ಮುರಳಿಧರನ್‌ಗೆ ಆಸ್ಟ್ರೇಲಿಯಾದಲ್ಲಿ ಮತ್ತೆ ಅವಮಾನ
ಹೋಬರ್ಟ್, ಫೆ.02 : ಆಸ್ಟ್ರೇಲಿಯಾ, ಭಾರತದ ಜೊತೆ ತ್ರಿಕೋಣ ಏಕದಿವಸೀಯ ಕ್ರಿಕೆಟ್ ಸರಣಿಗಾಗಿ ತೆರಳಿರುವ ಶ್ರೀಲಂಕಾದ ವಿಶ್ವದಾಖಲೆಯ ಆಫ್‌ಸ್ಪಿನ್ ಬೌಲರ್ ಮುತ್ತಯ್ಯ ಮುರಳಿಧರನ್ ಮೇಲೆ ಆಸ್ಟ್ರೇಲಿಯಾದ ಕ್ರಿಕೆಟ್ ಪ್ರಿಯರು ಮೊಟ್ಟೆ ಎಸೆದು ಅವಮಾನ ಮಾಡಿದ್ದಾರೆ.
ಶುಕ್ರವಾರ ರಾತ್ರಿ ಊಟ ಮುಗಿಸಿಕೊಂಡು ಹೊಟೇಲ್‌ಗೆ ಮರಳುತ್ತಿದ್ದಾಗ ಕೆಲಯುವಕರು ಮುರಳಿ ಸೇರಿದಂತೆ ಶ್ರೀಲಂಕಾದ ಕೆಲ ಆಟಗಾರರ ಮೇಲೆ ಬೈಗುಳದ ಮಳೆಸುರಿಸಿ ಮೊಟ್ಟೆ ಎಸೆದಿದ್ದಾರೆ. ಅದರಲ್ಲಿ ಒಂದು ಮೊಟ್ಟೆ ನೇರವಾಗಿ ಮುರಳಿ ಮುಖಕ್ಕೇ ತಾಗಿದೆ. ಆದರೆ, ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಹೆಚ್ಚಿನ ಅನಾಹುತ ತಡೆದಿದ್ದಾರೆ.
ಆಸ್ಟ್ರೇಲಿಯಾ ಮತ್ತು ಶ್ರೀಲಂಕಾದ ನಡುವಿನ ಗುಸುಮುಸು ಇಂದು ನಿನ್ನೆಯದಲ್ಲ. ಮುರಳಿ ಬೌಲ್ ಮಾಡದೇ ಚೆಂಡು ಎಸೆಯುತ್ತಾರೆಂದು ಡೆರಿಲ್ ಹೇರ್ ಬಾರಿಬಾರಿ ನೋಬಾಲ್ ಕೊಟ್ಟಿದ್ದು ಒಂದೆಡೆಯಾದರೆ 'ಲವರ್ ಬಾಯ್' ಶೇನ್ ವಾರ್ನ್‌ರ ಟೆಸ್ಟ್ ವಿಕೆಟ್ ದಾಖಲೆಯನ್ನು ಮರಳಿ ಧೂಳಿಪಟ ಮಾಡಿದ್ದು ಕ್ರಿಕೆಟಿಗರಲ್ಲಿ ಮಾತ್ರವಲ್ಲ ಕ್ರಿಕೆಟ್ ಪ್ರೇಮಿಗಳಲ್ಲಿಯೂ ವೈಮನಸ್ಯದ ಬೀಜ ಬಿತ್ತಿದೆ. ಕಳೆದ ಸರಣಿಯಲ್ಲಿ ಕೂಡ ಪ್ರೇಕ್ಷಕರು ಮುತ್ತಯ್ಯ ಮುರಳಿಧರನ್‌ರನ್ನು ಕಿಚಾಯಿಸಿದ್ದರು.
ಫೆ.3ರಿಂದ ಸರಣಿ ಪ್ರಾರಂಭ : ಕಾಮನ್ವೆಲ್ತ್ ಬ್ಯಾಂಕ್ ಏಕದಿನ ತ್ರಿಕೋಣ ಸರಣಿಯ ಮೊದಲ ಪಂದ್ಯ ಆಸ್ಟ್ರೇಲಿಯಾ ಮತ್ತು ಭಾರತದ ನಡುವೆ ಬ್ರಿಸ್ಬೇನ್‌ನಲ್ಲಿ ಭಾನುವಾರದಿಂದ ಪ್ರಾರಂಭವಾಗುತ್ತಿದೆ.
ಟೆಸ್ಟ್ ಸರಣಿ ಮತ್ತು ಟ್ವೆಂಟಿ 20 ಪಂದ್ಯದಲ್ಲಾದ ಸೋಲಿನಿಂದ ಕಂಗೆಟ್ಟಿರುವ ಭಾರತ ಹಾಗು ಹರ್‌ಭಜನ್‌ರನ್ನು ಜನಾಂಗ ನಿಂದನೆ ಆರೋಪದಿಂದ ಮುಕ್ತಮಾಡಿದ ಕಾರಣ ಬುಸುಗುಡುತ್ತಿರುವ ಆಸ್ಟ್ರೇಲಿಯಾ ಸೆಣಸಾಡಲಿವೆ.
ಮುಂಬರುವ ಪಂದ್ಯಗಳಲ್ಲಿಯೂ ಆಸ್ಟ್ರೇಲಿಯಾದ ಕ್ರಿಕೆಟ್ ಪ್ರೇಮಿಗಳು ಆಟಗಾರರಿಗೆ ಹೆಚ್ಚಿನ ಅಡೆತಡೆ ಒಡ್ಡಬಹುದೆಂಬ ಆತಂಕ ಶ್ರೀಲಂಕಾದ ಕ್ರಿಕೆಟ್ ಅಧಿಕಾರಿಗಳನ್ನು ಕಾಡುತ್ತಿದೆ.
(ಏಜೆನ್ಸೀಸ್)












Click it and Unblock the Notifications