ಮಾಜಿ ಶಾಸಕ ಎ.ಆರ್. ಕೃಷ್ಣಮೂರ್ತಿ ಬಿಜೆಪಿ ಸೇರ್ಪಡೆ
ಬೆಂಗಳೂರು, ಜು. 15 : ಬಿಜೆಪಿ ನಾಯಕರು 'ಆಪರೇಶನ್ ಕಮಲ' ನಿಲ್ಲದು ಎಂದು ಹೇಳಿಕೆ ನೀಡಿರುವ ಬೆನ್ನಲ್ಲೇ ಜೆಡಿಎಸ್ ನ ಮತ್ತೊಂದು ವಿಕೆಟ್ ಪತನಗೊಂಡಿದೆ. ಸಂತೇಮಾರನಹಳ್ಳಿ ಕ್ಷೇತ್ರದ ಮಾಜಿ ಶಾಸಕ ಹಾಗೂ ಮಾಜಿ ರಾಜ್ಯಪಾಲ ರಾಚಯ್ಯ ಅವರ ಪುತ್ರ ಎ.ಆರ್. ಕೃಷ್ಣಮೂರ್ತಿ ಇಂದು ಬಿಜೆಪಿ ಸೇರ್ಪಡೆಗೊಂಡಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದಗೌಡ ಸಮ್ಮುಖದಲ್ಲಿ ಮಂಗಳವಾರ ಕೃಷ್ಣಮೂರ್ತಿ ಸೇರಿದಂತೆ ಕ್ಷೇತ್ರದ ಅನೇಕ ಮುಖಂಡರು ಅಧಿಕೃತವಾಗಿ ಬಿಜೆಪಿ ಸೇರ್ಪಡೆಗೊಂಡರು. ಕಳೆದ ಕೆಲ ದಿನಗಳಿಂದ ಈ ಬಗ್ಗೆ ಸುದ್ದಿ ದಟ್ಟವಾಗಿ ಹಬ್ಬಿತ್ತು. ಮಾಜಿ ರಾಜ್ಯಪಾಲ ರಾಚಯ್ಯ ಅವರ ಪುತ್ರ ಕೃಷ್ಣಮೂರ್ತಿ ಕ್ಷೇತ್ರದಲ್ಲಿ ಉತ್ತಮ ಹೆಸರಿರುವ ವ್ಯಕ್ತಿ ಹಾಗೂ ಶೋಷಿತ ವರ್ಗಕ್ಕೆ ಸೇರಿದ ನಾಯಕ ಬೇರೆ. ಈ ಎಲ್ಲ ಲೆಕ್ಕಾಚಾರ ಹಾಕಿರುವ ಬಿಜೆಪಿ ನಾಯಕರು ಕೃಷ್ಣಮೂರ್ತಿ ಅವರಿಗೆ ಗಾಳ ಬೀಸಿ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಮೈಸೂರು ಭಾಗದಲ್ಲಿ ಬಿಜೆಪಿ ಮತ್ತಷ್ಟು ಭದ್ರ ಸ್ಥಿತಿಗೆ ತಲುಪಿದಂತಾಯಿತು.
ಶಿವರಾಂ ಬಿಜೆಪಿಗೆ ?
ಮಾಜಿ ಪ್ರಧಾನಿ ದೇವೇಗೌಡರ ಕಡು ವೈರಿ ಎಂದೇ ಹೆಸರಾಗಿರುವ ಕಾಂಗ್ರೆಸ್ ನಾಯಕ ಶಿವರಾಂ ಶೀಘ್ರದಲ್ಲಿ ಬಿಜೆಪಿ ಸೇರಲಿದ್ದಾರೆ. ಮುಂಬರುವ ಲೋಕಸಭೆ ಕ್ಷೇತ್ರದಲ್ಲಿ ಹಾಸನ ಕ್ಷೇತ್ರದ ಬಿಜೆಪಿ ಟಿಕೆಟ್ ನೀಡಿದರೆ ಮಾತ್ರ ಸೇರ್ಪಡೆಯಾಗುವುದಾಗಿ ಶಿವರಾಂ ಪಟ್ಟು ಹಿಡಿದಿದ್ದಾರೆ. ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯುವುದು ಎನ್ನುವ ಲೆಕ್ಕಾಚಾರದಲ್ಲಿ ಬಿಜೆಪಿ ನಾಯಕರು ಮಗ್ನರಾಗಿದ್ದು, ಶಿವರಾಂ ಪಕ್ಷ ಸೇರಿದರೆ ದೇವೇಗೌಡರಿಗೆ ಈ ಮೂಲಕ ತಕ್ಕ ಪಾಠ ಕಲಿಸಬಹುದು ಎನ್ನುವ ದೂರಾಲೋಚನೆ ಈ ನಾಯಕರಲ್ಲಿ ಮೂಡಿದೆ. ಆದ್ದರಿಂದ ಶಿವರಾಂ ಅವರನ್ನು ಹೇಗಾದರೂ ಮಾಡಿ ಪಕ್ಷಕ್ಕೆ ಸೆಳೆಯಲು ಪ್ರಯತ್ನ ನಡೆಸಿದ್ದಾರೆ. ಆಪರೇಷನ್ ಕಮಲ ಕಾರ್ಯಚರಣೆಯನ್ನು ಮುಂದುವರೆಸಿರುವ ಬಿಜೆಪಿ ನಾಯಕರ ಬೇಟೆಗೆ ಕಾಂಗ್ರೆಸ್ ಮತ್ತು ಜೆಡಿಎಸ್‌ನ ಕೆಲ ನಾಯಕರು ಬಿಜೆಪಿ ಸೇರಲಿದ್ದಾರೆ ಎನ್ನಲಾಗುತ್ತಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications