ಸಿದ್ಧು ವಿರುದ್ಧ ತಿರುಗಿ ಬಿದ್ದ ಒಡೆಯರ್
ಮೈಸೂರು, ಫೆ.2 : ಕಾಂಗ್ರೆಸ್ ನ ಚುನಾವಣಾ ಪ್ರಚಾರ ಹೊಣೆ ಹೊತ್ತಿರುವ ಸಿದ್ದರಾಮಯ್ಯ ವಿರುದ್ಧ ಕಾಂಗ್ರೆಸ್ ಪಾಳಯದಲ್ಲಿ ಮತ್ತೆ ವಿರೋಧ ಭುಗಿಲೆದ್ದಿದೆ.
ಸಿದ್ದು ನಾಯಕತ್ವದಿಂದ ಕಾಂಗ್ರೆಸ್‌ಗೆ ಯಾವುದೇ ಲಾಭವಿಲ್ಲ ಎಂದು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಹೈಕಮಾಂಡ್‌ಗೆ ದೂರು ಸಲ್ಲಿಸಿದ್ದಾರೆ. ಈ ಮೂಲಕ ಮೈಸೂರಿನಲ್ಲಿ ಸಿದ್ದು ವಿರೋಧ ಮತ್ತು ಕಾಂಗ್ರೆಸ್ ಭಿನ್ನಮತ ಮತ್ತೆ ಸ್ಪೋಟಗೊಂಡಂತಾಗಿದೆ.
ಮಾಜಿ ಉಪಮುಖ್ಯಮಂತ್ರಿ ಸಿದ್ಧರಾಮಯ್ಯ ಜೆಡಿಎಸ್ ಪಕ್ಷ ತೊರೆದಿದ್ದರೂ ಆ ಪಕ್ಷದ ಪ್ರಾಬಲ್ಯ ಇನ್ನೂ ಅವರಲ್ಲಿ ಉಳಿದುಕೊಂಡಿದೆ. ಹಳೇ ಮೈಸೂರು ಪ್ರಾಂತ್ಯದಲ್ಲಿ ಸಿದ್ಧು ವರ್ಚಸ್ಸು ಕಡಿಮೆಯಾಗುತ್ತಿದೆ. ಕಾಂಗ್ರೆಸ್‌ನಲ್ಲಿ ಸಿದ್ಧೂಗೆ ಹೆಚ್ಚಿನ ಬೆಂಬಲವಿಲ್ಲ ಎಂಬ ಅಂಶಗಳನ್ನು ಅಂಕಿ-ಸಂಖ್ಯೆಗಳ ಸಮೇತ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಒಡೆಯರ್ ಪತ್ರ ಬರೆದಿದ್ದಾರೆ.
ಡಿ.23ರಂದು ಆಯೋಜಿಸಿದ್ದ 'ನವ ಚೈತನ್ಯ ಸಮಾವೇಶ'ದಲ್ಲಿ ಸಿದ್ಧರಾಮಯ್ಯ ಹಾಗೂ ಮಾಜಿ ಸಚಿವ ಎಂ. ಮಹಾದೇವು ಮತ್ತವರ ಬೆಂಬಲಿಗರ ನಡುವೆ ಜಟಾಪಟಿ ನಡೆದಿತ್ತು. ಈಗ ಸಿದ್ಧರಾಮಯ್ಯ ಆಗಮನದಿಂದ ಪಕ್ಷಕ್ಕೆ ಒಳಿತಾಗಿಲ್ಲ ಎಂದು ಒಡೆಯರ್ ತಿರುಗಿ ಬಿದ್ದಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಸಜ್ಜಾಗುತ್ತಿರುವ ಹಂತದಲ್ಲೇ ಆಂತರಿಕ ಭಿನ್ನಮತ ಸ್ಫೋಟಗೊಂಡಿದೆ.
ಇತ್ತೀಚೆಗೆ ಸಿದ್ದರಾಮಯ್ಯ ಅವರ ಬೆಂಬಲಿಗರೂ ಕಾಂಗ್ರೆಸ್ ಸೇರಿದ್ದು ಮೂಲ ಕಾರ್ಯಕರ್ತರಿಗೆ ಇರುಸುಮುರುಸು ಮಾಡುತ್ತಿದೆ. ಸಿದ್ದರಾಮಯ್ಯ ಬೆಂಬಲಿಗರ ಪ್ರಾಬಲ್ಯ ಹೆಚ್ಚಿ ದಬ್ಬಾಳಿಕೆ ನಡೆಸಬಹುದೆಂಬ ಸಂದೇಹ ಕಾಡುತ್ತಿರುವುದೇ ಭಿನ್ನಮತಕ್ಕೆ ಕಾರಣ ಎಂದು ನಂಬಲರ್ಹ ಮೂಲಗಳಿಂದ ತಿಳಿದುಬಂದಿದೆ.
(ದಟ್ಸ್‌ಕನ್ನಡ ವಾರ್ತೆ)












Click it and Unblock the Notifications