ರಾಜ್ಯದಲ್ಲಿ ನಿತ್ಯ ಅರ್ಧ ಗಂಟೆ ಲೋಡ್ ಶೆಡ್ಡಿಂಗ್
ಬೆಂಗಳೂರು, ಜು. 15 : ರಾಯಚೂರು ಮತ್ತು ಶರಾವತಿ ವಿದ್ಯುತ್ ಕೇಂದ್ರಗಳಲ್ಲಿ ಉತ್ಪಾದನೆ ಕಡಿಮೆಗೊಂಡಿರುವ ಹಿನ್ನಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಅರ್ಧ ಗಂಟೆಗಳ ಕಾಲ ಅನಿಯಮಿತ ಲೋಡ್ ಶೆಡ್ಡಿಂಗ್ ಜಾರಿಗೆ ತರಲಾಗಿದೆ.
ರಾಯಚೂರಿನಲ್ಲಿ ಈಗಾಗಲೇ ಒಂದು ಘಟಕ ವಾರ್ಷಿಕ ನಿರ್ವಹಣೆ ಸ್ಥಿತಿಯಲ್ಲಿದೆ. ಇಂದು ಮತ್ತೊಂದು ಘಟಕದ ಸ್ಥಗಿತಗೊಂಡಿರುವುರಿಂದ ಒಟ್ಟು 420 ಮೆಗಾವ್ಯಾಟ್ ವಿದ್ಯುತ್ ಕೊರತೆ ಉಂಟಾಯಿತು. ಇದಲ್ಲದೆ ಶರಾವತಿಯಲ್ಲಿ ಇನ್ನು 10 ದಿನಗಳಿಗೆ ಆಗುವಷ್ಟು ನೀರಿನ ಸಂಗ್ರಹವಿದೆ. ನಾಗಝರಿ ಜಲ ವಿದ್ಯುತ್ ಕೇಂದ್ರದಲ್ಲಿ ಒಂದು ಘಟಕ ಈಗಾಗಲೇ ಸ್ಥಗಿತಗೊಂಡಿದೆ. ಕದ್ರಾ ಮತ್ತು ಕೊಡಸಳ್ಳಿ ಕೇಂದ್ರಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿದ್ದು, ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಲಾಗಿದೆ. ಈ ಪರಿಸ್ಥಿತಿ ಇನ್ನು ಕೆಲ ದಿನಗಳ ಕಾಲ ಮುಂದುವರೆಯಲಿದೆ ಎಂದು ಕೆಪಿಟಿಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಭಾರತದ ಯಾವುದೇ ಭಾಗದಲ್ಲಿ ಮಳೆಯಾದರೂ ವಿದ್ಯುತ್ ಕೊರತೆ ಕಡಿಮೆ ಮಾಡಲು ಸಾಧ್ಯವಿದೆ ಎಂಬುದು ಅಧಿಕಾರಿಗಳ ಅಭಿಪ್ರಾಯವಾಗಿದೆ. ಇದೇ ಪರಿಸ್ಥಿತಿ ಮುಂದುವರೆದಲ್ಲಿ ಮುಂದಿನವಾರದಿಂದ ಕೆಲವೆಡೆ ವಿದ್ಯುತ್ ಕೊರತೆ ಉಂಟಾಗಲಿದೆ ಎಂದು ಅವರು ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications