ಸಂಸಾರ ಸಮೇತ ಅಮೆರಿಕಾಗೆ ನೀಲೇಕಣಿ ಗಂಟುಮೂಟೆ?
ಬೆಂಗಳೂರು, ಅ.19 : ಇನ್ಫೋಸಿಸ್ ಆಡಳಿತ ಮಂಡಳಿಯಲ್ಲಿ ಒಂದಿಷ್ಟು ಪ್ರಮುಖ ಬದಲಾವಣೆಗಳಾಗುತ್ತಿವೆ ಎಂಬ ಸುದ್ದಿ ಹೊಸೂರು ರಸ್ತೆಯಲ್ಲಿ ಸುಳಿದಾಡುತ್ತಿದೆ.ಐಟಿ ವಲಯದಲ್ಲಿನ ವರ್ತಮಾನಗಳ ಪ್ರಕಾರ, ಇನ್ಫೋಸಿಸ್ ಉಪಾಧ್ಯಕ್ಷ ನಂದನ್ ನೀಲೇಕಣಿ ಅವರು ತಮ್ಮ ಕಾರ್ಯಕ್ಷೇತ್ರವನ್ನು ಅಮೆರಿಕಾಗೆ ಬದಲಾಯಿಸುತ್ತಿದ್ದಾರೆ.
ವೃತ್ತಿ ಮತ್ತು ಕೌಟುಂಬಿಕ ಕಾರಣಗಳಿಂದ ಅವರು ಅಮೆರಿಕಾಗೆ ಗಂಟು ಮೂಟೆ ಕಟ್ಟುತ್ತಿದ್ದಾರೆ ಎಂದು ಇನ್ಫೊಸಿಸ್ ಕ್ಯಾಂಪಸ್ನಿಂದ ಸುದ್ದಿ ಹೊರಹೊಮ್ಮಿದೆ.
ನೀಲೇಕಣಿ ಪುತ್ರಿ ಜಾನ್ಹವಿ ಈಗಾಗಲೆ ಅಮೆರಿಕಾದಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಪುತ್ರ ನಿಹಾರ್ ಕೂಡ ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಾಗೆ ಹೋಗಬೇಕಾಗಿದೆ. ಈ ಕಾರಣಗಳೂ ನೀಲೇಕಣಿ, ತಮ್ಮ ಜಾಗ ಬದಲಿಸಲು ಕಾರಣಗಳಿರಬಹುದು ಎಂದು ಹೇಳಲಾಗುತ್ತಿದೆ.
ಯೂರೋಪಿಯನ್ ಮಾರುಕಟ್ಟೆಯನ್ನು ಕೇಂದ್ರವಾಗಿಟ್ಟುಕೊಂಡು ಕಂಪನಿ ಮುನ್ನಡೆಯಬೇಕು ಎಂಬ ಅಭಿಪ್ರಾಯ ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಅವರದು. ಶೇ.63ರಷ್ಟು ಆದಾಯ ಅಮೆರಿಕಾದಿಂದಲೇ ಇನ್ಫೋಸಿಸ್ ಗೆ ಬರುತ್ತಿದೆ. ಜೊತೆಗೆ ಇತ್ತೀಚೆಗಷ್ಟೇ ನಾಸ್ಡಾಕ್ (Nasdaq) 100ರಲ್ಲಿ ಇನ್ಫೋಸಿಸ್ ಒಂದು ಭಾಗವಾಗಿದೆ. ಹೀಗಾಗಿ ತನ್ನ ಬೇರುಗಳನ್ನು ಇನ್ನಷ್ಟು ಬಲಗೊಳಿಸಲು ಸಂಸ್ಥೆ ನಿರ್ಧರಿಸಿದೆ.
ನೀಲೇಕಣಿ ಅವರಿಗೆ ಅಮೆರಿಕಾದಲ್ಲಿ ಸುಮಾರು ಕಾಲ ಕೆಲಸ ಮಾಡಿದ ಅನುಭವ ಇದೆ. ಇಲ್ಲಿ ಅವರು ಉತ್ತಮ ಸಂಪರ್ಕಜಾಲ ಹೊಂದಿದ್ದಾರೆ. ಈ ಕಾರಣಗಳು ನೀಲೇಕಣಿ ಅವರನ್ನು ಅಮೆರಿಕಾಗೆ ವರ್ಗಾಯಿಸಲು ಕಾರಣವಿರಬಹುದು. ಸಿಇಒ ಆಗಿದ್ದ ನೀಲೇಕಣಿ, ಕಳೆದ ಆರು ತಿಂಗಳ ಹಿಂದಷ್ಟೇ ಇನ್ಫೋಸಿಸ್ ಸಂಸ್ಥೆಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
(ದಟ್ಸಕನ್ನಡ ವಾರ್ತೆ)












Click it and Unblock the Notifications