ಹುಸ್ಕೂರ್ ಗೆ 800ಶೌಚಾಲಯ: ಬಯೋಕಾನ್ ಕೊಡುಗೆ
ಬೆಂಗಳೂರು, ಮೇ 28: ಬಯೋಕಾನ್ ಫೌಂಡೇಶನ್ ಐರಿಷ್ ಏಯ್ಡ್ ಸ್ಯಾನಿಟೇಶನ್ ಯೋಜನೆಯ ಅಡಿಯಲ್ಲಿ ಆನೇಕಲ್ ವ್ಯಾಪ್ತಿಯ ಹುಸ್ಕೂರ್ ಗ್ರಾಮ ಪಂಚಾಯತಿಯ ಗ್ರಾಮಗಳಲ್ಲಿ ಸುಮಾರು 800 ಶೌಚಾಲಯಗಳನ್ನು ನಿರ್ಮಿಸಲಾಗುವುದು ಎಂದು ಬಯೋಕಾನ್ ಪ್ರತಿಷ್ಠಾನದ ಅಧ್ಯಕ್ಷೆ ಕಿರಣ್ ಮಜುಂದಾರ್ ಷಾ ಹೇಳಿದ್ದಾರೆ.
ಇತ್ತೀಚೆಗೆ ನಗರದ ಹೊರವಲಯದ ಹೆಬ್ಬಗೋಡಿ ಸಮೀಪ ಐರಿಷ್ ಫೌಂಡೇಶನ್ ಸಹಯೋಗದೊಂದಿಗೆ ಪ್ರಾರಂಭಿಸಲಾಗಿರುವ ಸಮಾಜ ಕಲ್ಯಾಣ ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದ ಕಿರಣ್ ಅವರು,ಈಗಾಗಲೇ 220 ಶೌಚಾಲಯಗಳ ಕೆಲಸ ಮುಕ್ತಾಯವಾಗಿದೆ. ಆಗಸ್ಟ್ ಅಂತ್ಯದ ವೇಳೆಗೆ ಎಲ್ಲಾ ಕಾಮಗಾರಿಗಳು ಪೂರ್ಣವಾಗಲಿದೆ. ಪ್ರತಿ ಶೌಚಾಲಯಕ್ಕೆ 7,300 ರು ಖರ್ಚಾಗುತ್ತದೆ. ಬಡತನದ ರೇಖೆಗಿಂತ ಕೆಳಗಿರುವ ಪ್ರತಿ ಕುಟುಂಬಕ್ಕೆ 1,200 ರುಗಳನ್ನು ಸರ್ಕಾರ ನೀಡುತ್ತಿದೆ ಎಂದರು.
ಗ್ರಾಮದ ಪ್ರತಿ ಮನೆಯವರಿಂದ ಕೇವಲ ಸಾವಿರ ರುಪಾಯಿಗಳನ್ನು ಪಡೆಯಲಾಗುತ್ತಿದ್ದು, ಉಳಿದ ಹಣವನ್ನು ಐರಿಷ್ ಹಾಗೂ ಬಯೋಕಾನ್ ಫೌಂಡೇಶನ್ ಭರಿಸಲಿದೆ. ವಿಶ್ವಸಂಸ್ಥೆ 2008 ಇಸವಿಯನ್ನು 'ನೈರ್ಮಲೀಕರಣ ವರ್ಷ' ಎಂದು ಘೋಷಿಸಿದೆ. ಕರ್ನಾಟಕ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲೀಕರಣ ಸಂಸ್ಥೆ ಹಾಗೂ ಸ್ಥಳೀಯ ಗ್ರಾಮ ಪಂಚಾಯತಿಯ ಮೂಲಕ ಗ್ರಾಮಸ್ಥರಿಗೆ ಶುಚಿತ್ವದ ಮಹತ್ವ ಕುರಿತು ಅರಿವು ಮೂಡಿಸಲಾಗುತ್ತದೆ. ಭಾರತದಲ್ಲಿ ಶೇ. 17 ರಷ್ಟು ಮಕ್ಕಳು ಮೂಲಭೂತ ಸೌಕರ್ಯಗಳ ಕೊರತೆಯಿಂದ ನ್ಯುಮೋನಿಯಾ, ಅತಿಸಾರ ಮುಂತಾದ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಆದ್ದರಿಂದ ಶುಚಿತ್ವ ಬಹುಮುಖ್ಯ ಎಂದು ಐರಿಷ್ ರಾಯಭಾರಿ ಕೀರೆನ್ ಡೌಲಿಂಗ್ ಹೇಳಿದರು.
(ದಟ್ಸ್ ಕನ್ನಡವಾರ್ತೆ)












Click it and Unblock the Notifications