್ರದೇಶಕ್ಕೆ ಅನುಗುಣವಾಗಿ ದರವನ್ನು ಏರಿಸಿಕೊಳ್ಳಲು ನಿರ್ಧರಿಸಿವೆ.
ಈ ಕುರಿತು ಪ್ರತಿಕ್ರಿಯಿಸಿರುವ ಬೃಹತ್ ಬೆಂಗಳೂರು ಹೊಟೇಲ್ ಮಾಲೀಕರ ಸಂಘಧ ಅಧ್ಯಕ್ಷ ಕೆ.ಎನ್.ವಾಸುದೇವ್ ಅಡಿಗ, ಹಣದುಬ್ಬರದಿಂದ ತರಕಾರಿಯಿಂದ ಹಿಡಿದು ಹೊಟೇಲ್ ಬೇಕಿರುವ ಅಗತ್ಯ ವಸ್ತುಗಳ ಬೆಲೆ ಇಂದು ಗಗನಕ್ಕೆ ಮುಟ್ಟಿವೆ. ಇದರಿಂದಾಗಿ ನಮಗೆ ಭಾರಿ ಹೊರೆಯಾಗತೊಡಗಿದೆ. ದರ ಏರಿಸದೆ ಬೇರೆ ದಾರಿಯೇ ಕಾಣುತ್ತಿಲ್ಲ. ಆದ್ದರಿಂದ ಆಯಾ ಪ್ರದೇಶಕ್ಕೆ ಅನುಗುಣವಾಗಿ ದರವನ್ನು ಹೊಟೇಲ್ ಮಾಲೀಕರಿಗೆ ನಿಗದಿಪಡಿಸಿಕೊಳ್ಳಲು ಸೂಚನೆ ನೀಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಇದಲ್ಲದೆ ಬಿಬಿಎಂಪಿ ಕೂಡಾ ನಮ್ಮ ಗಧಾಪ್ರಹಾರ ನಡೆಸಿದ್ದು, ಹೊಟೇಲ್ ಗಳಿಂದ ಹೊರಬರುವ ತ್ಯಾಜ್ಯ ವಸ್ತುಗಳ ಮೇಲೆ ಬಿಬಿಎಂಪಿ ಪ್ರತಿ ಕೆಜಿಗೆ 1 ರುಪಾಯಿ ಸೆಸ್ ನೀಡಬೇಕಾಗಿದೆ. ಈ ಎಲ್ಲ ಕಾರಣಗಳಿಂದ ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂದು ಅವರು ಹೇಳಿದರು. ಅಕ್ಕಿ, ಬೇಳೆ, ಕಾಳು, ಎಣ್ಣೆ ಬೆಲೆಗಳು ಮೊದಲಿಗಿಂತ ಎರಡುಪಟ್ಟು ಹೆಚ್ಚಾಗಿವೆ. ಅದರ ಹೊಟೇಲ್ ಬಾಡಿಗೆಯೂ ಕೂಡಾ ಹೆಚ್ಚಾಗಿದೆ ಎಲ್ಲ ಗಮನದಲ್ಲಿಸಿಕೊಂಡು ಈ ಕ್ರಮಕ್ಕೆ ಮುಂದಾಗಿರುವುದಾಗಿ ಅಡಿಗ ಸ್ಪಷ್ಟಪಡಿಸಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications