ಕರುಣಾನಿಧಿ ನಿರ್ಧಾರಕ್ಕೆ ತಮಿಳರ ಆಕ್ರೋಶ
ಹೊಸೂರು, ಏ.5: ಹೊಗೇನಕಲ್ ಯೋಜನೆಯನ್ನು ತಾತ್ಕಾಲಿಕವಾಗಿ ನಿಲ್ಲಿಸುವುದಾಗಿ ಘೋಷಿಸಿರುವ ತಮಿಳುನಾಡು ಸರ್ಕಾರದ ನಿರ್ಧಾರವನ್ನು ತಮಿಳರು ತೀವ್ರವಾಗಿ ಖಂಡಿಸಿದ್ದಾರೆ. ಕರುಣಾನಿಧಿ ಅವರ ನಿರ್ಧಾರವನ್ನು ವಿರೋಧಿಸಿ ಹೊಸೂರಿನಲ್ಲಿ ಶನಿವಾರ ಸಂಪೂರ್ಣ ಬಂದ್ ಆಚರಿಸಲಾಯಿತು.
ಹಠಾತ್ ಬಂದ್ ಕಾರಣ ಹೊಸೂರು ಪಟ್ಟಣದಲ್ಲಿನ ಎಲ್ಲ ವ್ಯಾಪಾರ ವಹಿವಾಟುಗಳು, ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಯಿತು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ಎಲ್.ಕೆ.ಆಡ್ವಾಣಿ ಅವರ ಪ್ರತಿಕೃತಿಗಳನ್ನು ದಹಿಸಿ ಕರ್ನಾಟಕ ವಿರೋಧಿ ಘೋಷಣೆಗಳನ್ನು ಕೂಗಲಾಯಿತು.
ಹೊಗೇನಕಲ್ ಕಾಮಗಾರಿಯನ್ನು ತಮಿಳುನಾಡು ತಾತ್ಕಾಲಿಕವಾಗಿ ನಿಲ್ಲಿಸಿರುವುದರಿಂದ ರೊಚ್ಚಿಗೆದ್ದ ತಮಿಳರು ಹೊಸೂರಿನಲ್ಲಿ ಕೆಎಸ್‌ಆರ್‌ಟಿಸಿ ಬಸ್ ಒಂದನ್ನು ಸುಟ್ಟು ಹಾಕಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ಬರುವವರೆಗೂ ಹೊಸೂರು ಮತ್ತು ಕರ್ನಾಟಕ ನಡುವಿನ ವಾಹನ ಸಂಚಾರವನ್ನು ನಿಲ್ಲಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಹೊಸೂರಿನಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸುಟ್ಟಿರುವುದನ್ನು ಕರ್ನಾಟಕ ರಕ್ಷಣಾ ವೇದಿಕೆ ತೀವ್ರವಾಗಿ ಖಂಡಿಸಿದೆ. ಕನ್ನಡಿಗರ ಮೇಲಿನ ದಬ್ಬಾಳಿಕೆಯನ್ನು ಸಹಿಸುವುದಿಲ್ಲ. ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಕರವೇ ಎಚ್ಚರಿಸಿದೆ.
ಹೊಗೇನಕಲ್ ಯೋಜನೆಯನ್ನು ವಿರೊಧಿಸಿ ಪ್ರತಿಭಟಿಸಲು ಮುತ್ತಪ್ಪ ರೈ ನೇತೃತ್ವದ 'ಜೈ ಕರ್ನಾಟಕ' ಸಂಘಟನೆಯ 1000ಕ್ಕೂ ಅಧಿಕ ಕಾರ್ಯಕರ್ತರು ಕೊಳ್ಳೇಗಾಲ, ಮಲೆಮಹದೇಶ್ವರ ಬೆಟ್ಟದ ಮೂಲಕ ಹೊಗೇನಕಲ್‌ಗೆ ಶನಿವಾರ ಬರುತ್ತಿದ್ದಾರೆ. ಅವರು ಹೊಗೇನಕಲ್‌ಗೆ ಬಂದ ಕೂಡಲೆ ಅವರನ್ನು ಬಂಧಿಸುವುದಾಗಿ ಸೇಲಂನ ಪೊಲೀಸ್ ಸೂಪರಿಂಟೆಂಡೆಂಟ್ ಎಸ್.ಪಿ.ಭಾಸ್ಕರನ್ ತಿಳಿಸಿದ್ದಾರೆ.
(ಏಜೆನ್ಸೀಸ್)












Click it and Unblock the Notifications