ಸೋಮವಾರ ಕಬ್ಬು ಬೆಳೆಗಾರರ ಜೈಲ್ ಭರೋ
ಬೆಂಗಳೂರು, ಫೆ.16: ಕಬ್ಬಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ರಾಜ್ಯ ಸರ್ಕಾರದ ಧೋರಣೆಯನ್ನು ಪ್ರತಿಭಟಿಸಿ ಸೋಮವಾರ 'ಜೈಲ್ ಭರೋ' ಚಳುವಳಿ ಹಮ್ಮಿಕೊಂಡಿರುವುದಾಗಿ ರಾಜ್ಯ ರೈತ ಸಂಘದ ಅಧ್ಯಕ್ಷ ಕೆ.ಎಸ್.ಪುಟ್ಟಣ್ಣಯ್ಯ ಶನಿವಾರ ತಿಳಿಸಿದರು.
ಕಳೆದ ಹತ್ತು ತಿಂಗಳಿಂದ ರಾಜ್ಯದ ಕಬ್ಬು ಬೆಳೆಗಾರರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಕಬ್ಬು ಬೆಳೆಗೆ ಸೂಕ್ತ ಬೆಂಬಲ ಬೆಲೆ ನೀಡಬೇಕು. ಹಾಗೆಯೇ ಕಬ್ಬು ಬೆಳೆಗಾರರ ಮೇಲೆ ವಿಧಿಸುತ್ತಿರುವ ಮಾರಾಟ ತೆರಿಗೆಯನ್ನು ಹಿಂತೆಗೆದುಕೊಳ್ಳಬೇಕು ಎಂದು ರೈತ ಸಂಘ ಆಗ್ರಹಿಸಿದೆ.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕಬ್ಬು ಬೆಳೆಗಾರರ ಕಣ್ಣೊರೆಸುವ ತಂತ್ರ ಅನುಸರಿಸುತ್ತಿವೆ. ರಾಜಕೀಯ ಪಕ್ಷಗಳು ರೈತ ಸಮುದಾಯದ ಬಗ್ಗೆ ಬರೀ ಮೊಸಳೆ ಕಣ್ಣೀರು ಸುರಿಸುತ್ತಿವೆ ಎಂದು ಖೇದ ವ್ಯಕ್ತಪಡಿಸಿದರು ಪುಟ್ಟಣ್ಣಯ್ಯ. ಕರ್ನಾಟಕದ ಎಲ್ಲಾ ರೈತ ಸಂಘಗಳೂ ಒಂದಾಗಿ ರೈತರ ಸಮಸ್ಯೆಗಳ ವಿರುದ್ಧ ಹೋರಾಡಲಿವೆ. ಶೀಘ್ರದಲ್ಲೇ ರೈತರ ಸಮಾವೇಶ ಮಾಡಿ ಅವರ ಸಮಸ್ಯೆಗಳನ್ನು ಚರ್ಚಿಸಲಾಗುವುದು. ರೈತ ಮುಖಂಡರಾದ ಬಸವರಾಜ್ ಮತ್ತು ಕೋಡಿಹಳ್ಳಿ ಚಂದ್ರಶೇಖರ್ ಸಹಾ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.
(ದಟ್ಸ್‌ಕನ್ನಡ ವಾರ್ತೆ)












Click it and Unblock the Notifications