ನಟಿ ಸ್ಮೃತಿ ಜತೆ ಪೊಲೀಸರ ಅಸಭ್ಯ ವರ್ತನೆ ಆರೋಪ
ಬೆಳಗಾವಿ, ಮೇ 21: ಕಿರುತೆರೆಯ ಜನಪ್ರಿಯ ನಟಿ ಹಾಗೂ ಬಿಜೆಪಿ ನಾಯಕಿ ಸ್ಮೃತಿ ಇರಾನಿ ಬೆಳಗಾವಿಗೆ ಪಕ್ಷದ ಪರ ಪ್ರಚಾರಕ್ಕೆ ಬಂದ ಸಂದರ್ಭದಲ್ಲಿ ಪೊಲೀಸರು ಅವರ ಜತೆ ಅಸಭ್ಯವಾಗಿ ವರ್ತಿಸಿದ್ದಾರೆಂದು ಬಿಜೆಪಿ ಆರೋಪಿಸಿದೆ.
ಭಾನುವಾರ ರಾತ್ರಿ ಸ್ಮೃತಿ ಇರಾನಿ ಬೆಳಗಾವಿಯಲ್ಲಿ ಪ್ರಚಾರ ಮುಗಿಸಿ ಗೋವಾಕ್ಕೆ ತೆರಳುವ ಸಂದರ್ಭದಲ್ಲಿ ಬೆಳಕವಾಡಿ ಠಾಣೆ ಅಧಿಕಾರಿಗಳು ಮತ್ತು ಸಿಬ್ಬಂದಿ ಪಾನಮತ್ತರಾಗಿ ಅವರ ವಾಹನ ನಿಲ್ಲಿಸಿ ಅಪಮಾನ ಮಾಡಿದರು. ಮಹಿಳಾ ಪೇದೆಗಳಿಲ್ಲದ ಸಂದರ್ಭದಲ್ಲಿ ದೈಹಿಕ ತಪಾಸಣೆ ನೆಪದಲ್ಲಿ ಅಶ್ಲೀಲವಾಗಿ ವರ್ತಿಸಿದರು. ಬಳಿಕ ಅವರನ್ನು ಖಡೇಬಜಾರ ಠಾಣೆಗೆ ಕರೆತಂದು ಒತ್ತಾಯಪೂರ್ವಕವಾಗಿ ಬಂಧಿಸಿಡಲಾಯಿತು ಎಂದು ಬಿಜೆಪಿ ಆರೋಪಿಸಿದೆ. ಈ ಬಗ್ಗೆ ಚುನಾವಣಾ ಅಧಿಕಾರಿಗಳಿಗೆ ದೂರು ಸಲ್ಲಿಸಿದೆ.
ಸ್ಮೃತಿ ಇರಾನಿ ಹಿಂದಿ ಕಿರುತೆರೆಯ "ಕ್ಯೂಂಕಿ ಕಭಿ ಸಾಸ್ ಬಿ ಕಭಿ ಬಹೂ ಥಿ" ಧಾರಾವಾಹಿಯ ತುಳಸಿ ಪಾತ್ರದ ಮೂಲಕ ಜನಪ್ರಿಯತೆ ಗಳಿಸಿ, ನಂತರ ಬಿಜೆಪಿ ಪಕ್ಷ ಸೇರಿದವರಾಗಿದ್ದಾರೆ.
(ದಟ್ಸ್ ಕನ್ನಡವಾರ್ತೆ)












Click it and Unblock the Notifications